ಹೊಸನಗರ ; ನಗರಾಭಿವೃದ್ದಿ ಇಲಾಖೆಯ 2025ರ ಫೆ. 11ರ ಆದೇಶದಂತೆ ಪೌರಸಭೆ ಮತ್ತು ಮಹಾನಗರ ಪಾಲಿಕೆ ತೆರಿಗೆ ನಿಯಮಗಳಿಗೆ ರಾಜ್ಯ ಸರ್ಕಾರ ಸೂಕ್ತ ತಿದ್ದುಪಡಿ ತಂದು, ಹೊಸ ಅಧಿಸೂಚನೆ ಹೊರಡಿಸಿದ್ದು, ಪೌರಸಭೆ, ಮಹಾನಗರ ಪಾಲಿಕೆ, ಪಟ್ಟಣ ಪಂಚಾಯತಿ ವ್ಯಾಪ್ತಿಯ ಅನಧಿಕೃತ ಬಡಾವಣೆಗಳ ನಿವೇಶನ ಹಾಗೂ ಕಟ್ಟಡಗಳಿಗೆ ಬಿ-ಖಾತೆ ನೀಡಲು ಸುವರ್ಣಾವಕಾಶ ಕಲ್ಪಿಸಿಕೊಟ್ಟಿದೆ. ಇಂತಹ ಸುವರ್ಣ ಅವಕಾಶವನ್ನು ಜನತೆ ಸದ್ಬಳಕೆ ಮಾಡಿಕೊಳ್ಳುವಂತೆ ಪಟ್ಟಣ ಪಂಚಾಯತಿ ಅಧ್ಯಕ್ಷ ನಾಗಪ್ಪ ರೆಡ್ಡಿ ತಿಳಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ನಾಗಪ್ಪ ಮಾತನಾಡಿ, ದಿನಾಂಕ 2024ರ ಸೆ. 10ಕ್ಕೆ ಅಂತ್ಯಗೊಂಡಂತೆ ಕಂದಾಯ ಭೂಮಿಯಲ್ಲಿ ಅನಧಿಕೃತ ನಿರ್ಮಾಣ ಆಗಿರುವ ಬಡಾವಣೆಗಳಲ್ಲಿನ ನಿವೇಶನ ಅಥವಾ ಕಟ್ಟಡಗಳ ಆಸ್ತಿ ಮಾಲೀಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಬಿ-ಖಾತೆ ನೀಡಲು ಸರ್ಕಾರ ಅವಕಾಶ ಕಲ್ಪಿಸಿದೆ. ಇಂತಹ ಪ್ರಕರಣಗಳ ವ್ಯಾಪ್ತಿಗೆ ಬರುವ ಆಸ್ತಿ ಮಾಲೀಕರು ಅಗತ್ಯ ದಾಖಲೆಯೊಂದಿಗೆ ಕಚೇರಿ ಸಂಪರ್ಕಿಸಲು ಕೋರಿದರು.
ಮುಖ್ಯಾಧಿಕಾರಿ ಎಂ.ಎನ್. ಹರೀಶ್ ಮಾತನಾಡಿ, ಕಂದಾಯ ಭೂಮಿಯಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ನಿವೇಶನ, ಕಟ್ಟಡಕ್ಕೆ ಈ ವರೆಗೂ ಯಾವುದೇ ತರಹದ ಸೂಕ್ತ ಸರ್ಕಾರಿ ಅಧಿಕೃತ ದಾಖಲೆಗಳು ಆಸ್ತಿ ಮಾಲೀಕರಿಗೆ ಲಭ್ಯವಿಲ್ಲದ ಕಾರಣ ಸರ್ಕಾರ ಈ ಯೋಜನೆ ಜಾರಿಗೊಳಿಸಿದೆ.
