ಹೊಸನಗರ ; ಕರ್ನಾಟಕ ರಾಜ್ಯದಲ್ಲಿ ಮಾರ್ಚ್ 21ರಿಂದ ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆ ಆರಂಭವಾಗಿದ್ದು ಹೊಸನಗರ ತಾಲ್ಲೂಕಿನಲ್ಲಿ 1625 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದು ಏಳು ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಹೊಸನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್. ಕೃಷ್ಣಮೂರ್ತಿ ತಿಳಿಸಿದ್ದಾರೆ.
ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಆವರಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಹೊಸನಗರ ತಾಲ್ಲೂಕಿನಲ್ಲಿ 825 ಬಾಲಕರು ಹಾಗೂ 800 ಬಾಲಕಿಯರು 2024-25ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದು, ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅದರಂತೆ ಹೊಸನಗರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ್ ಆವರಣದ ಹೈಸ್ಕೂಲ್ ಶಾಲೆಯ ಆವರಣದಲ್ಲಿ ಖಾಸಗಿ ಶಾಲೆಯಾದ ಹೋಲಿ ರೆಡಿಮರ್ ಶಾಲೆಯ ಆವರಣದಲ್ಲಿ ರಿಪ್ಪನ್‌ಪೇಟೆ ಭಾಗಕ್ಕೆ ಅನುಕೂಲಕರವಾಗಿ ಪದವಿ ಕಾಲೇಜ್ ಆವರಣ ಹಾಗೂ ಸರ್ಕಾರಿ ಹೈಸ್ಕೂಲ್‌ನಲ್ಲಿ ನಗರದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಹಾಗೂ ನಿಟ್ಟೂರು ಜೆ.ಎಂ.ಎಫ್.ಸಿ ಶಾಲೆಯ ಆವರಣದಲ್ಲಿ ಪರೀಕ್ಷಾ ಕೇಂದ್ರಗಳಾಗಿ ಗುರುತಿಸಲಾಗಿದೆ.
ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಿ ತಮ್ಮ ಹಾಲ್ ಟಿಕೆಟ್ ನಂಬರ್‌ನಲ್ಲಿರುವ ತಮ್ಮ ಸ್ಥಳದಲ್ಲಿ ಕುಳಿತು ಪರೀಕ್ಷೆ ಬರೆಯಬೇಕೆಂದು ಹಾಗೂ ಈ ಶಾಲೆಯ ಸುತ್ತ-ಮುತ್ತ 100 ಮೀಟರ್‌ನಷ್ಟು ನಿಷೇಧಾಜ್ಞೆ ಇರುವುದರಿಂದ ಪೋಷಕರು ಹಾಗೂ ಇತರರು ಈ ಆವರಣದ ಒಳಗೆ ಪ್ರವೇಶಿಸಬಾರದೆಂದು ಈ ಮೂಲಕ ಕೇಳಿಕೊಂಡರು.