ಹೊಸನಗರ ; ಇಲ್ಲಿನ ಪಟ್ಟಣ ಪಂಚಾಯತಿಯ 2025-26ನೇ ಸಾಲಿನ ಆಯ-ವ್ಯಯ ಮುಂಗಡ ಪತ್ರವನ್ನು ಪಂಚಾಯತಿ ಅಧ್ಯಕ್ಷ ನಾಗಪ್ಪ ಅಧ್ಯಕ್ಷತೆಯಲ್ಲಿ ಸಭೆಗೆ ಮಂಡಿಸಲಾಯಿತು. ಮುಂದಿನ 2026ರ ಮಾರ್ಚ್ 31ರ ಅಂತ್ಯಕ್ಕೆ 32,30,974 ರೂ. ಉಳಿಕೆ ನಿರೀಕ್ಷೆ ಬಜೆಟ್ ಮಂಡನೆಯಾಯಿತು.
ಈ ವೇಳೆ ಮುಖ್ಯಾಧಿಕಾರಿ ಎಂ.ಎನ್. ಹರೀಶ್, ಸಭೆಯನ್ನು ಉದ್ದೇಶಿಸಿ ಮಾತನಾಡಿ, ರಾಜ್ಯ ಪೌರಾಡಳಿತ ಇಲಾಖೆ ಸ್ಥಳೀಯ ಆಡಳಿತಕ್ಕೆ ಬಜೆಟ್‌ನ ಆಯಾ-ವ್ಯಯದಲ್ಲಿ ನಿಧಿ ಸಂಗ್ರಹಕ್ಕಾಗಿ ಮೂರು ರೀತಿಯಲ್ಲಿ ಅನುಮೋದನೆ ನೀಡಿದೆ. ಅವುಗಳಲ್ಲಿ ರಾಜಸ್ವ ಸ್ವೀಕೃತಿ-ರಾಜಸ್ವ ಪಾವತಿ, ಬಂಡವಾಳ ಸ್ವೀಕೃತಿ ಮತ್ತು ಬಂಡವಾಳ ಪಾವತಿ ಹಾಗೂ ಅಸಾಧಾರಣ ಸ್ವೀಕೃತಿ- ಅಸಾಧಾರಣ ಪಾವತಿ ಸೇರಿವೆ. ಮನೆ ಕಂದಾಯ, ನೀರಿನ ತೆರಿಗೆ, ವಿದ್ಯುತ್ ಬಿಲ್, ಕಸವಿಲೇವಾರಿ, ನೌಕರರ ವೇತನ ಪಾವತಿಯು ರಾಜಸ್ವ ಸ್ವೀಕೃತಿ ಹಾಗೂ ಪಾವತಿಯಡಿ ಸೇರಿವೆ. ಸರ್ಕಾರಿ ನಿಯಮಾನುಸಾರ ಪಂಚಾಯತಿ ವ್ಯಾಪ್ತಿ ಎಲ್ಲಾ ಖರ್ಚು-ವೆಚ್ಚಗಳನ್ನು ಸರಿದೂಗಿಸಲು ಇದು ಉಪಯುಕ್ತವಾಗಿದೆ. ಸರ್ಕಾರದ ಮಾರ್ಗಸೂಚಿ ಅನುಸಾರ ಎಸ್‌ಎಸ್‌ಸಿ ನಿಧಿ, ಶಾಸಕರ ವಿಶೇಷ ಅನುದಾನವು ಸಾರ್ವಜನಿಕರಿಗೆ ವಿವಿಧ ಮೂಲಭೂತ ಸೌಕರ್ಯ ಕಲ್ಪಿಸಲು ಸಹಕಾರಿ ಆಗಿದೆ.
ಸರ್ಕಾರದ ಎಸ್‌ಎಫ್‌ಸಿ ಶೇ.24.10 ಯೋಜನೆ ಎಸ್‌ಸಿ/ಎಸ್‌ಟಿ ಸಮುದಾಯ ಅಭಿವೃದ್ದಿಗೆ, ಶೇ. 7.5 ಯೋಜನೆ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾದರೆ, ಶೇ5 ಅನುದಾನದಿಂದ ವಿಕಲಚೇತನರಿಗೆ ಅನುಕೂಲ ಕಲ್ಪಿಸಲು ಉಪಯೋಗಿಸುವುದು ಕಡ್ಡಾಯವಾಗಿದೆ ಎಂದರು.
