ಚಿಕ್ಕಮಗಳೂರು ; ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಏಕಪಥವಾಗಿರುವ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ 123.80 ಕಿ.ಮೀ.ನಿಂದ 141 ಕಿ.ಮೀ.ವರೆಗೆ ಅಂದರೆ ತನಿಕೋಡುವಿನಿಂದ ಎಸ್.ಕೆ.ಬಾರ್ಡರ್‌ವರೆಗೆ ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಸೆಪ್ಟೆಂಬರ್ 30ರವರೆಗೆ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲಾ ದಂಡಾಧಿಕಾರಿಗಳೂ ಆದ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಭಾರೀ ತಿರುವುಗಳು ಮತ್ತು ಕಡಿದಾದ ಏರಿಗಳಿಂದ ಕೂಡಿರುವ ಈ ರಸ್ತೆಯ ಇಕ್ಕೆಲಗಳಲ್ಲಿನ ಮಣ್ಣಿನ ಮೇಲ್ಮೈ ಮಳೆಗಾಲದಲ್ಲಿ ಕೊರೆದು ಹೋಗಿ ಕಾರ್ಯಕ್ಷಮತೆ ಕಡಿಮೆ ಆಗಿದ್ದು, ಅಪಾಯಕಾರಿ ಸ್ಥಿತಿಯಲ್ಲಿವೆ. ಇದರಿಂದಾಗಿ ಭಾರೀ ವಾಹನಗಳ ಚಕ್ರಗಳು ಹೂತು ವಾಹನ ಸಂಚಾರಕ್ಕೆ ಅಡಚಣೆಯಾಗುವ ಸಂದರ್ಭವಿದೆ. ಈ ಅಂತರದ ರಸ್ತೆಯಲ್ಲಿರುವ ನಾಲ್ಕು ಕಿರು ಸೇತುವೆಗಳು ಹಾಗೂ ಅಡ್ಡ ಮೋರಿಗಳು ಕೂಡ ಶಿಥಿಲಾವಸ್ಥೆಗೆ ತಲುಪಿದ್ದು, ಮಳೆಗಾಲದಲ್ಲಿ ಈ ಕಿರು ಸೇತುವೆಗಳ ಕಂಬಗಳು ಕೊರೆಯಲ್ಪಟ್ಟು ಭಾರೀ ವಾಹನಗಳ ಸಂಚಾರ ಅಪಾಯಕಾರಿಯಾಗುವ ಸಂಭವವಿದೆ.
ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನೀಡಿದ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ದಂಡಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಈ ರಸ್ತೆ ಸಂಚಾರ ನಿಷೇಧಿಸಿರುವ ಹಿನ್ನೆಲೆಯಲ್ಲಿ ಭಾರೀ ವಾಹನಗಳಿಗೆ ಬದಲಿ ಮಾರ್ಗದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಚಿಕ್ಕಮಗಳೂರಿನಿಂದ ಹಾಗೂ ನರಸಿಂಹರಾಜಪುರ ಕಡೆಯಿಂದ ಬರುವ ವಾಹನಗಳು ಬಾಳೆಹೊನ್ನೂರು – ಮಾಗುಂಡಿ – ಕಳಸ – ಕುದುರೆಮುಖ – ಎಸ್.ಕೆ.ಬಾರ್ಡರ್ ಮಾರ್ಗವಾಗಿ ಸಂಚರಿಸುವುದು, ಕೊಪ್ಪ ಕಡೆಯಿಂದ ಬರುವ ವಾಹನಗಳು ಕೊಪ್ಪ – ಜಯಪುರ – ಬಾಳೆಹೊನ್ನೂರು – ಮಾಗುಂಡಿ – ಕಳಸ – ಕುದುರೆಮುಖ – ಎಸ್.ಕೆ.ಬಾರ್ಡರ್ ಮಾರ್ಗವಾಗಿ ಸಂಚರಿಸುವಂತೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.