ರಿಪ್ಪನ್‌ಪೇಟೆ ; ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಕಳೆದ ಮೂರು ದಿನಗಳಿಂದ ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು ಇತ್ತ ಮಲೆನಾಡು ಭಾಗದಲ್ಲೂ ಸಹ ಇಂದು ಬೆಳಗ್ಗೆಯಿಂದ ಹದ ಮಳೆಯಾಗುತ್ತಿದೆ.
ಮಳೆ ಪ್ರಾರಂಭವಾಗಿದ್ದರಿಂದ ಕೆಲವು ರೈತರು ಭತ್ತದ ಗದ್ದೆಗೆ ಕೊಟ್ಟಿಗೆ ಗೊಬ್ಬರ ಸಾಗಾಣಿಕೆ ಮಾಡಿಲ್ಲ ಎಂದು ಹೇಳುತ್ತಿದ್ದರೆ, ಇನ್ನೂ ಕೆಲವು ರೈತರು ಅಡಿಕೆ ತೋಟಕ್ಕೆ ನೀರು ಹರಿಸುವುದು ಬೇಡ ಎಂದು ಹೇಳುತ್ತಿದ್ದಾರೆ. ಹೀಗೆ ರೈತರು ಮಳೆಯಿಂದಾಗಿ ತಮ್ಮ ಅನುಕೂಲಗಳ ಕುರಿತು ಹೋಟೆಲ್, ಅಂಗಡಿ ಮುಂಗಟ್ಟುಗಳಲ್ಲಿ ಕುಳಿತು ಆಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಅಡಿಕೆ ಬೆಳೆಗಾರರು ಕಳೆದ ನವೆಂಬರ್‌ನಿಂದ ಈವರೆಗೂ ಬೇಸಿಗೆ ಬಿಸಿಲ ಕಾರಣ ತೋಟಕ್ಕೆ ಕೊಳವೆ ಬಾವಿ ಮತ್ತು ಕೃಷಿ ಹೊಂಡದ ನೀರನ್ನು ಪಂಪ್‌ಸೆಟ್ ಮೂಲಕ ಹರಿಸಿ ಬೆಳೆ ರಕ್ಷಣೆ ಮಾಡಿಕೊಳ್ಳುವುದರಲ್ಲಿ ಮಗ್ನರಾಗಿದ್ದರು. ಆದರೆ ಈ ಬಾರಿ ಅಕಾಲಿಕ ಮಳೆಯಿಂದಾಗಿ ಅಡಿಕೆ ಬೆಳೆಗೆ ನೀರಿನ ಕೊರತೆ ಇಲ್ಲದೆ ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನೂ ಮುಂಗಾರು ಸಾಮಾನ್ಯವಾಗಿ ಜೂನ್ 10 ರ ನಂತರ ಆರಂಭವಾಗಬೇಕಾಗಿದ್ದು ಅದಕ್ಕೂ ಮುನ್ನವೇ ಮಳೆ ಶುರುವಾಗಿದ್ದರಿಂದ ಭತ್ತ, ಜೋಳ ಮತ್ತು ಶುಂಠಿ ಬಿತ್ತನೆಗೆ ಭೂಮಿಯನ್ನು ಹದಗೊಳಿಸುವ ಕಾರ್ಯದಲ್ಲಿ ರೈತರು ಮಗ್ನರಾಗಿದ್ದಾರೆ.