ಸಾಗರ: ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಶಿಕ್ಷಕರಿಗೆ ಅವಮಾನ ಮಾಡಿದ್ದಾರೆ ಎಂಬ ಮಾಜಿ ಸಚಿವ ಹರತಾಳು ಹಾಲಪ್ಪ ಅವರ ಆರೋಪಕ್ಕೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
ಸಾಗರ ತಾಲೂಕಿನ ಶಿಕ್ಷಕರ ಬಗ್ಗೆ ತಮಗೆ ಅಪಾರ ಗೌರವವಿದೆ. ಶಿಕ್ಷಕರಿಗೆ ಗೌರವ ಕೊಡಲು ಯಾರಿಂದಲೂ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದರು.
ತೀರ್ಥಹಳ್ಳಿಯಲ್ಲಿ ನಡೆದ ಕಸ್ತೂರಿ ರಂಗನ್ ವರದಿ ವಿರೋಧಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರಿಂದ ಸಾಗರದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಬರಲು ತಡವಾಯಿತು. ಈ ಬಗ್ಗೆ ಆಯೋಜಕರಿಗೆ ಮುಂಚಿತವಾಗಿಯೇ ಮಾಹಿತಿ ನೀಡಿದ್ದೆ. ತಮ್ಮ ಕಾರಣದಿಂದ ಕಾರ್ಯಕ್ರಮ ವಿಳಂಬವಾಗಬಾರದು ಎಂದು ಕಾರ್ಯಕ್ರಮ ಮುಂದುವರಿಸುವಂತೆ ತಿಳಿಸಲಾಗಿತ್ತು ಎಂದು ಅವರು ಸ್ಪಷ್ಟಪಡಿಸಿದರು.
ನಂತರ ಹೊಸನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಆದ್ದರಿಂದ ಉದ್ದೇಶಪೂರ್ವಕವಾಗಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಿಂದ ದೂರ ಉಳಿದಿಲ್ಲ ಎಂದು ಬೇಳೂರು ಹೇಳಿದರು.
ಶಿಕ್ಷಕರು ಸಮಾಜದಲ್ಲಿ ದೇವರ ಸಮಾನರು. ದೇಶದ ಪ್ರಧಾನಿಯಿಂದ ಹಿಡಿದು ಪ್ರತಿಯೊಬ್ಬರೂ ಶಿಕ್ಷಕರಿಗೆ ಗೌರವ ಕೊಡುತ್ತಾರೆ. ನಾನು ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಯಾರಿಗೆ ಯಾವ ರೀತಿಯಲ್ಲಿ ಗೌರವ ನೀಡಬೇಕು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿದರು.
ಕೆಲಸವಿಲ್ಲದ ವಿರೋಧಿಗಳು ಇಂತಹ ಸಣ್ಣ ವಿಚಾರಗಳನ್ನೇ ದೊಡ್ಡದು ಮಾಡಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಇದೇ ವೇಳೆ ಹಾಲಪ್ಪ ವಿರುದ್ಧ ಲೇವಡಿ ಮಾಡಿದ ಬೇಳೂರು, ಇತ್ತೀಚೆಗೆ ಅವರ ಪಕ್ಷದ ಕಾರ್ಯಕರ್ತರೇ ಜನರೊಂದಿಗೆ ಹೇಗೆ ಮಾತನಾಡಬೇಕು, ಜನರ ಹೆಗಲ ಮೇಲೆ ಕೈ ಹಾಕುವುದು ಹೇಗೆ, ಕೈಬೀಸಿ ಟಾಟಾ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಟೀಕಿಸಿದರು.
ಕೃತಕ ವರ್ತನೆ ಕಲಿಯುವ ಪರಿಸ್ಥಿತಿ ನಮಗಿಲ್ಲ. ಸಾಗರದ ಜನತೆಗೆ ಹಾಗೂ ಶಿಕ್ಷಕರಿಗೆ ಬೇಳೂರು ಏನು ಎಂಬುದು ಚೆನ್ನಾಗಿ ತಿಳಿದಿದೆ ಎಂದು ಗೋಪಾಲಕೃಷ್ಣ ಬೇಳೂರು ತಿರುಗೇಟು ನೀಡಿದರು.

