ಸಾಗರ: ಮನೆಯಲ್ಲೇ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಗಾಡ್ರೇಜ್‌ನಲ್ಲಿದ್ದ ಲಕ್ಷಾಂತರ ರೂಪಾಯಿ ನಗದು ಕಳವು ಮಾಡಿಕೊಂಡು ಪರಾರಿಯಾಗಿದ್ದ ಪ್ರಕರಣವನ್ನು ಸಾಗರ ಪೇಟೆ ಠಾಣೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಭೇದಿಸಿದ್ದಾರೆ.
ಸಾಗರದ ಅನಲೇಕೊಪ್ಪ ನಿವಾಸಿ ಉಮಾ ಅವರ ಮನೆಯಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ ಪಾಂಡುರಂಗ ಎಂಬಾತನ ವಿರುದ್ಧ ಕಳವು ಆರೋಪ ಕೇಳಿಬಂದಿದೆ. ಸೆಪ್ಟೆಂಬರ್ 6ರಂದು ಮನೆಯ ಗಾಡ್ರೇಜ್‌ನಲ್ಲಿದ್ದ ₹2,54,000 ನಗದು ಹಣವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾನೆಂದು ದೂರು ನೀಡಲಾಗಿತ್ತು.
ಸಂತ್ರಸ್ತೆಯ ದೂರಿನ ಮೇರೆಗೆ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಸಿಆರ್ ನಂ. 175/2026ರಡಿ ಬಿಎನ್‌ಎಸ್ ಕಲಂ 305, 306 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಾದ ಕೂಡಲೇ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದರು. ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ. ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ ಎ.ಜೆ. ಅವರ ಮಾರ್ಗದರ್ಶನದಲ್ಲಿ ಹಾಗೂ ಸಾಗರ ಉಪವಿಭಾಗದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬೇನಕಪ್ರಸಾದ್ ಐಪಿಎಸ್ ಅವರ ಮೇಲ್ವಿಚಾರಣೆಯಲ್ಲಿ ವಿಶೇಷ ತಂಡ ರಚಿಸಲಾಯಿತು.
ಸಾಗರ ಪೇಟೆ ಠಾಣೆ ಪೊಲೀಸ್ ನಿರೀಕ್ಷಕ ಪುಲ್ಲಯ್ಯ ರಾಥೋಡ್ ಅವರ ನೇತೃತ್ವದಲ್ಲಿ ಪಿಎಸ್‌ಐ ಶಾಂತರಾಜ್, ಸಿಬ್ಬಂದಿಗಳಾದ ಹೆಚ್‌ಸಿ ವಿಶ್ವನಾಥ ಮತ್ತು ಪಿಸಿ ನರೇಂದ್ರ ಅವರ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿತು.
ತನಿಖೆಯ ವೇಳೆ ಮಹಾರಾಷ್ಟ್ರ ಮೂಲದ ಪಾಂಡುರಂಗನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಪಾಂಡುರಂಗ, ವಯಸ್ಸು 35, ಹೋಟೆಲ್ ಕೆಲಸ ಮಾಡಿಕೊಂಡಿದ್ದು, ಸಾಗರದ ಎಸ್‌ಎನ್ ನಗರ 3ನೇ ಕ್ರಾಸ್‌ನಲ್ಲಿ ವಾಸವಿದ್ದನು. ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ರಾಜಾಪುರ ತಾಲೂಕಿನ ಹಾತ್ ಕಾಂಬಾ ಗ್ರಾಮದವನು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತನಿಂದ ಕಳುವಾಗಿದ್ದ ಹಣದಲ್ಲಿ ₹2,29,900 ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಭೇದಿಸಿದ ಸಾಗರ ಪೇಟೆ ಠಾಣೆ ಪೊಲೀಸರ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

