HOSANAGARA ; ಗ್ರಾಮ ಪಂಚಾಯತಿಗೆ ಸಂಬಂಧಿಸಿದ ನಿವೇಶನ ಜಾಗವನ್ನು ಸ್ಥಳೀಯರೊಬ್ಬರು ಅತಿಕ್ರಮಣ ಮಾಡಿಕೊಂಡು ಸುತ್ತ ಕಾಂಪೌಂಡ್ ನಿರ್ಮಾಣ ಮಾಡಿಕೊಂಡಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಇಲ್ಲಿನ ಗ್ರಾಮ ಪಂಚಾಯಿತಿ ಅಕ್ರಮ ಕಾಂಪೌಂಡ್ ಅನ್ನು ತೆರವುಗೊಳಿಸಿ ಕ್ರಮ ಕೈಗೊಂಡಿದೆ.
ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸ್ ನಿಲ್ದಾಣ ಸಮೀಪದ ಸರ್ಕಲ್ ಬಳಿ ಖಾಲಿ ಉಳಿದಿದ್ದ ನಿವೇಶನ ಜಾಗವನ್ನು ಪಕ್ಕದ ನಿವಾಸಿಯೊಬ್ಬರು ತಮಗೆ ಸೇರಿದ ಜಾಗವೆಂದು ಕಾಂಪೌಂಡ್ ನಿರ್ಮಿಸಿದ್ದರು. ಗ್ರಾಮ ಪಂಚಾಯಿತಿ ಜಾಗವು ಅಕ್ರಮವಾಗಿ ಕಬಳಿಕೆ ಆದ ಪ್ರಕರಣವನ್ನು ವಿಶೇಷವಾಗಿ ಗಮನಿಸಿದ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಮತ್ತು ಸದಸ್ಯರು ಮಂಗಳವಾರ ಸ್ಥಳಕ್ಕೆ ಆಗಮಿಸಿ ಕಾಂಪೌಂಡ್ ಕಟ್ಟಡ ತೆರವು ಕಾರ್ಯಾಚರಣೆ ನಡೆಸಿದರು.
ತೆರವು ಕಾರ್ಯಾಚರಣೆಯಲ್ಲಿ ಗ್ರಾಮಸ್ಥರು ಕೈಜೋಡಿಸಿದ್ದರು.
ಗ್ರಾಮ ಪಂಚಾಯಿತಿ ವಾದ :
ಈ ನಿವೇಶನ ಜಾಗವು ಲಾಗಾಯ್ತಿನಿಂದ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದೆ. ಅಗತ್ಯ ದಾಖಲೆ ಪತ್ರಗಳು ಇವೆ. ಇಲ್ಲಿ ಹಲವು ವರ್ಷಗಳಿಂದ ಅಂಗಡಿ ಮುಗ್ಗಟ್ಟು ತೆರೆಯಲಾಗಿತ್ತು. ಕೆಲ ತಿಂಗಳ ಹಿಂದೆ ಹೆದ್ದಾರಿ ಅಗಲೀಕರಣ ಸಮಯದಲ್ಲಿ ರಸ್ತೆ ವಿಸ್ತರಣೆ ಮಾಡಲಾಗಿದೆ. ನಿವೇಶನ ಜಾಗವು ಖಾಲಿ ಉಳಿದಿತ್ತು.
ನಂತರ ದಿನದಲ್ಲಿ ಸ್ಥಳೀಯ ನಿವಾಸಿಯೊಬ್ಬರು ಜಾಗದ ವಿಚಾರದಲ್ಲಿ ತಗಾದೆ ತೆಗೆದಿದ್ದಾರೆ. ಅಷ್ಟೇ ಅಲ್ಲದೆ ಅಕ್ರಮವಾಗಿ ಕಾಂಪೌಂಡ್ ನಿರ್ಮಾಣ ಮಾಡಿ ಅಧಿಕಾರಿಗಳಿಂದಲೂ ಪ್ರಭಾವ ಬೀರಿದ್ದಾರೆ. ಈ ವಿಚಾರದಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ಗ್ರಾಮ ಪಂಚಾಯಿತಿ ಸದಸ್ಯರಿಗೆ ಛೀಮಾರಿ ಹಾಕಿದ್ದರು. ಈ ನಡುವೆ ಪ್ರಕರಣ ವಿವಾದಕ್ಕೆ ತಿರುಗಿ ರಾಜಕೀಯ ಮೇಲಾಟ ನಡೆದಿತ್ತು. ಶಾಸಕ ಆರಗ ಜ್ಞಾನೇಂದ್ರ ಅವರು ಸಾರ್ವಜನಿಕ ಆಸ್ತಿ ರಕ್ಷಣೆ ಕುರಿತಂತೆ ತಹಸೀಲ್ದಾರ್ ಅವರಿಗೆ ತಾಕೀತು ಮಾಡಿದ್ದರು. ಗ್ರಾಮದಲ್ಲಿ ಅಶಾಂತಿ ನಿರ್ಮಾಣವಾಗದಂತೆ ಗಲಾಟೆಗೆ ಕಾರಣವಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದರು.
ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದರು.
ಇಂದು ಬೆಳಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರು ಒಟ್ಟಾಗಿ ಬಂದು ಕಾಂಪೌಂಡ್ ತೆರವು ಕಾರ್ಯಾಚರಣೆ ಮಾಡಿದ್ದಾರೆ.
ನಮ್ಮ ಹೊಣೆ :
ಗ್ರಾಮ ಪಂಚಾಯಿತಿ ಆಸ್ತಿ ರಕ್ಷಣೆ ನಮ್ಮ ಹೊಣೆಯಾಗಿದೆ. ಯಾರು ಎಷ್ಟೇ ಪ್ರಭಾವ ಬೀರಿದರೂ ಸಾರ್ವಜನಿಕ ಆಸ್ತಿ ಪಾಸ್ತಿ ರಕ್ಷಣೆ ಮೊದಲ ಆಧ್ಯತೆ ಆಗಿದೆ. ತೆರವು ಮಾಡಿದ ಜಾಗದಲ್ಲಿ ಕಟ್ಟಡ ಕಟ್ಟಲಾಗುವುದು. ಅಲ್ಲದೇ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಮುಲಾಜು ಇಲ್ಲದೆ ಕ್ರಮ ಜರುಗಿಸಲಾಗುವುದು. ಅಕ್ರಮ ಕಾಂಪೌಂಡ್ ತೆರವು ಕಾರ್ಯಾಚರಣೆಯಲ್ಲಿ ನಾಗರಿಕರ ಪಾತ್ರವೂ ಮುಖ್ಯ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ತಿಳಿಸಿದರು.