ಹೊಸನಗರ

ಉತ್ತಮ ಮಳೆ-ಬೆಳೆಯಾಗಿ ಸರ್ವರಿಗೂ ಸಮೃದ್ಧಿ ಲಭಿಸಲಿ: ಹೊಸನಗರ ತಹಶೀಲ್ದಾರ್ ಭರತ್‌ರಾಜ್ ಆಶಯ

Tehsildar Bharathraj prayed that the presiding deity, Sri Chamundeshwari, may bless the Malenadu region with abundant rainfall and good harvests, and bestow success and prosperity upon all the people.

Hosanagara Dasara

ಹೊಸನಗರ: ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯು ಮಲೆನಾಡಿನಾದ್ಯಂತ ಉತ್ತಮ ಮಳೆ-ಬೆಳೆ ಕರುಣಿಸಿ, ಸಮಸ್ತ ಜನತೆಗೆ ಯಶಸ್ಸು ಹಾಗೂ ಸಮೃದ್ಧಿಯನ್ನು ನೀಡಲಿ ಎಂದು ತಹಶೀಲ್ದಾರ್ ಭರತ್‌ರಾಜ್ ಪ್ರಾರ್ಥಿಸಿದರು.

WhatsApp Group Join Now
Telegram Group Join Now
Instagram Group Join Now

ಪಟ್ಟಣದಲ್ಲಿ ಆಯೋಜಿಸಲಾಗಿದ್ದ ವಿಜಯದಶಮಿ ಹಾಗೂ ದಸರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಇದಕ್ಕೂ ಮುನ್ನ ತಾಲ್ಲೂಕು ಕಚೇರಿ ಆವರಣದಲ್ಲಿರುವ ಉಪ ಖಜಾನೆ ಹಾಗೂ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಹಳೇ ಸಾಗರ ರಸ್ತೆಯ ಶ್ರೀ ರಾಮೇಶ್ವರ ದೇವಸ್ಥಾನದ ಆವರಣದಲ್ಲಿರುವ ಬನ್ನಿ ಮಂಟಪದಲ್ಲಿ ಸಾಂಪ್ರದಾಯಿಕ ಬನ್ನಿ ಪೂಜೆ ನೆರವೇರಿಸಲಾಯಿತು.

ನವರಾತ್ರಿಯ ಮೊದಲ ಮೂರು ದಿನ ದುರ್ಗೆ, ನಂತರದ ಮೂರು ದಿನ ಲಕ್ಷ್ಮಿ ಹಾಗೂ ಕೊನೆಯ ಮೂರು ದಿನ ಸರಸ್ವತಿಯ ಆರಾಧನೆ ಮಾಡಿ, ದಶಮಿಯಂದು ವಿಜಯಲಕ್ಷ್ಮಿಯನ್ನು ಪೂಜಿಸುವ ಪರಂಪರೆಯಿದೆ ಎಂದು ಸ್ಮರಿಸಿದ ಅವರು, “ಇತ್ತೀಚಿನ ದಿನಗಳಲ್ಲಿ ಯುವಜನತೆ ಹಬ್ಬಗಳ ಮೂಲ ಆಶಯ ಮರೆತು ಕೇವಲ ಕಾಟಾಚಾರಕ್ಕೆ ಆಚರಿಸುವ ಪ್ರವೃತ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ಯುವ ಪೀಳಿಗೆ ಹಿರಿಯರಿಂದ ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯಗಳ ಮಹತ್ವವನ್ನು ಅರಿತು, ಮುಂದಿನ ದಿನಗಳಲ್ಲಿ ಹಬ್ಬಗಳನ್ನು ಮತ್ತಷ್ಟು ಅರ್ಥಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಬೇಕು” ಎಂದು ಕರೆ ನೀಡಿದರು.

