HOSANAGARA ; ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಇಂದಿರಾ ಕ್ಯಾಂಟೀನ್ ಬಡವರಿಗೆ ಕೂಲಿಕಾರ್ಮಿಕರಿಗೆ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಭೋಜನಕ್ಕೆ ನೆರವಾಗುವಂತಹ ಉತ್ತಮ ಯೋಜನೆಯಾಗಿದ್ದು, ಇದನ್ನು ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯರವರೇ ಕಳೆದ ಅವಧಿಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಜಾರಿಗೆ ತಂದಿದ್ದರು. ರಾಜಕೀಯ ಬದಲಾವಣೆಯಿಂದ ಅಧಿಕಾರಕ್ಕೆ ಬಂದಂತಹಾ ಬಿಜೆಪಿ ಸರ್ಕಾರವು ಇದನ್ನು ಸ್ಥಗಿತಗೊಳಿಸಿತ್ತು. ಅದರೀಗ ಮತ್ತೆ ಸಿದ್ದರಾಮಯ್ಯರವರೇ ಮುಖ್ಯಮಂತ್ರಿಯಾಗಿದ್ದು, ತಟಸ್ಥಗೊಂಡಿರುವ ಇಂದಿರಾ ಕ್ಯಾಂಟೀನ್ ಗಳು ಮತ್ತೆ ಪುನರಾರಂಭಗೊಳ್ಳುತ್ತಿವೆ. ಈ ರೀತಿ ಪುನರಾರಂಭಗೊಳ್ಳುತ್ತಿರುವ ಇಂದಿರಾ ಕ್ಯಾಂಟೀನ್ ಹೊಸನಗರದಲ್ಲೂ ಅಂದಾಜು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಆರಂಭಗೊಳ್ಳುತ್ತಿದ್ದು, ಈ ಕಟ್ಟಡವು ಆರಂಭದಲ್ಲೇ ಶಿಥಿಲಾವಸ್ಥೆಯ ಹಾದಿ ಹಿಡಿದಂತಾಗಿದೆ.
ಹೌದು, ಇಲ್ಲಿನ ತಾಲ್ಲೂಕು ಕಛೇರಿಯ ಹಿಂಭಾಗದಲ್ಲಿ 3 ತಿಂಗಳಹಿಂದೆ ಕ್ಯಾಂಟೀನ್ ಗೆ ಬೇಕಾಗಿರುವ ಕೃತಕ ಕಟ್ಟಡ ನಿರ್ಮಾಣವಾಗಿದ್ದು ಬಿಟ್ಟರೇ ಇಲ್ಲಿ ಈವರೆಗೂ ಈ ಕೃತಕ ಕಟ್ಟಡಕ್ಕೆ ದ್ವಾರಬಾಗಿಲಾಗಲಿ, ಕಿಟಕಿಬಾಗಿಲಾಗಲಿ, ವಿದ್ಯುತ್ತಾಗಲಿ, ನೀರಿನ ಸೌಲಭ್ಯವಾಗಲಿ ಯಾವುದೇ ರೀತಿಯ ಅಭಿವೃದ್ದಿ ಕೆಲಸ ನಡೆದಿಲ್ಲ. ಅದರ ಬದಲು ಸಾರಾಯಿ ಕುಡುಕರ, ಧೂಮಪಾನಿಗರ ಮತ್ತು ಹಲವಾರು ದ್ವಿಚಕ್ರ ವಾಹನಗಳ ನೆಲೆಯೂರುವಂತ ಅಡ್ಡೆಯಾಗಿದ್ದು, ಇಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿರುವುದರಲ್ಲಿ ಅನುಮಾನವಿಲ್ಲ.
ತಾಲ್ಲೂಕಿನಲ್ಲಿ ಈಗಾಗಲೇ ಉತ್ತಮ ಮಳೆಯಾಗುತ್ತಿದ್ದು, ಇದರ ಮೇಲ್ಛಾವಣಿಯಿಂದ ಕಟ್ಟಡದ ಒಳಗೆ ಅಲ್ಲಲ್ಲಿ ಸೋರುತ್ತಿದ್ದು, ಆರಂಭದಲ್ಲೇ ಶಿಥಿಲಾವಸ್ಥೆಯ ಹಾದಿ ಹಿಡಿದಿದೆ ಏನೊ ಎಂಬ ಅನುಮಾನ ಸಾರ್ವಜನಿಕರಲ್ಲಿ ಉಂಟಾಗಿದೆ.
ತಾಲ್ಲೂಕು ಕಛೇರಿ, ತಾಲ್ಲೂಕು ಪಂಚಾಯಿತಿ, ಬಸ್ ನಿಲ್ದಾಣ, ಪಟ್ಟಣ ಪಂಚಾಯಿತಿ ಸೇರಿದಂತೆ ಹಲವು ಇಲಾಖೆಗಳು ಸಮೀಪದಲ್ಲೇ ಇದ್ದು, ಇಂದಿರಾ ಕ್ಯಾಂಟೀನ್ ಆರಂಭದಿಂದ ಅನೇಕರಿಗೆ ನೆರವಾಗುವ ಎಲ್ಲಾ ಲಕ್ಷಣಗಳೂ ಮೇಲ್ನೋಟಕ್ಕೆ ಕಂಡು ಬರುತ್ತದೆ.
ಕಾಗೋಡು ತಿಮ್ಮಪ್ಪರವರು ಶಾಸಕರಾಗಿ, ಸಚಿವರಾಗಿದ್ದಾಗ ಇದೇ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಚಿಂತನೆ ನಡೆದು ಕೆಲ ಕಾರಣಾಂತರದಿಂದ ಸ್ಥಗಿತವಾಗಿತ್ತು. ಹರತಾಳು ಹಾಲಪ್ಪರವರು ಶಾಸಕರಾದ ನಂತರ ಇಲ್ಲಿ ಯಾವುದೇ ಕಟ್ಟಡದ ನಿರ್ಮಾಣಕ್ಕೆ ಮುಂದಾಗಲಿಲ್ಲ. ಆದರೀಗ ಸರ್ಕಾರದ ಬದಲಾವಣೆಯಿಂದ ಕ್ಯಾಂಟೀನ್ ಪುನರಾರಂಭಗೊಳ್ಳುತ್ತಿರುವುದು ಅತಿ ಸಂತೋಷದಾಯಕವಾಗಿದೆ. ಶೀಘ್ರಾತಿಶೀಘ್ರ ಇಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಬೇಕಿದೆ ಎಂಬುದು ಬಡವರ ಕೂಲಿ ಕಾರ್ಮಿಕರ ಒತ್ತಾಸೆಯಾಗಿದೆ.
ವರದಿ : ಪುಷ್ಪಾ ಜಾಧವ್, ಹೊಸನಗರ