ರಿಪ್ಪನ್‌ಪೇಟೆ ; ಮಲೆನಾಡಿನ ವ್ಯಾಪ್ತಿಯಲ್ಲಿ ದೀಪಾವಳಿ ಬಂತೆಂದರೆ ಗ್ರಾಮ ದೇವತೆಗಳಿಗೆ ಜಾತಿ ಭೇದ ಭಾವನೆಯಿಲ್ಲದೆ ಎಲ್ಲರೂ ಸೇರಿ ನಮ್ಮೂರಿನ ಭಕ್ತ ಸಮೂಹ ಭೂತ ಚೌಡಿ, ಯಕ್ಷೆ, ರಣ, ದೇವಾನು ದೇವತೆಗಳಿಗೆ ಪೂಜೆ ಸಲ್ಲಿಸಿ ಹರಕೆ ಸಮರ್ಪಿಸುವುದು ನೋನಿಯ ವಿಶೇಷ.
ಗ್ರಾಮದಲ್ಲಿನ ಜಮೀನು ಮೇಲ್ಬಾಗದಲ್ಲಿ ಊರ ಮಹಾದ್ವಾರದ ಬಳಿ ಹೀಗೆ ಕೆರೆಯ ಮೂಲೆಗಳಲ್ಲಿನ ಹಲಸಿನ ಮತ್ತು ಆಲದ ಮರದ ಕೆಳಗೆ ಶೀಲವಂತ ಚೌಡಿ, ಭೂತ, ಯಕ್ಷೆ, ರಣ ದೇವರುಗಳನ್ನು ತ್ರಿಸೂಲ ಮತ್ತು ದೊಡ್ಡದಾದ ಕಲ್ಲಿನಲ್ಲಿ ಸ್ಥಾಪಿಸಲಾಗಿರುವ ದೇವರುಗಳಿಗೆ ಹಣ್ಣು-ಕಾಯಿ, ಕೋಳಿ, ಕುರಿ, ವರಹಗಳನ್ನು ಬಲಿ ಕೊಡುವುದು ಪುರಾತನ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವುದು ಸಂಪ್ರದಾಯದ ಪ್ರತೀಕವಾಗಿದೆ.
ಊರಿನ ಪ್ರತಿಯೊಬ್ಬರ ಮನೆಯಲ್ಲಿ ಶುದ್ದವಾದ ಹೊಸದಾಗಿ ತಂದ ಬೆತ್ತದ ಬುಟ್ಟಿಯಲ್ಲಿ ಹಣ್ಣು-ಕಾಯಿ, ಊದಬತ್ತಿ, ಕರ್ಪೂರ, ಅರಿಶಿಣ-ಕುಂಕುಮ ಹೂವನ್ನು ತುಂಬಿಕೊಂಡು ತಲೆಯ ಅಥವಾ ಹೆಗಲ ಮೇಲೆ ಹೊತ್ತು ಭೂತದ ಬನಕ್ಕೆ ಮನೆಗೊಬ್ಬರಂತೆ ಪೂಜಾ ಸಾಮಗ್ರಿಗಳೊಂದಿಗೆ ತೆರಳಿ ಸ್ವಚ್ಚಗೊಳಿಸಲಾದ ಬನದಲ್ಲಿ ತಾವು ಮನೆಯಿಂದ ತರಲಾದ ಪೂಜಾ ಸಾಮಾನುಗಳನ್ನು ಮತ್ತು ಹಣ್ಣು ಕಾಯಿಯನ್ನು ತೆಗೆದು ಇಡುತ್ತಾರೆ. ಅವುಗಳನ್ನು ತೆಗೆದುಕೊಂಡು ದೇವರಿಗೆ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನಂತರ ಹಣ್ಣು ಕಾಯಿ ಒಡೆದು ನೈವೇದ್ಯ ಮಾಡಿ ಕೋಳಿ, ಕುರಿ, ವರಹಗಳಿಗೆ ಪುರೋಹಿತರು ನೀರು ಸಿಂಪರಣೆ ಮಾಡಿದಾಕ್ಷಣ ಬಲಿ ಕೊಡುವುದು ವಿಶೇಷವಾಗಿದೆ.
