ರಿಪ್ಪನ್‌ಪೇಟೆ: ಪಟ್ಟಣದ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ಸ್ವಾಮಿ ದೇವಾಲಯದಲ್ಲಿ ವಿಜಯದಶಮಿಯ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ವಿಶೇಷ ಚಂಡಿಕಾ ಹೋಮ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.
ಹಬ್ಬದ ಅಂಗವಾಗಿ ಬೆಳಿಗ್ಗೆ ಶ್ರೀ ವರಸಿದ್ಧಿವಿನಾಯಕ ಸ್ವಾಮಿ ಹಾಗೂ ಜಗನ್ಮಾತೆ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಚಂಡಿಕಾ ಹೋಮವನ್ನು ಆಯೋಜಿಸಲಾಗಿತ್ತು. ಹೋಮದ ಪೂರ್ಣಾಹುತಿಯ ಬಳಿಕ ಉಭಯ ದೇವರುಗಳಿಗೆ ವಿಶೇಷ ಅಲಂಕಾರ ಪೂಜೆ, ಮಹಾಮಂಗಳಾರತಿ ಮತ್ತು ನೈವೇದ್ಯ ಸಲ್ಲಿಸಲಾಯಿತು. ತದನಂತರ ಭಕ್ತಾದಿಗಳಿಗೆ ತೀರ್ಥ-ಪ್ರಸಾದ ವಿತರಣೆ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ಜರುಗಿತು.
ವೈಭವದ ಉತ್ಸವ ಮತ್ತು ಬನ್ನಿ ವಿನಿಮಯ:
ಸಂಜೆ ಮಹಾಗಣಪತಿಯ ಉತ್ಸವ ಮೂರ್ತಿಯ ಮೆರವಣಿಗೆಯು ದೇವಸ್ಥಾನದಿಂದ ಹೊರಟು, ದೇಗುಲದ ಹಿಂಭಾಗದಲ್ಲಿರುವ ಬನ್ನಿ ಮಂಟಪಕ್ಕೆ ತಲುಪಿತು. ಅಲ್ಲಿ ಸಾಂಪ್ರದಾಯಿಕವಾಗಿ ಬನ್ನಿ ಪೂಜೆ ನೆರವೇರಿಸಿ ಬನ್ನಿ ಮುಡಿಯಲಾಯಿತು. ನೆರೆದಿದ್ದ ಭಕ್ತರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು, ‘ಬನ್ನಿ ತಗೊಂಡು ಬಂಗಾರದಂತೆ ಬಾಳಿ’ ಎಂದು ಶುಭ ಹಾರೈಸಿದರು.
ಗಮನ ಸೆಳೆದ ಜಂಗಿ ಕುಸ್ತಿ:
ವಿಜಯದಶಮಿ ಉತ್ಸವದ ವಿಶೇಷ ಆಕರ್ಷಣೆಯಾಗಿ ಸಾಂಪ್ರದಾಯಿಕ ಜಂಗಿ ಕುಸ್ತಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು. ವಿವಿಧ ಭಾಗಗಳಿಂದ ಆಗಮಿಸಿದ್ದ ಖ್ಯಾತ ಪೈಲ್ವಾನರು ಅಖಾಡದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಗ್ರಾಮೀಣ ಸೊಗಡಿನ ಈ ದೇಸಿ ಕ್ರೀಡೆಯು ನೆರೆದಿದ್ದ ಅಪಾರ ಜನಸ್ತೋಮವನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಿ.ಈ. ಮಧುಸೂದನ್ ಮತ್ತು ಸಮಿತಿಯ ಪದಾಧಿಕಾರಿಗಳು, ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ಸಮಿತಿಯ ಅಧ್ಯಕ್ಷ ಸುಧೀಂದ್ರ ಪೂಜಾರಿ, ಕಾರ್ಯದರ್ಶಿ ಎಂ. ನವೀನ್ ಸೇರಿದಂತೆ ಪ್ರಮುಖರಾದ ಸುರೇಶ್ ಸಿಂಗ್, ಎಂ.ಬಿ. ಮಂಜುನಾಥ, ಹೆಚ್.ಎನ್. ಚೋಳರಾಜ್, ವೈ.ಜೆ. ಕೃಷ್ಣ, ಎನ್. ಸತೀಶ್, ಈಶ್ವರ ಶೆಟ್ಟಿ ಹಾಗೂ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.

