ಹೊಸನಗರ

ಸಮಟಗಾರಿನಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ರತ್ನಕುಮಾರಿಗೆ ಅದ್ದೂರಿ ಗೌರವ ; ‘ಊರಿನ ಉತ್ಸವ’ದಲ್ಲಿ ಶಿಕ್ಷಕಿಯ ಸೇವೆಯನ್ನು ಕೊಂಡಾಡಿದ ಶಾಸಕ ಆರಗ ಜ್ಞಾನೇಂದ್ರ

ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಹಲವು ವರ್ಷಗಳ ಕಾಲ ಮಕ್ಕಳ ಶಿಕ್ಷಣ ಮತ್ತು ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದ ಶಿಕ್ಷಕಿ ರತ್ನಕುಮಾರಿ ಎಸ್. ಅವರಿಗೆ ದೊರೆತಿರುವ ರಾಷ್ಟ್ರ ಮಟ್ಟದ ಶಿಕ್ಷಕ ಪ್ರಶಸ್ತಿ ಯಾವುದೇ ಶಿಫಾರಸ್ಸು ಅಥವಾ ಪ್ರಭಾವದಿಂದ ಬಂದದ್ದಲ್ಲ. ಅವರ ನಿಸ್ವಾರ್ಥ ಸೇವೆ ಮತ್ತು ಕಾರ್ಯಕ್ಷಮತೆಯನ್ನು ಗುರುತಿಸಿ ದೊರೆತಿರುವ ಗೌರವ ಇದಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಶಿಕ್ಷಕಿ ರತ್ನಕುಮಾರಿಗೆ ಅದ್ದೂರಿ ಗೌರವ Rathnakumari

ರಿಪ್ಪನ್‌ಪೇಟೆ: ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಹಲವು ವರ್ಷಗಳ ಕಾಲ ಮಕ್ಕಳ ಶಿಕ್ಷಣ ಮತ್ತು ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದ ಶಿಕ್ಷಕಿ ರತ್ನಕುಮಾರಿ ಎಸ್. ಅವರಿಗೆ ದೊರೆತಿರುವ ರಾಷ್ಟ್ರ ಮಟ್ಟದ ಶಿಕ್ಷಕ ಪ್ರಶಸ್ತಿ ಯಾವುದೇ ಶಿಫಾರಸ್ಸು ಅಥವಾ ಪ್ರಭಾವದಿಂದ ಬಂದದ್ದಲ್ಲ. ಅವರ ನಿಸ್ವಾರ್ಥ ಸೇವೆ ಮತ್ತು ಕಾರ್ಯಕ್ಷಮತೆಯನ್ನು ಗುರುತಿಸಿ ದೊರೆತಿರುವ ಗೌರವ ಇದಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಹುಂಚ ಸಮೀಪದ ಸಮಟಗಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ರತ್ನಕುಮಾರಿ ಎಸ್. ಅವರನ್ನು ಗ್ರಾಮಸ್ಥರು, ಶಾಲಾ ಪೋಷಕರು ಹಾಗೂ ವಿದ್ಯಾರ್ಥಿಗಳ ವತಿಯಿಂದ ಆಯೋಜಿಸಿದ್ದ ‘ಊರಿನ ಉತ್ಸವ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗುವುದು ಸಾಮಾನ್ಯ ಸಾಧನೆಯಲ್ಲ. ತಮ್ಮ ಸೇವಾ ವಿವರಗಳು ಹಾಗೂ ಸಾಧನೆಗಳನ್ನು ಸಲ್ಲಿಸಿ, ನಿಗದಿತ ಪ್ರಕ್ರಿಯೆಯ ಮೂಲಕ ಅರ್ಹತೆಯನ್ನು ಸಾಬೀತುಪಡಿಸಿ ಪ್ರಶಸ್ತಿಗೆ ಆಯ್ಕೆಯಾಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೇ ರಾಜಕೀಯ ಶಿಫಾರಸ್ಸು ಅಥವಾ ವೈಯಕ್ತಿಕ ಪ್ರಭಾವದ ಆಧಾರವಿಲ್ಲದೆ ರತ್ನಕುಮಾರಿ ಅವರು ರಾಷ್ಟ್ರಮಟ್ಟದ ಗೌರವಕ್ಕೆ ಪಾತ್ರರಾಗಿರುವುದು ಹೆಮ್ಮೆಯ ಸಂಗತಿ ಎಂದರು.

ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಾ, ಸೀಮಿತ ಸೌಲಭ್ಯಗಳ ನಡುವೆಯೂ ಮಕ್ಕಳ ಕಲಿಕೆಗೆ ಹೊಸ ವಿಧಾನಗಳನ್ನು ಅಳವಡಿಸಿಕೊಂಡು ಉತ್ತಮ ಫಲಿತಾಂಶ ತರುವಲ್ಲಿ ರತ್ನಕುಮಾರಿ ಅವರು ತೋರಿರುವ ಬದ್ಧತೆ ಶ್ಲಾಘನೀಯ. ಅವರ ಸಾಧನೆ ಇತರ ಶಿಕ್ಷಕರಿಗೂ ಸ್ಫೂರ್ತಿಯಾಗಬೇಕು ಎಂದು ಹೇಳಿದರು.

ಶಿಕ್ಷಣ ಕೇವಲ ಅಂಕಗಳಿಗೆ ಸೀಮಿತವಾಗಬಾರದು :

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ವ್ಯಾಪ್ತಿ ವಿಸ್ತಾರವಾಗಿದ್ದರೂ, ಶಿಕ್ಷಣ ಪಡೆದವರಲ್ಲಿ ಮಾನವೀಯ ಮೌಲ್ಯಗಳ ಕೊರತೆ ಕಾಣಿಸಿಕೊಳ್ಳುತ್ತಿರುವ ಸಂದರ್ಭಗಳಿವೆ. ಮಕ್ಕಳನ್ನು ಕೇವಲ ಬುದ್ಧಿವಂತರನ್ನಾಗಿ ಮಾಡುವುದಷ್ಟೇ ಶಿಕ್ಷಣದ ಉದ್ದೇಶವಾಗಬಾರದು. ಅವರಲ್ಲಿ ಕರುಣೆ, ಸಹಾನುಭೂತಿ, ಸಾಮಾಜಿಕ ಹೊಣೆಗಾರಿಕೆ ಮತ್ತು ಮಾನವೀಯ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.

ಕುಗ್ರಾಮದ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕಿಯೊಬ್ಬರ ಸೇವೆಯನ್ನು ಕೇಂದ್ರ ಸರ್ಕಾರ ಗುರುತಿಸಿ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಮಟಗಾರ ಸೇರಿದಂತೆ ಇಡೀ ತೀರ್ಥಹಳ್ಳಿ ಕ್ಷೇತ್ರಕ್ಕೆ ಹೆಮ್ಮೆಯ ವಿಷಯವಾಗಿದೆ. ರತ್ನಕುಮಾರಿ ಅವರ ಸಾಧನೆಯಿಂದ ಕ್ಷೇತ್ರದ ಕೀರ್ತಿ ಮತ್ತಷ್ಟು ಹೆಚ್ಚಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸನ್ಮಾನ ಸ್ವೀಕರಿಸಿ ಭಾವುಕರಾದ ರತ್ನಕುಮಾರಿ :

ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಶಾಲಾ ಪೋಷಕರು, ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ರತ್ನಕುಮಾರಿ ಎಸ್. ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು.

ಊರಿನ ಮುತ್ತೈದೆಯರು ಭಾರತೀಯ ಸಂಪ್ರದಾಯದಂತೆ ಅರಿಶಿಣ-ಕುಂಕುಮ ಹಚ್ಚಿ ಬಾಗಿನ ಸಮರ್ಪಿಸಿ ಗೌರವ ಸಲ್ಲಿಸಿದ ಸಂದರ್ಭ ರತ್ನಕುಮಾರಿ ಅವರು ಭಾವುಕರಾದರು. ಗ್ರಾಮಸ್ಥರ ಪ್ರೀತಿ, ಅಭಿಮಾನ ಮತ್ತು ಗೌರವಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ತಮ್ಮ ಸೇವಾ ಬದುಕಿನಲ್ಲಿ ಸಮಟಗಾರಿನ ಜನತೆ ನೀಡಿದ ಪ್ರೋತ್ಸಾಹ ಹಾಗೂ ವಿಶ್ವಾಸವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.

