ಸಾಗರ

ಬಡ ರೈತನ ಒಕ್ಕಲೆಬ್ಬಿಸುವ ನೋಟಿಸ್ : ಎಸಿಎಫ್ ಕೋರ್ಟ್ ಆದೇಶ

ಶಿವಮೊಗ್ಗ: ಜಿಲ್ಲೆಯಲ್ಲಿ ಆಡಳಿತ ಹಾಗೂ ವಿಪಕ್ಷ ನಾಯಕರ ಪರಸ್ಪರ ಬುರುಡೆ ಭಾಷಣಗಳ ನಡುವೆಯೇ, ಹಲವು ವರ್ಷಗಳಿಂದ ಭೂಮಿಯನ್ನು ಊಳಿಸಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಎಸಿಎಫ್ ಕೋರ್ಟ್ ಒಕ್ಕಲೆಬ್ಬಿಸುವಂತೆ ನೋಟಿಸ್ ನೀಡಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

WhatsApp Group Join Now
Telegram Group Join Now
Instagram Group Join Now

ಒಂದು ಕಡೆ ಬಿಜೆಪಿಯ ಸಂಸದರ ಭರವಸೆಗಳು, ಮತ್ತೊಂದು ಕಡೆ ಸಚಿವ ಮಧು ಬಂಗಾರಪ್ಪನವರ ಮಾತುಗಳು ಜನರ ಕಿವಿಗೆ ಬೀಳುತ್ತಿದ್ದರೂ, ನೆಲಮಟ್ಟದಲ್ಲಿ ಮಾತ್ರ ಜನ ಮನೆ, ಜಮೀನು ಕಳೆದುಕೊಂಡು ಹೊರಹೋಗುವ ಸ್ಥಿತಿ ನಿರ್ಮಾಣವಾಗಿದೆ. “ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ” ಎಂದು ಹೇಳುವ ನಾಯಕರು ಈಗ ಎಲ್ಲಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಸಿಗಂದೂರು ಸೇತುವೆ ನಿರ್ಮಾಣವಾಗುವಾಗ ಅರಣ್ಯಕ್ಕೆ ಅಡ್ಡಿಯಾಗಲಿಲ್ಲ. ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಸುಮಾರು 16 ಸಾವಿರ ಮರಗಳ ಮಾರಣಹೋಮ ನಡೆಯಲಿದೆ ಎನ್ನುವ ವರದಿಗಳೂ ಯಾವುದೇ ಕ್ರಮ ಆಗಲಿಲ್ಲ. ಬೆಕ್ಕೂಡು ಸೇತುವೆ, ಆಗುಂಬೆ ಸುರಂಗ ಮಾರ್ಗ ನಿರ್ಮಾಣದ ವೇಳೆ ಅರಣ್ಯ ನಾಶವಾಗುತ್ತಿದೆ ಎಂದು ಹೇಳಿದರೂ ಯಾವುದೇ ಕ್ರಮ ಕೈಗೊಳ್ಳದ ಅರಣ್ಯ ಕಾನೂನುಗಳು, ಈಗ ಮಾತ್ರ ಬಡ ರೈತನ ಮೇಲೆ ಗದಾಪ್ರಹಾರದಂತೆ ಬೀಳುತ್ತಿರುವುದು ವಿಪರ್ಯಾಸವಾಗಿದೆ.

ಎಸಿಎಫ್ ಕೋರ್ಟ್ ಆದೇಶದ ಹಿನ್ನೆಲೆ, ಶರಾವತಿ ಕಣಿವೆ ಅಭಯಾರಣ್ಯ ವ್ಯಾಪ್ತಿಯ ಕಾರ್ಗಲ್ ವನ್ಯಜೀವಿ ವಿಭಾಗವು ಕಟ್ಟಿನಕಾರು ಗ್ರಾಮದ ಹೂವಯ್ಯ ಬಿನ್ ಮುಗಲನಾಯ್ಕ ಅವರಿಗೆ ಒಕ್ಕಲೆಬ್ಬಿಸುವ ನೋಟಿಸ್ ನೀಡಿದೆ. ಸುಮಾರು ನಾಲ್ಕು ಎಕರೆ ಭೂಮಿಯ ಒತ್ತುವರಿ ತೆರವುಗೊಳಿಸುವಂತೆ ನೀಡಲಾದ ಈ ನೋಟಿಸ್ ಗ್ರಾಮಸ್ಥರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಮಸ್ಥರ ತೀವ್ರ ಪ್ರತಿರೋಧದ ಹಿನ್ನೆಲೆಯಲ್ಲಿ, ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ತಾತ್ಕಾಲಿಕವಾಗಿ ಹಿಂತಿರುಗಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಇಂತಹ ಕ್ರಮಗಳು ಮತ್ತಷ್ಟು ಜನರಲ್ಲಿ ಆತಂಕ ಮೂಡಿಸುತ್ತಿವೆ.