ಬಿ-ಖಾತೆ ಹೊಂದ ಬಯಸುವ ಆಸ್ತಿ ಮಾಲೀಕರು, ಸ್ವತ್ತಿನ ಮಾಲೀಕತ್ವ ಸಾಬೀತು ಪಡಿಸುವ 2024ರ ಸೆ.10ರ ಪೂರ್ವದಲ್ಲಿ ನೊಂದಾಯಿತ ಮಾರಾಟ ಪತ್ರ/ದಾನ ಪತ್ರ/ವಿಭಾಗ ಪತ್ರ/ ಹಕ್ಕುಖುಲಾಸೆ ಪತ್ರ ಜೊತೆಯಲ್ಲಿ ಪ್ರಸಕ್ತ ಸಾಲಿನ ಋಣಭಾರ ಪ್ರಮಾಣಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ರಶೀದಿ, ಮಾಲೀಕರ ಫೋಟೋ, ಸ್ವತ್ತಿನ ಫೋಟೋ, ಮಾಲೀಕರ ಗುರುತಿನ ದಾಖಲೆ ಪ್ರತಿ ನೀಡಬೇಕಿದೆ. ಇಂತಹ ಆಸ್ತಿಗಳ ಮೇಲೆ ಮೊದಲ ಬಾರಿಗೆ ಎರಡು ಪಟ್ಟು ತೆರಿಗೆ ವಿಧಿಸಲಾಗುವುದು. ಬಿ-ಖಾತೆ ಹೊಂದಿದಲ್ಲಿ ಆಸ್ತಿಗೆ ಖಾತೆಯ ಸಂಖ್ಯೆ ನೀಡಲಾಗುವುದು ಅಲ್ಲದೆ, ಆಸ್ತಿ ಗುರುತಿಸುವುದು ಸುಲಭವಾಗಲಿದೆ. ಆಸ್ತಿ ಕಂಪ್ಯೂಟರೀಕರಣಗೊಂಡ ಬಳಿಕ ಉಪ ನೊಂದಣಿ ಕಚೇರಿಯಲ್ಲಿನ ಕಾವೇರಿ ತಂತ್ರಾಂಶಕ್ಕೆ ನೇರ ಲಿಂಕ್ ಹೊಂದಿ, ಆಸ್ತಿಯ ಮಾಲೀಕರಿಗೆ ಮಾರಾಟಕ್ಕೆ ಅವಕಾಶ ದೊರೆಯಲಿದೆ ಎಂದರು.

ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 2350 ಆಸ್ತಿಗಳಿದ್ದು, ಕೇವಲ 650 ಆಸ್ತಿಗಳು ಮಾತ್ರವೇ ಎ-ಖಾತೆ ಹೊಂದಿದ್ದು ಅಧಿಕೃತ ಮಾಲೀಕರಾಗಿದ್ದಾರೆ. ಉಳಿದ 1750 ಆಸ್ತಿಗಳು ಎ-ಖಾತೆ ಅಡಿಯಲ್ಲಿ ಶೀಘ್ರದಲ್ಲೇ ಸರ‍್ಪಡೆಗೊಳ್ಳಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ಇದಕ್ಕಾಗಿ ಪಂಚಾಯತಿ ಆಡಳಿತ ಸಮಿತಿ ಶೀಘ್ರವಾಗಿ ಈ-ಖಾತೆ ಅಂದೋಲನ ಹಮ್ಮಿಕೊಂಡಿದೆ. ಇ-ಖಾತೆ ಹೊಂದುವುದರಿಂದ ಆಸ್ತಿಯ ಸಂಪೂರ್ಣ ವಿವರಗಳು ಕಂಪ್ಯೂಟರೀಕರಣ ಆಗಲಿದ್ದು, ಯಾವುದೇ ಕಾರಣಕ್ಕೂ ಸ್ಥಳೀಯವಾಗಿ ಆಸ್ತಿಯ ವಿವರಗಳ ತಿದ್ದುಪಡಿಗೆ ಆವಕಾಶವೇ ಇಲ್ಲವಾಗಲಿದೆ. ಇಂತಹ ಜನಪರ ಯೋಜನೆಗಳ ಉಪಯೋಗವನ್ನು ಜನತೆ ಸದ್ಬಳಕೆ ಮುಂದಾಗುವ ಮೂಲಕ ತಮ್ಮ ಆಸ್ತಿಯ ಮೇಲಿನ ಹಕ್ಕನ್ನು ಪಡೆಯಲು ಯೋಜನೆ ಸಹಕಾರಿ ಆಗಲಿದೆ ಎಂದರು.
ಈ ವೇಳೆ ಪ.ಪಂ. ಉಪಾಧ್ಯಕ್ಷೆ ಚಂದ್ರಕಲಾ ನಾಗರಾಜ್ ಉಪಸ್ಥಿತರಿದ್ದರು.