ಹೊಸನಗರ ; ಸಂಸ್ಥೆ ಸಹಕಾರಿ ತತ್ವದಡಿ ಕಾರ್ಯ ನಿರ್ವಹಿಸುತ್ತಿದ್ದು, ವಿವಿಧ ಸಮಾಜಮುಖಿ ಚಟುವಟಿಕೆಗಳ ಮೂಲಕ ಜಿಲ್ಲೆಯಲ್ಲಿ ಹೆಸರಾಗಿದೆ ಎಂದು ಇಲ್ಲಿನ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಗುಬ್ಬಿಗ ಅನಂತರಾವ್ ತಿಳಿಸಿದರು.
ಇಲ್ಲಿನ ಸ್ಪೋರ್ಟ್ಸ್ ಕ್ಲಬ್ ಆವರಣದಲ್ಲಿ ನಡೆದ 2024-25ನೇ ಸಾಲಿನ ಕ್ಲಬ್ನ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ತಾವು 2007ರಲ್ಲಿ ಅಧ್ಯಕ್ಷರಾದ ಬಳಿಕ ಸಾರ್ವಜನಿಕವಾಗಿ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಧಾರ್ಮಿಕ ಚಟುವಟಿಕೆ ಹಾಗು ದೇವಸ್ಥಾನ ನಿರ್ಮಾಣಕ್ಕೆ ದೇಣಿಗೆ, ಕ್ರೀಡಾಕೂಟ, ಜಾತ್ಯಾತೀತವಾಗಿ ಮಾರಣಾಂತಿಕ ಖಾಯಿಲೆಗೆ ಒಳಗಾದ ಆರ್ಥಿಕ ದುರ್ಬಲರಿಗೆ ಸಂಸ್ಥೆ ಸಹಾಯ ಹಸ್ತ ನೀಡುತ್ತ ಬಂದಿದೆ. ಸಂಸ್ಥೆ ತಮ್ಮದೇ ಆದ ನೂತನ ಸುಸಜ್ಜಿತ ಕಟ್ಟಡ ಹೊಂದಿದ್ದು ವರನಟ ಡಾ. ರಾಜ್ ಕುಮಾರ್ ಸೇರಿದಂತೆ ಹಲವು ಗಣ್ಯರನ್ನು ಸನ್ಮಾನಿಸಿರುವುದು ಸಂಸ್ಥೆಯ ಹೆಗ್ಗಳಿಕೆ ಎಂದರು.
ಪ್ರಸ್ತುತ ಸಾಲಿನಲ್ಲಿ 13.89 ಲಕ್ಷ ರೂ. ವಿವಿಧ ಮೂಲಗಳಿಂದ ಹಣ ಜಮೆಯಾಗಿದ್ದು, ₹ 9 ಲಕ್ಷಕ್ಕೂ ಅಧಿಕ ಹಣ ಜನಪರ ಕಾರ್ಯಗಳಿಗೆ ವಿನಿಯೋಗಿಸಲಾಗಿದ್ದು, ₹ 5 ಲಕ್ಷಕ್ಕೂ ಅಧಿಕ ಹಣ ಉಳಿಕೆಯಾಗಿದೆ ಎಂದು ಲೆಕ್ಕ ಪರಿಶೋಧನಾ ಕೋಶಾಧಿಕಾರಿ ಎಂ.ಪಿ.ಸುರೇಶ್ ತಿಳಿಸಿದರು.
ಸದಸ್ಯರಿಗೆ ಮರಣೋತ್ತರ ನಿಧಿ ಸ್ಥಾಪಿಸಲಾಗಿದ್ದು ಪ್ರಯೋಜನ ಪಡೆಯುವಂತೆ ಕೋರಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ಕಟ್ಟೆ ಸುರೇಶ್ ಸಮಾಜನಕ್ಕೆ ನೀಡಿದ ಸೇವೆಯನ್ನು ಸ್ಮರಿಸಿ ಸಂಸ್ಥೆಯ ವತಿಯಿಂದ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಅಲ್ಲದೆ, ಹಾಲಿ ಕಾರ್ಯಕಾರಿ ಮಂಡಳಿಯನ್ನು ಮುಂದಿನ ಐದು ವರ್ಷಗಳ ಅವಧಿಗೆ ಸರ್ವಾನುಮತದಿಂದ ಮುಂದುವರೆಸಲು ಸಭೆ ತೀರ್ಮಾನಿಸಿತು.
ವೇದಿಕೆಯಲ್ಲಿ ಉಪಾಧ್ಯಕ್ಷ ಬಿ.ಆರ್. ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಬಿ.ಎಂ.ಶ್ರೀಧರ್, ನಿರ್ದೇಶಕರಾದ ಹೆಚ್.ಬಿ. ಕಲ್ಯಾಣಪ್ಪಗೌಡ, ಎಂ.ವಿ.ಸುರೇಶ್, ಎಂ.ಎಸ್.ಶ್ರೀಕಾಂತ್, ಹೆಚ್.ಬಿ.ಸತ್ಯ ನಾರಾಯಣ, ಕೆ.ಬಿ.ಸತೀಶ್ ಕುಮಾರ್, ಬಿ.ಎನ್. ಮಹೇಂದ್ರ ಶೇಟ್ ಸೇರಿದಂತೆ ಪ್ರಮುಖರಾ ಉಮೇಶ್ ಕಂಚುಗಾರ್, ಎನ್. ದತ್ತಾತ್ರೇಯ ಉಡುಪ, ಎನ್.ಆರ್. ದೇವಾನಂದ್, ಶ್ರೀನಿವಾಸ್ ರೆಡ್ಡಿ, ಪಟ್ಡಣ ಪಂಚಾಯತಿ ಅಧ್ಯಕ್ಷ ನಾಗಪ್ಪ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕಿ ಅನುರಾಧ ಶೇಷಾಚಲಂ ಪ್ರಾರ್ಥಿಸಿ, ಬಿ.ಎಸ್. ಸುರೇಶ್ ಸ್ವಾಗತಿಸಿದರು. ಎಂ.ಪಿ.ಸುರೇಶ್ ವರದಿ ವಾಚಿಸಿ ವಂದಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