ಕಟ್ಟಿನಕಾರು ಗ್ರಾಮದಲ್ಲಿ ಒಟ್ಟು 14 ಮನೆಗಳಿದ್ದು, ಪ್ರತಿ ವಾರ ಒಂದೊಂದು ಮನೆಗೆ ನೋಟಿಸ್ ನೀಡಿ ರೈತರನ್ನೇ ಒಡೆದು ಆಳುವ ನೀತಿಯನ್ನು ಅರಣ್ಯ ಇಲಾಖೆ ಅನುಸರಿಸುತ್ತಿದೆಯೆಂಬ ಆರೋಪಗಳು ಕೇಳಿಬರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಸಂಸದರು, ಸಚಿವರು ಹಾಗೂ ಅರಣ್ಯ ಸಚಿವರು “ಯಾರಿಗೂ ಒಕ್ಕಲೆಬ್ಬಿಸುವ ನೋಟಿಸ್ ನೀಡುವುದಿಲ್ಲ” ಎಂದು ಹೇಳಿಕೊಂಡು ಓಡಾಡುತ್ತಿರುವುದು ಕೇವಲ ಬುರುಡೆ ಭಾಷಣಗಳಾಗಿದೆಯೇ ಎಂಬ ಪ್ರಶ್ನೆ ಎದುರಾಗಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಅರಣ್ಯಾಧಿಕಾರಿಗಳ ನೋಟಿಸ್‌ನ ಪ್ರಮುಖ ಅಂಶಗಳು

ಶರಾವತಿ ವನ್ಯಜೀವಿ ವಲಯ, ಕೋಗಾರ್‌ನಲ್ಲಿ ದಾಖಲಾಗಿರುವ ಅರಣ್ಯ ಮೊಕದ್ದಮೆ ಸಂಖ್ಯೆ 17/1998-99 (ದಿನಾಂಕ: 12-08-1998) ಆಧಾರದಲ್ಲಿ, ಕಟ್ಟಿನಕಾರು ಗ್ರಾಮದ ಸರ್ವೆ ನಂ. 265ರಲ್ಲಿ ಇರುವ ಕಾರಣಿ ಮೀಸಲು ಅರಣ್ಯ ಪ್ರದೇಶದಲ್ಲಿ 4 ಎಕರೆ ಭೂಮಿಯನ್ನು ಒತ್ತುವರಿ ಮಾಡಿರುವ ಆರೋಪ ಹೂವಯ್ಯ ಬಿನ್ ಮುಗಲನಾಯ್ಕ ಅವರ ಮೇಲೆ ಇದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಮಾನ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ನ್ಯಾಯಾಲಯದ ಆದೇಶದಂತೆ, ಒತ್ತುವರಿ ಪ್ರದೇಶದಲ್ಲಿರುವ ಕಟ್ಟಡ, ಸಾಮಗ್ರಿ ಸೇರಿದಂತೆ ಎಲ್ಲಾ ರಚನೆಗಳನ್ನು ಸ್ವಂತ ಖರ್ಚಿನಲ್ಲಿ ತೆರವುಗೊಳಿಸಿ, ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವಂತೆ ಸೂಚಿಸಲಾಗಿದೆ.

ಇದೇ ವೇಳೆ, 06-02-2026 ರಂದು ಬೆಳಗ್ಗೆ 11 ಗಂಟೆಯೊಳಗೆ ಸ್ಥಳವನ್ನು ಖಾಲಿ ಮಾಡಬೇಕೆಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.


ಮೂಲ ಪ್ರಶ್ನೆ ಏನು?

ಅರಣ್ಯ ನಾಶಕ್ಕೆ ಕಾರಣ ಮನುಷ್ಯನ ವಾಸವೇ? ಅಥವಾ ರಸ್ತೆ, ಸೇತುವೆ, ಜಲಾಶಯ, ಸುರಂಗ ಯೋಜನೆಗಳೇ?ಈ ಪ್ರಶ್ನೆಗೆ ಉತ್ತರ ಹುಡುಕದೇ, ದುರ್ಬಲ ರೈತ ಮತ್ತು ಗ್ರಾಮಸ್ಥರನ್ನೇ ಗುರಿಯಾಗಿಸುವ ವ್ಯವಸ್ಥೆ ಎಷ್ಟು ನ್ಯಾಯಸಮ್ಮತ ಎಂಬ ಚರ್ಚೆ ಇದೀಗ ತೀವ್ರಗೊಂಡಿದೆ.

ಶಿವಮೊಗ್ಗ ಕೇಂದ್ರ ಕಾರಾಗೃಹದೊಳಗೆ ನಿಷೇಧಿತ ವಸ್ತು ಎಸೆದ ಪ್ರಕರಣ : ಐವರ ಬಂಧನ

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Koushik G K

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ. Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650

error: Content is protected !!