ಮೈಸೂರು ಅರಮನೆಯಲ್ಲಿ ರಾಜವಂಶಸ್ಥರು ನಡೆಸುವ ದಸರಾ ವೈಭವದಂತೆಯೇ, ರಾಜ್ಯದ ಪ್ರತಿ ಹಳ್ಳಿ-ಹಳ್ಳಿಗಳಲ್ಲೂ ನಾಡಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಇದಕ್ಕೆ ಹೊಸನಗರದ ಈ ಸಂಭ್ರಮವೇ ಸಾಕ್ಷಿ. ವಿಜಯದಶಮಿಯಂದು ಶಮೀ (ಬನ್ನಿ) ವೃಕ್ಷಕ್ಕೆ ಪೂಜೆ ಸಲ್ಲಿಸಿ, ಪರಸ್ಪರ ಬನ್ನಿ ವಿನಿಮಯ ಮಾಡಿಕೊಳ್ಳುವ ಮೂಲಕ ಎಲ್ಲರ ಬಾಳು ಬಂಗಾರವಾಗಲಿ ಎಂದು ಹಾರೈಸುವುದು ವಿಶೇಷವಾಗಿದೆ. ತಾಯಿ ಚಾಮುಂಡೇಶ್ವರಿ ತಾಲ್ಲೂಕಿನ ಜನತೆಗೆ ಆರೋಗ್ಯ, ಆಯುಷ್ಯ ಮತ್ತು ಸುಖ-ಶಾಂತಿ ಕರುಣಿಸಲಿ ಎಂದು ಭರತ್‌ರಾಜ್ ಶುಭ ಕೋರಿದರು.

ಮನರಂಜನೆ ನೀಡಲು 16 ಕಲಾತಂಡಗಳ ಮೆರವಣಿಗೆ:

ದಸರಾ ಉತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೇಟ್ ಮಾತನಾಡಿ, “ವರ್ಷಕ್ಕೊಮ್ಮೆ ಬರುವ ನಾಡಹಬ್ಬವನ್ನು ತಾಲ್ಲೂಕಿನ ಜನತೆ ಕಣ್ತುಂಬಿಕೊಳ್ಳಲಿ ಹಾಗೂ ಅವರಿಗೆ ಉತ್ತಮ ಮನರಂಜನೆ ಸಿಗಲಿ ಎಂಬ ಉದ್ದೇಶದಿಂದ ಈ ಬಾರಿ ಹಿಂದೆಂದಿಗಿಂತಲೂ ಅದ್ದೂರಿಯಾಗಿ ದಸರಾ ಆಯೋಜಿಸಲಾಗಿದೆ. ಮೆರವಣಿಗೆಯಲ್ಲಿ ಸುಮಾರು 16 ಕಲಾತಂಡಗಳು ಭಾಗವಹಿಸಿ ಉತ್ಸವಕ್ಕೆ ಮೆರುಗು ನೀಡಿವೆ. ಮುಂದಿನ ವರ್ಷ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕಾರ್ಯಕ್ರಮ ರೂಪಿಸಲಾಗುವುದು. ದೇವಿಯ ಕೃಪೆಯಿಂದ ನಾಡಿನಲ್ಲಿ ಶಾಂತಿ, ನೆಮ್ಮದಿ ನೆಲೆಸಲಿ” ಎಂದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ್, ಗ್ರೇಡ್-2 ತಹಶೀಲ್ದಾರ್ ಸುಧೀಂದ್ರಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ಗೌಡಪ್ಪ ಗೌಡರ್, ಸಬ್ ಇನ್ಸ್‌ಪೆಕ್ಟರ್ ಸಂತೋಷ್, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ದಸರಾ ಸಮಿತಿ ಉಪಾಧ್ಯಕ್ಷ ವಿಠಲರಾವ್, ಕಾರ್ಯದರ್ಶಿ ಸುಧೀಂದ್ರ ಪಂಡಿತ್, ಸಹ ಕಾರ್ಯದರ್ಶಿ ಭೋಜಪ್ಪ ಗೌಡ, ನಾಡಹಬ್ಬ ಸಮಿತಿಯ ಶ್ರೀಧರ ಉಡುಪ, ವಿಜೇಂದ್ರ ಶೇಟ್, ವರ್ತಕರ ಸಂಘದ ಅಧ್ಯಕ್ಷ ಪೂರ್ಣೇಶ್, ಪ್ರಮುಖರಾದ ಶ್ರೀನಿವಾಸ್ ಕಾಮತ್, ಜಿ.ಟಿ. ಈಶ್ವರಪ್ಪ ಗೌಡ, ಮಿಲ್ ಈಶ್ವರಪ್ಪ ಗೌಡ, ಮುರುಳಿಧರ ಹತ್ವಾರ್, ನಾಗಪ್ಪ ಗಣೇಶ್ ಹಾಗೂ ಕಂದಾಯ ಇಲಾಖೆಯ ಚಿರಾಗ್, ಶಿರಸ್ತೇದಾರ್ ಕಟ್ಟೆ ಮಂಜುನಾಥ್, ಆರ್.ಐ ಆಂಜನೇಯ, ರೇಣುಕಯ್ಯ, ಸೇರಿದಂತೆ ತಾಲ್ಲೂಕು ಕಚೇರಿ, ಪಟ್ಟಣ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!