‘ಗ್ರಾಮೀಣ ಶಿಕ್ಷಕಿಗೆ ರಾಷ್ಟ್ರ ಗೌರವ ಹೆಮ್ಮೆಯ ಸಂಗತಿ’ :

ಹೊಂಬುಜ ಜೈನಮಠದ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಎಂದರೆ ಹಿಂದೆಗಿಂತಲೂ ಕಡಿಮೆ ಸೌಲಭ್ಯಗಳಿರುವ ಸಂಸ್ಥೆ ಎಂಬ ಭಾವನೆ ಕೆಲವರಲ್ಲಿದೆ. ಆದರೆ ಇಂತಹ ಶಾಲೆಗಳಲ್ಲಿಯೇ ಬದ್ಧತೆಯಿಂದ ಕೆಲಸ ಮಾಡುವ ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುತ್ತಿದ್ದಾರೆ. ಪ್ರಕೃತಿಯೊಂದಿಗೆ ಬೆಸೆದುಕೊಂಡು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಕಲಿಕಾ ಚಟುವಟಿಕೆಗಳನ್ನು ರೂಪಿಸಿದ ರತ್ನಕುಮಾರಿ ಅವರ ಸೇವೆಯನ್ನು ಗುರುತಿಸಿ ರಾಷ್ಟ್ರ ಪ್ರಶಸ್ತಿ ನೀಡಿರುವುದು ಗ್ರಾಮೀಣ ಶಿಕ್ಷಣ ಕ್ಷೇತ್ರಕ್ಕೆ ದೊರೆತ ಗೌರವವಾಗಿದೆ ಎಂದು ಹೇಳಿದರು.

106 ಸರ್ಕಾರಿ ಶಾಲೆಗಳಿಗೆ ನೆರವು :

ಕಾರ್ಯಕ್ರಮದಲ್ಲಿ ಬೆಂಗಳೂರು ಶ್ರೀಗಂಧ ಸಂಸ್ಥೆಯ ಪ್ರತಿನಿಧಿಗಳು ಗ್ರಾಮೀಣ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಂಸ್ಥೆ ಕೈಗೊಂಡಿರುವ ವಿವಿಧ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ಈವರೆಗೆ ಸುಮಾರು 106 ಸರ್ಕಾರಿ ಶಾಲೆಗಳಿಗೆ ಆರ್ಥಿಕ ಹಾಗೂ ಶೈಕ್ಷಣಿಕ ನೆರವು ಒದಗಿಸಲಾಗಿದ್ದು, 180ಕ್ಕೂ ಅಧಿಕ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಇವರಲ್ಲಿ 75ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮುಂದುವರಿಸುತ್ತಿದ್ದು, 28ಕ್ಕೂ ಅಧಿಕ ಮಂದಿ ಉದ್ಯೋಗ ಪಡೆದುಕೊಂಡಿದ್ದಾರೆ ಎಂದು ತಿಳಿಸಿ, ಸಮಾಜದ ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸುವುದು ಹಾಗೂ ಅವರು ಉನ್ನತ ವ್ಯಾಸಂಗದ ಮೂಲಕ ಸ್ವಾವಲಂಬಿಗಳಾಗಲು ನೆರವಾಗುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ಪ್ರತಿನಿಧಿಗಳು ಹೇಳಿದರು.

ಅಭಿನಂದನಾ ಸಮಿತಿಯ ಅಧ್ಯಕ್ಷ ಸೋಮಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಸದಸ್ಯರಾದ ಬಂಡಿ ರಾಮಚಂದ್ರ, ಶ್ವೇತಾ ಆರ್. ಬಂಡಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಡಯಟ್ ಪ್ರಾಚಾರ್ಯ ಹೆಚ್.ಆರ್. ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಗಣೇಶ್, ಜಗದೀಶ್ ಕಾಗಿನಲ್ಲಿ, ಬಸವಣ್ಯಪ್ಪ, ಈಶ್ವರಪ್ಪ, ತೀರ್ಥಪ್ಪ, ಪುಟ್ಟಸ್ವಾಮಿ, ನಿವೃತ್ತ ಶಿಕ್ಷಕ ಶ್ರೀಧರಮೂರ್ತಿ ಸೇರಿದಂತೆ ಹಲವು ಗಣ್ಯರು, ಗ್ರಾಮಸ್ಥರು, ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಗ್ರಾಮೀಣ ಶಾಲೆಯ ಶಿಕ್ಷಕಿಯೊಬ್ಬರ ಸೇವೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವುದು ಸಮಟಗಾರಿನ ಶೈಕ್ಷಣಿಕ ಇತಿಹಾಸದಲ್ಲಿ ವಿಶೇಷ ಹೆಜ್ಜೆಯಾಗಿದ್ದು, ರತ್ನಕುಮಾರಿ ಅವರ ಸಾಧನೆ ಸ್ಥಳೀಯ ಶಿಕ್ಷಕ ಸಮುದಾಯ ಹಾಗೂ ವಿದ್ಯಾರ್ಥಿಗಳಿಗೆ ಹೊಸ ಉತ್ಸಾಹ ನೀಡಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!