ಮಲೆನಾಡಿನಾದ್ಯಂತ ಮುಂದುವರೆದ ಭಾರಿ ಮಳೆ ; ಹಲವೆಡೆ ಹಾನಿ

Written by malnadtimes.com

Published on:

ಚಿಕ್ಕಮಗಳೂರು/ಶಿವಮೊಗ್ಗ ; ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಮತ್ತಷ್ಟು ಚುರುಕುಗೊಂಡಿದ್ದು ತಡರಾತ್ರಿಯಿಂದಲೂ ಧಾರಾಕಾರವಾಗಿ ಸುರಿಯುತ್ತಿದೆ‌.

WhatsApp Group Join Now
Telegram Group Join Now
Instagram Group Join Now

ಚಿಕ್ಕಮಗಳೂರು ನಗರ, ಮೂಡಿಗೆರೆ, ಕಳಸ, ಹೊರನಾಡು, ಶೃಂಗೇರಿ, ಕೊಪ್ಪ, ಎನ್.ಆರ್‌.ಪುರ, ಬಾಳೆಹೊನ್ನೂರು, ಆಲ್ದೂರು, ಕೊಟ್ಟಿಗೆಹಾರ, ಜಾವಳಿ, ಬಣಕಲ್, ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ, ಕೆಮ್ಮಣ್ಣುಗುಂಡಿ ಸುತ್ತಮುತ್ತ ಬಿರುಗಾಳಿ ಸಹಿತ ಧಾರಾಕಾರವಾಗಿ ಸುರಿಯುತ್ತಿದೆ‌.

ಮೂಡಿಗೆರೆ ತಾಲ್ಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ರಿಪುರ ಗ್ರಾಮದ ಶೋಭ ಎಂಬುವರ ಮನೆಯ ಮೇಲೆ ಮರ‌ಬಿದ್ದು ಹಾನಿಯಾಗಿದ್ದು, ಇದೇ ಗ್ರಾಮದ ಸುಶೀಲ ಎಂಬುವರ ಕಾರ್ ಶೆಡ್ ಹಾಗೂ ಮನೆಯ ಮೇಲೆ ಮರ‌ಬಿದ್ದು ಕಾರು ಜಖಂಗೊಂಡಿದೆ.

ಅದೇ ರೀತಿ ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿ ಗ್ರಾಮದಲ್ಲಿ ಮಳೆಯ ಅಬ್ಬರಕ್ಕೆ ಹಕ್ಕಿಂ ಎಂಬುವವರಿಗೆ ಸೇರಿದ ಕುರಿ ಶೆಡ್ ಕುಸಿದು ಬಿದ್ದ ಪರಿಣಾಮ ಮೂರು ಕುರಿಗಳು ಸಾವನ್ನಪ್ಪಿದ್ದು ಹಲವು ಕುರಿಗಳು ಗಾಯಗೊಂಡು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ತಾಲೂಕಿನ ಜಾರಗಲ್ ಗ್ರಾಮದಲ್ಲಿ ಭಾರೀ ಮಳೆಗೆ ಜಯಂತಿ ಎಂಬುವವರ ಮನೆಯ ತಡೆಗೋಡೆ ಕುಸಿದು ಬಿದ್ದಿದೆ ಮಳೆಯ ಪ್ರಮಾಣ ಹೆಚ್ಚಾದರೆ ಮತ್ತಷ್ಟು ಧರೆ ಕುಸಿಯುವ ಭೀತಿ ಇದೆ ಎನ್ನಲಾಗಿದೆ.

ಮಳೆಯೊಂದಿಗೆ ಗಾಳಿ ಬೀಸುತ್ತಿರುವುದರಿಂದ ಕಾಫಿ ತೋಟಗಳಲ್ಲಿ ಮರಗಳು ಉರುಳಿದ್ದು, ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಮಳೆ ಗಾಳಿಯಿಂದ ಹಲವೆಡೆ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ‌.

ಇನ್ನೂ ಶಿವಮೊಗ್ಗ ಜಿಲ್ಲಾದ್ಯಂತ ಭಾರಿ ಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದು ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯಲ್ಲಿ 14.5 ಸೆಂ.ಮೀ. ಅತ್ಯಧಿಕ ಮಳೆ ದಾಖಲಾಗಿದೆ. ಉಳಿದಂತೆ ಹುಲಿಕಲ್ 14 ಸೆಂ.ಮೀ. ಸಾವೇಹಕ್ಲು 9, ಮಾಣಿ 7, ಯಡೂರು 6 ಸೆಂ.ಮೀ. ಮಳೆ ದಾಖಲಾಗಿದೆ.

ಶರಾವತಿ ನದಿಯ ದಡದ ಹಳ್ಳ-ಕೊಳ್ಳಗಳು ಭರ್ತಿಯಾಗಿದೆ. ಭಾರಿ ಗಾಳಿ ಮಳೆಯಿಂದಾಗಿ ಗ್ರಾಮೀಣ ಪ್ರದೇಶದ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು ಪಟ್ಟಣದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದೆ. ವರ್ಕ್ ಫ್ರಂ ಹೋಮ್ ಕೆಲಸಗಾರರ ಪಾಡು ಹೇಳ ತೀರದಂತಾಗಿದೆ.

Leave a Comment