ಒಟ್ಟಾರೆ ದೀಪಾವಳಿ ಹಬ್ಬ ಬಂತೆಂದರೆ ಕೆಲವರಿಗೆ ತಲೆ ನೋವು ಕಾರಣ ವರ್ಷದಲ್ಲಿ ಬರುವ ದೊಡ್ಡ ಹಬ್ಬವನ್ನು ಹೇಗೆ ಮಾಡುವುದು ಎಂಬ ಚಿಂತೆ ಕಾಡುವಂತಾಗಿದೆ. ಕೈಯಲ್ಲಿ ಹಣವಿಲ್ಲದೆ ಸಾಲ-ಸೋಲ ಮಾಡಿ ಹಬ್ಬ ಮಾಡಬೇಕಾದ ಅನಿರ್ವಾತೆ ಎದುರಾಗಿದ್ದು ಒಂದು ವರ್ಷ ಮಾಡದಿದ್ದರೆ ಮೂರು ವರ್ಷ ಬಿಡಬೇಕು ಎಂಬ ಕಟ್ಟುನಿಟ್ಟಿನಿಂದಾಗಿ ನಾಳೆ ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಕಾಣಿಸಿಕೊಂಡರೆ ಹಬ್ಬ ಮಾಡದಿರುವುದಕ್ಕೆ ಹೀಗೆ ಆಗಿದೆ ಎಂದು ಹೇಳುತ್ತಾ ಇನ್ನೂ ಮನಸ್ಸಿನ ದುಗುಡವನ್ನು ಹೆಚ್ಚಿಸುವ ಮಾತನಾಡುತ್ತಿರುತ್ತಾರೆ. ಇದರಿಂದಾಗಿ ಹಬ್ಬ ಮಾಡದೆ ಇರುವ ಹಾಗೆ ಇಲ್ಲದಂತಾಗಿದೆ.
ಋತುಮತಿಯಾದರೆ ಹಬ್ಬದ ಅಚರಣೆ ಇಲ್ಲ !
ಹೆಣ್ಣು ಮಕ್ಕಳು ಋತುಮತಿಯಾದರೆ ಆ ಊರಿನಲ್ಲಿ ದೀಪಾವಳಿ ನೋನಿ ಹಬ್ಬ ಕೆಟ್ಟು ಹೊಯಿತು ಎನ್ನುವುದು ಇನ್ನು ಮುಟ್ಟಾದ ಹೆಂಗಸರು ಊರಿನಲ್ಲಿ ನೋನಿ ಸಾರಿದ ಮೇಲೆ ವಾರಗಳ ಕಾಲ ಊರು ತ್ಯಜಿಸುವುದು ಹಿಂದಿನಿಂದಲೂ ನಡೆಸಿಕೊಂಡ ಬಂದಂತಹ ಕಟ್ಟು ನಿಟ್ಟಿನ ಪದ್ದತಿ ಇಂದಿಗೂ ಅಚರಣೆಯಲ್ಲಿ ಮುಂದುವರಿದಿದೆ. ಹಾಗೇನಾದರು ಆಕಸ್ಮಿಕವಾಗಿ ಇಂತಹ ಪ್ರಸಂಗಗಳು ನಡೆದರೆ ಊರಿನ ವಯೋವೃದ್ದರು ಮುಂದೆ ಊರಿಗೆ ಏನು ಗಂಡಾಂತರ ಎದುರಾಗಲಿದೆ. ದೇವಿ ಮುನಿಸಿಕೊಂಡಿದ್ದಾಳೆಂದು ಹೇಳುವುದು ಇಂದಿಗೆ ಇದೆ.
ಹಿಂದೆ ಹೆಣ್ಣು ಮಕ್ಕಳು ಭೂತ, ರಣ ಮತ್ತು ಯಕ್ಷೆ ಬನಕ್ಕೆ ಹೋಗುತ್ತಿರಲ್ಲಿಲ್ಲ ಕಾರಣ ಬಲಿ ನೋಡಬಾರದು ಎಂಬ ಉದ್ದೇಶದಿಂದ ಯಾರು ಹೋಗುತ್ತಿರಲ್ಲಿಲ್ಲ ಕಾಲ ಬದಲಾದಂತೆ ನಿಯಮಗಳು ಬದಲಾವಣೆಗೊಂಡು ಹಲವರು ದೇವರ ಬನಗಳ ಹತ್ತಿರ ಹೋಗಿ ನೋಡಿ ಭಕ್ತಿಯನ್ನು ಸಮರ್ಪಿಸುತ್ತಿರುವುದು ನೋನಿಯ ವಿಶೇಷವಾಗಿದೆ.
ಜಂಬಳ್ಳಿ, ಕೆರೆಹಳ್ಳಿ, ಕುಕ್ಕಳಲೇ, ಲಕ್ಕವಳ್ಳಿ, ಕೆರಗೋಡು, ನೇರಲುಮನೆ ಇನ್ನೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೋನಿ ಪೂಜೆ ನಡೆದಿದ್ದು ಕೆಲವರು ಭಾನುವಾರ ಇಲ್ಲವೇ ಅಮಾವಾಸ್ಯೆಯ ನರಕ ಚತುರ್ದಶಿ ದಿನ ನೋನಿ ಆಚರಣೆ ಮಾಡುತ್ತಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.