ಶಿವಮೊಗ್ಗ: ಖ್ಯಾತ ರಂಗ ನಿರ್ದೇಶಕ, ಪ್ರಗತಿಪರ ಚಿಂತಕ ಹಾಗೂ ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ರಂಗಕರ್ಮಿ ಚಿದಂಬರರಾವ್ ಜಂಬೆ ಅವರ ನಿಧನದಿಂದ ನಾಡಿನ ರಂಗಭೂಮಿ ಕ್ಷೇತ್ರಕ್ಕೆ ದೊಡ್ಡ ನಷ್ಟ ಉಂಟಾಗಿದೆ.
ಚಿದಂಬರರಾವ್ ಜಂಬೆ ಅವರು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಹೆಗ್ಗೋಡಿನ ನೀನಾಸಂ ರಂಗ ಶಿಕ್ಷಣ ಕೇಂದ್ರ, ಸಾಣೇಹಳ್ಳಿಯ ರಂಗಶಿಕ್ಷಣ ಕೇಂದ್ರದಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದು, ಮೈಸೂರು ರಂಗಾಯಣದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.
ತಮ್ಮ ಬದುಕಿನ ಬಹುಭಾಗವನ್ನು ರಂಗಭೂಮಿಗೆ ಅರ್ಪಿಸಿದ್ದ ಅವರು ದೇಶದ ಹಲವು ಪ್ರಮುಖ ರಂಗತಂಡಗಳಿಗೆ ನಾಟಕಗಳನ್ನು ನಿರ್ದೇಶಿಸಿದ್ದರು. ರಂಗಭೂಮಿಯ ಜೊತೆಗೆ ಸಾಮಾಜಿಕ ವಿಚಾರಗಳಿಗೂ ಸ್ಪಂದಿಸುತ್ತಿದ್ದ ಅವರು ಗಾಂಧಿವಾದಿ ಚಿಂತನೆಗೆ ಒತ್ತು ನೀಡಿದ ವ್ಯಕ್ತಿಯಾಗಿದ್ದರು.
ರಂಗಭೂಮಿಗೆ ನೀಡಿದ ಸೇವೆಯನ್ನು ಗುರುತಿಸಿ ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ದೊರೆತಿತ್ತು. ಶಿವಮೊಗ್ಗ ಜಿಲ್ಲೆಯ ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳಿಗೂ ಅವರು ನಿರಂತರವಾಗಿ ಸ್ಪಂದಿಸುತ್ತಿದ್ದರು.
ಚಿದಂಬರರಾವ್ ಜಂಬೆ ಅವರ ಅಗಲಿಕೆಯಿಂದ ಕನ್ನಡ ರಂಗಭೂಮಿ ಒಬ್ಬ ಪ್ರಮುಖ ನಿರ್ದೇಶಕ, ಶಿಕ್ಷಕ ಮತ್ತು ಚಿಂತಕರನ್ನು ಕಳೆದುಕೊಂಡಂತಾಗಿದೆ. ಅವರ ನಿಧನಕ್ಕೆ ಹಲವು ರಂಗಕರ್ಮಿಗಳು, ಸಾಹಿತ್ಯಿಕರು ಮತ್ತು ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

