RIPPONPETE ; ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳು ಹೆಚ್ಚು ವಿದ್ಯಾರ್ಹತೆ ಹೊಂದಿ ವಿದೇಶದಲ್ಲಿ ಉದ್ಯೋಗ ಪಡೆಯುವವರಿಗೆ ವಿದೇಶದಲ್ಲಿ ಕಾರ್ಪೆಟ್ ಹಾಕಿ ಆಹ್ವಾನಿಸುತ್ತಿದ್ದಾರೆಂದು ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನ 2024 -25ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ನಾನು ಸಾಗರ ಸರ್ಕಾರಿ ಕಾಲೇಜ್‌ನಲ್ಲಿ ವ್ಯಾಸಂಗ ಮಾಡುವ ವೇಳೆ ಜಾನುವಾರು ದೊಡ್ಡಿಯೆಂದು ಹೀಯಾಳಿಸುತ್ತಿದ್ದ ಕಾಲ ಇತ್ತು ನಾನು ಶಾಸಕನಾದ ಮೇಲೆ ಆ ದೊಡ್ಡಿ ಪದವನ್ನು ಕಿತ್ತು ಹಾಕಿ ಈಗ ರಾಜ್ಯದಲ್ಲಿಯೇ ಅತ್ಯುತ್ತಮ ಕಾಲೇಜ್ ಎಂಬ ಹೆಗ್ಗಳಿಕೆಯೊಂದಿಗೆ 2700 ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವಂತೆ ಸುಸಜ್ಜಿತ ಕಟ್ಟಡ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದ ಅವರು, ಅದೇ ರೀತಿಯಲ್ಲಿ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿನ ರಿಪ್ಪನ್‌ಪೇಟೆ ಕಾಲೇಜ್‌ಗೂ ಹೆಚ್ಚಿನ ಸೌಲಭ್ಯವನ್ನು ನೀಡಲಾಗಿದ್ದು ಯಾವುದೇ ವಿದ್ಯಾರ್ಥಿ ವ್ಯಾಸಂಗದಿಂದ ವಂಚಿತರಾಗದಂತೆ ಉಪನ್ಯಾಸಕ ವೃಂದ ಗಮನಹರಿಸಿ ಅವರನ್ನು ಕಾಲೇಜ್‌ಗೆ ಕರೆತರುವ ಕೆಲಸ ಮಾಡುವಂತೆ ಕರೆ ನೀಡಿದರು.
ಮೂಢನಂಬಿಕೆಯಿಂದ ಮುಗ್ದ ಜನರನ್ನು ವಂಚಿಸುವವರು ಹೆಚ್ಚಾಗಿದ್ದು ಅದಕ್ಕೆ ಅವಕಾಶ ನೀಡದೆ ಸ್ವಚ್ಚತೆಯ ಕಡೆ ಹೆಚ್ಚು ಒತ್ತು ನೀಡಬೇಕು ಎನ್.ಎಸ್.ಎಸ್.ಶಿಬಿರಗಳ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಎಂದ ಅವರು, ವಿದ್ಯಾರ್ಥಿಗಳು ಗುರು-ಹಿರಿಯರನ್ನು ಗೌರವದಿಂದ ಕಾಣುವಂತೆ ಕರೆ ನೀಡಿದರು.
ಕಾಲೇಜ್ ಪ್ರಾಚಾರ್ಯ ಹೆಚ್.ಕೆ.ವಾಸುದೇವ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿಡಿಸಿ ಉಪಾಧ್ಯಕ್ಷ ಜಿ.ಆರ್.ಗೋಪಾಲಕೃಷ್ಣ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಸಿಡಿಸಿ ಸಮತಿಯ ಸದಸ್ಯರಾದ ಮಹಮ್ಮದ್ ರಫಿ, ಕಟ್ಟೆ ನಾಗಪ್ಪ, ಬೋರಪ್ಪ, ಷಣ್ಮುಖ, ಡಿ.ಈ.ಮಧುಸೂಧನ್, ಗಣಪತಿ, ಅಶ್ವಿನಿ ರವಿಶಂಕರ, ಆಸಿಫ್ ಭಾಷಾ ಇನ್ನಿತರರು ಹಾಜರಿದ್ದರು.