ಸಿಬ್ಬಂದಿ ಆಸ್ಮಾ ಬಜೆಟ್ ಪ್ರತಿಯನ್ನು ಓದಿ ಸಭೆಯ ಗಮನಕ್ಕೆ ತಂದರು. ಪ್ರಸಕ್ತ ಸಾಲಿನಲ್ಲಿ ಬಜೆಟ್‌ನಲ್ಲಿ ಆರಂಭಿಕ ಶಿಲ್ಕು 5,52,26,907 ರೂ. ಆದಾಯ ಬಾಬ್ತಿ 17,82,40,375 ರೂ.ಗಳನ್ನು 23,02,36,308 ರೂ. ಖರ್ಚಾಗಲಿದ್ದು, 2026ರ ಮಾರ್ಚ್ 31ರ ಅಂತ್ಯಕ್ಕೆ ಅಖೈರು ಶಿಲ್ಕು 32,30,974 ರೂ. ಉಳಿಕೆ ಆಗುವ ನಿರೀಕ್ಷೆ ಇದೆ. ಇದರಲ್ಲಿ ಶೇ. 24.10ರಲ್ಲಿ ಪರಿಶಿಷ್ಟ ಜಾತಿ/ಪಂಗಡದ ಫಲಾನುಭವಿಗಳು, ಶೇ.7.25 ರಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ಫಲಾನುಭವಿಗಳಿಗೆ ಹಾಗೂ ಶೇ.5 ಅಡಿಯಲ್ಲಿ ವಿಕಲಚೇತನರಿಗೆ ಸೌಲಭ್ಯ ಕಲ್ಪಿಸಲು 8.25 ರೂ. ಲಕ್ಷ ಕಾಯ್ದಿರಿಸಲಾಗಿದೆ.

ಹೊಸನಗರ ಪಟ್ಟಣ ಪಂಚಾಯತಿ ನೂನ ಕಟ್ಟಡ ನಿರ್ಮಾಣಕ್ಕೆ 5 ಕೋಟಿ ರೂ. ಅನುದಾನ ಕಾಯ್ದಿರಿಸಿದ್ದು, ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪಾರಂಪರಿಕ ತ್ಯಾಜ್ಯ ವಿಲೇವಾರಿಗಾಗಿ ವಿವಿಧ ಮೆಷನರಿಗಳನ್ನು ಅಳವಡಿಸಲು 64.74 ರೂ. ಮೊತ್ತ ಹಾಗು ಕುಡಿಯುವ ನೀರಿನ ಸೌಲಭ್ಯಕ್ಕೆ ಆದ್ಯತೆ ಮೇಲೆ 16 ಲಕ್ಷ ರೂ. ಹಣ ಮೀಸಲಿಡಲಾಗಿದೆ. ಅಲ್ಲದೆ, ಹಲವು ಯೋಜನೆಗಳಿಗಾಗಿ ಬಜೆಟ್‌ನಲ್ಲಿ ಅನುದಾನ ಕಲ್ಪಿಸಲಾಗಿದೆ ಎಂದರು.
ಸಭೆಯಲ್ಲಿ ಉಪಾಧ್ಯಕ್ಷೆ ಚಂದ್ರಕಲಾ ನಾಗರಾಜ್, ಸದಸ್ಯರಾದ ಗಾಯತ್ರಿ ನಾಗರಾಜ್, ಸಿಂಥಿಯಾ ಶೆರಾವೋ, ಕೆ.ಎಸ್. ಗುರುರಾಜ್, ನೇತ್ರಾವತಿ, ಎಂ. ನಿತ್ಯಾನಂದ, ಶಾಹೀನ ನಾಸೀರ್, ಕೃಷ್ಣವೇಣಿ ಮಂಜುನಾಥ್ ಇದ್ದರು. ಉಳಿದಂತೆ ಸದಸ್ಯರಾದ ಸುರೇಂದ್ರ ಕೋಟ್ಯಾನ್, ಆರ್. ಗುರುರಾಜ್ ಅನುಪಸ್ಥಿತಿ ಸಭೆಯಲ್ಲಿ ಎದ್ದು ಕಾಣುತ್ತಿತ್ತು.
ಸಿಬ್ಬಂದಿಗಳಾದ, ಮಂಜುನಾಥ್, ನೇತ್ರರಾಜ್, ಪರಶುರಾಮ್, ಗಿರೀಶ್, ಉಮಾಶಂಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.