ಹೊಸನಗರ ; ತಾಲೂಕಿನ ಪುಣಜೆ ಗ್ರಾಮದ ಸರ್ವೇ ನಂ.56ರಲ್ಲಿ ಮೀಸಲು ಅರಣ್ಯ ಒತ್ತುವರಿ ಮಾಡಿದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಪರಿಸರವಾದಿ ಹರೀಶ್ ಆಚಾರ್ ಆಗ್ರಹಿಸಿದ್ದಾರೆ.

ಹೊಸನಗರ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ಅವರಿಗೆ ಗುರುವಾರ ಅವರು ಮನವಿ ಸಲ್ಲಿಸಿದ ಅವರು, ತಾಲೂಕಿನ ಪುಣಜೆ ಗ್ರಾಮದ ಸರ್ವೆ ನಂ.56ರ ಮೀಸಲು ಅರಣ್ಯ ಭೂಮಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಭೂ ಕಬಳಿಕೆ ನಡೆಯುತ್ತಿದೆ. ಜೆಸಿಬಿ ಯಂತ್ರಗಳನ್ನು ಬಳಸಿ ಕಾಡನ್ನು ಹಾಳು ಮಾಡಲಾಗುತ್ತಿದೆ. ಬೆಲೆಬಾಳುವ ಕಾಡುಜಾತಿಯ ಮರಗಳನ್ನು ಕಡಿತಲೆ ಮಾಡಿ ಬೇರೆಡೆಗೆ ಸಾಗಿಸಲಾಗಿದೆ. ಸಣ್ಣ ಮರಗಳನ್ನು ಯಂತ್ರ ಬಳಸಿ ಮಣ್ಣಿನಡಿ ಮುಚ್ಚಿ ಹಾಕಲಾಗಿದೆ. ಸುಮಾರು 1 ಎಕರೆ ಭೂ ಪ್ರದೇಶದಲ್ಲಿದ್ದ ಮರ-ಮಟ್ಟುಗಳನ್ನು ತೆರವು ಮಾಡಿ, ಜಾಗವನ್ನು ಸಮತಟ್ಟು ಮಾಡಲಾಗುತ್ತಿದೆ. ಹೊಸದಾಗಿ ಬೇಲಿ ನಿರ್ಮಾಣಕ್ಕೆ ಸಜ್ಜುಗೊಳಿಸಲಾಗಿದೆ. ಪ್ರಭಾವಿ ವ್ಯಕ್ತಿಗಳು ಕೃತ್ಯದ ಹಿಂದೆ ಇರುವ ಸಾಧ್ಯತೆ ಕಂಡುಬಂದಿದೆ. ಬಡವರು ತುಂಡು ಜಾಗದಲ್ಲಿ ಮನೆ ಕಟ್ಟಿಕೊಂಡ ತಕ್ಷಣ ಅರಣ್ಯ ಇಲಾಖೆಯವರು ಬಂದು ಕಿತ್ತು ಹಾಕುತ್ತಿದ್ದಾರೆ ಇಂಥ ಪ್ರಕರಣಗಳು ಅರಣ್ಯ ಇಲಾಖೆಯವರಿಗೆ ಕಣ್ಣಿಗೆ ಕಾಣಿಸುವುದಿಲ್ಲವೇ? ಎಂದು ಆರೋಪಿಸಿದ್ದಾರೆ.

ಅರಣ್ಯ ಭೂಮಿಯನ್ನು ಅನ್ಯ ಉದ್ದೇಶಕ್ಕೆ ಬಳಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಈವರೆಗೂ ಕ್ರಮ ವಹಿಸಿಲ್ಲ. ಅರಣ್ಯ ಸಂರಕ್ಷಣಾ ಕಾಯ್ದೆ ಹಾಗೂ ರಾಜ್ಯ ಅರಣ್ಯ ಅಧಿನಿಯಮದ ಉಲ್ಲಂಘನೆಯಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ವೇಳೆ ಗ್ರಾಮಸ್ಥರಾದ ಶಿವಾನಂದ ಅರಗೋಡಿ ಇದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





