ಹೊಸನಗರ ; ಇತ್ತೀಚಿನ ದಿನಗಳಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಆದ್ಯತೆ, ವಿಫುಲ ಅವಕಾಶಗಳಿವೆ. ಆದರೆ, ವಿದ್ಯಾರ್ಥಿಗಳು ಕಾಲಕ್ಕೆ ಅನುಗುಣವಾಗಿ ನಿರಂತರ ಅಧ್ಯಯನ ಶೀಲರಾಗುವುದು ಮುಖ್ಯವಾಗಿದೆ ಎಂದು ಬೆಂಗಳೂರು ಇಸ್ರೋ ಮಾಹಿತಿ ತಂತ್ರಜ್ಞಾನ ವಿಭಾಗದ ವಿಜ್ಞಾನಿ ಬೀರೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಕೊಡಚಾದ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗವು ಪ್ರಸಕ್ತ ಸಮಾಜದಲ್ಲಿ ಗ್ರಂಥಾಲಯ ಜ್ಞಾನದ ಪಾತ್ರ ಕುರಿತಂತೆ ಏರ್ಪಡಿಸಿದ್ದ ಒಂದು ದಿನದನ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಮಾನಗಳಲ್ಲಿ ನಾಗರೀಕತೆ ಜೊತೆಗೆ ತಂತ್ರಜ್ಞಾನ ಸಹ ಬೆಳೆಯುತ್ತಿದೆ. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರಗಳು ಇಂದು ಎಲ್ಲೆಡೆ ಹಾಸುಹೊಕ್ಕಿವೆ. ಬಾಹ್ಯಾಕಾಶ, ಸೇನೆ, ಆರೋಗ್ಯ, ಬ್ಯಾಂಕಿಂಗ್, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತನ್ನ ಕಬಂಧಬಾಹು ಚಾಚಿದೆ. ಈ ವಿಭಾಗದಲ್ಲಿ ಕಲಿತ ವಿದ್ಯಾರ್ಥಿಗಳು ಹೆಚ್ಚಿನ ಕಲಿಕಾ ನಿರತರಾಗಿ ಉನ್ನತ ಸ್ಥಾನಮಾನ ಅಲಂಕರಿಸಬಹುದಾಗಿದೆ. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರವು ಇಂದು ವಿಶ್ವ ಮಾನ್ಯತೆ ಪಡೆದಿದ್ದು, ಪದವಿ ಪೂರೈಸಿದ ವಿದ್ಯಾರ್ಥಿಗಳು ನಿರಂತರ ಓದಿನ ಮೂಲಕ ತಮ್ಮ ಉತ್ತಮ ಬದುಕು ಕಟ್ಟಿಕೊಳ್ಳಿ ಎಂಬ ಸಲಹೆ ನೀಡಿದರು.
ಪ್ರಾಂಶುಪಾಲ ಡಾ. ಕೆ. ಉಮೇಶ್ ಕಾರ್ಯಗಾರದ ಅಧ್ಯಕ್ಷತೆ ವಹಿಸಿದ್ದು, ಕಾಲೇಜಿನ ಐಕ್ಯೂಎಸಿ ಸಂಚಾಲಕ ಅಧ್ಯಾಪಕ ಡಿ. ಮಂಜುನಾಥ್, ಪತ್ರಿಕಾ ಪ್ರತಿನಿಧಿ ರಾಘವೇಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಗ್ರಂಥಾಲಯ ವಿಭಾಗದ ಮುಖ್ಯಸ್ಥ ಡಾ. ಲೋಕೇಶ್, ಅಧ್ಯಾಪಕ ರವಿ ಸೇರಿದಂತೆ ಹಲವರು ಹಾಜರಿದ್ದರು.
ಇದೇ ವೇಳೆ ಅಂತಿಮ ವರ್ಷದಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಆತ್ಮೀಯವಾಗಿ ಬೀಳ್ಕೊಡಲಾಯಿತು.