ಶಿವಮೊಗ್ಗ: ಜಿಲ್ಲೆಯ ಕಾರ್ಗಲ್ ಸಮೀಪದ ವಾಟಮಕ್ಕಿ ಕ್ರಾಸ್ ಬಳಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ತುರ್ತು ಸ್ಪಂದನಾ ಸೇವೆ 112 ಸಿಬ್ಬಂದಿಯ ತಕ್ಷಣದ ಕಾರ್ಯಾಚರಣೆಯಿಂದ ಗಾಯಾಳುವಿಗೆ ಸಕಾಲಿಕ ಚಿಕಿತ್ಸೆ ದೊರೆತಿದೆ.
ವೇಗವಾಗಿ ಬಂದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಅಪಘಾತದ ನಂತರ ಕಾರು ಚಾಲಕ ಗಾಯಾಳುವಿಗೆ ನೆರವು ನೀಡದೆ ಸ್ಥಳದಿಂದ ವಾಹನ ಸಮೇತ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ERSS 112 ಸಹಾಯವಾಣಿಗೆ ತಲುಪುತ್ತಿದ್ದಂತೆಯೇ ಗಸ್ತು ಕರ್ತವ್ಯದಲ್ಲಿದ್ದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಗೊಂಡಿದ್ದ ಬೈಕ್ ಸವಾರನ ಸ್ಥಿತಿ ಗಂಭೀರವಾಗಿರುವುದನ್ನು ಗಮನಿಸಿ, ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಕಾರು ಪತ್ತೆ
ಅಪಘಾತದ ಬಳಿಕ ಪರಾರಿಯಾಗಿದ್ದ ಕಾರಿನ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದರು. ಪೊಲೀಸರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಚಾಲಕ ಅಪಘಾತಕ್ಕೀಡಾದ ಕಾರನ್ನು ಮಂಡವಳ್ಳಿ ಅರಣ್ಯ ಪ್ರದೇಶದಲ್ಲಿ ಬಿಟ್ಟು ತೆರಳಿದ್ದ ಎನ್ನಲಾಗಿದೆ.
ಹುಡುಕಾಟ ನಡೆಸಿದ ಪೊಲೀಸರು ಅರಣ್ಯದೊಳಗೆ ಬಿಟ್ಟುಹೋಗಿದ್ದ ಕಾರನ್ನು ಪತ್ತೆಹಚ್ಚಿ ವಶಕ್ಕೆ ಪಡೆದು ಠಾಣೆಗೆ ತಂದಿದ್ದಾರೆ. ಚಾಲಕನ ಪತ್ತೆಗೆ ಮುಂದಿನ ತನಿಖೆ ನಡೆಯುತ್ತಿದೆ.
ಗಾಯಾಳುವಿಗೆ ತಕ್ಷಣ ನೆರವಾಗಿ ಆಸ್ಪತ್ರೆಗೆ ದಾಖಲಿಸಿದ ಹಾಗೂ ಪರಾರಿಯಾಗಿದ್ದ ವಾಹನವನ್ನು ಪತ್ತೆಹಚ್ಚುವಲ್ಲಿ ಕಾರ್ಯನಿರ್ವಹಿಸಿದ 112 ಸಿಬ್ಬಂದಿ ಸೋಮಪ್ಪ, ಸಚಿನ್ ಮತ್ತು ಪವನ್ ಕುಮಾರ್ ಅವರ ಕರ್ತವ್ಯಪ್ರಜ್ಞೆಯನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಶ್ಲಾಘಿಸಿದೆ.

