ಹೊಸನಗರ ; ತಾಲ್ಲೂಕಿನ ಕೃಷಿ ಪರಿಕರ ಮಾರಾಟಗಾರರಿಗೆ ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಒಂದು ದಿನದ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಗಾರದಲ್ಲಿ ಸಹಾಯಕ ಕೃಷಿ ನಿರ್ದೇಶಕ ಸಚಿನ್ ಹೆಗಡೆ ಹಾಗೂ ಜಿಲ್ಲಾ ಜಾರಿದಳ ಸಹಾಯಕ ಕೃಷಿ ನಿರ್ದೇಶಕ ಶಶಿಧರ್ ತರಬೇತಿ ನೀಡಿದರು.
ತಾಲೂಕಿನ ರಸಗೊಬ್ಬರ, ಕೀಟನಾಶಕ ಹಾಗೂ ಬಿತ್ತನೆ ಬೀಜ ಮಾರಾಟಗಾರರಿಗೆ ಮುಂದಿನ ಮುಂಗಾರು ಹಂಗಾಮಿನ ಸಿದ್ಧತೆಗೆ ಸಂಬಂಧಿಸಿದಂತೆ, ಅಗತ್ಯ ಮಾಹಿತಿ ನೀಡಲಾಯಿತು.
ಕೃಷಿ ಪರಿಕರಗಳ ಕಾನೂನುಗಳು ಉಲ್ಲಂಘನೆ ಹಾಗೂ ರೈತರಿಗೆ ಯಾವುದೇ ತೊಂದರೆ ಆಗದಂತೆ ಕೃಷಿ ಪರಿಕರಗಳನ್ನು ಹೇಗೆ ಮಾರಾಟ ಮಾಡಬೇಕು? ರೈತರಲ್ಲಿ ಅಗತ್ಯಕ್ಕೆ ತಕ್ಕಂತೆ ಕಳೆನಾಶಕ ಹಾಗೂ ಸುರಕ್ಷಿತ ಕೀಟನಾಶಕದ ಬಳಕೆಯ ಕುರಿತು ಅರಿವು ಮೂಡಿಸುವುದು ಹೇಗೆ? ಅಲ್ಲದೆ ಹೆಚ್ಚಿನ ಲಾಭದಾಸೆಗೆ ಬಿದ್ದು ಕಳಪೆ ರಸಗೊಬ್ಬರ ಹಾಗೂ ಕೀಟನಾಶಗಳನ್ನು ಮಾರಾಟ ಮಾಡಿದಲ್ಲಿ, ಕಾನೂನುಗಳ ಉಲ್ಲಂಘನೆಯಾದಲ್ಲಿ ಕೃಷಿ ಇಲಾಖೆಯ ಮಾರಾಟಗಾರರ ಮೇಲೆ ಹಾಗೂ ಉತ್ಪಾದಕರ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳಲಿದೆ? ಏನೇನು ಶಿಕ್ಷೆಗಳು ಇರಲಿವೆ? ಎಂಬ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು.
ರಿಪ್ಪನ್‌ಪೇಟೆಯ ಕೃಷಿ ಅಧಿಕಾರಿ ಸುಶಾಂತ್ ಮತ್ತು ಇತರ ಅಧಿಕಾರಿಗಳು ಕಾರ್ಯಗಾರದಲ್ಲಿ ಹಾಜರಿದ್ದರು.
ಕಾರ್ಯಗಾರದ ಬಳಿಕ, ಕೃಷಿ ನಿರ್ದೇಶಕ ಸಚಿನ್ ಹೆಗಡೆ, ಸುದ್ದಿಗಾರರೊಂದಿಗೆ ಮಾತನಾಡಿ, ತಾಲ್ಲೂಕಿನಲ್ಲಿ ಈಗಾಗಲೇ ಪೂರ್ವ ಮುಂಗಾರು ಮಳೆಗಳು ಆರಂಭವಾಗಿದ್ದು, ರೈತರು ಮುಂಗಾರಿಗೆ ಭೂಮಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕೃಷಿ ಇಲಾಖೆಯೂ ಕೂಡ ಮುಂಗಾರು ಹಂಗಾಮಿಗೆ ಸಜ್ಜಾಗಿದ್ದು, ಹಂಗಾಮಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಇತರೆ ಪರಿಕರ ನೀಡಲು ಸಿದ್ಧತೆ ಮಾಡಿಕೊಂಡಿದೆ.
ಪ್ರಸಕ್ತ ಸಾಲಿನ ಏಪ್ರಿಲ್ ತಿಂಗಳವರೆಗೆ, ತಾಲ್ಲೂಕಿನಲ್ಲಿ ವಾಡಿಕೆ 40 ಮಿ.ಮೀ.ಗಿಂತ ಶೇ. 70 ಹೆಚ್ಚು ಅಂದರೆ, 70 ಮಿ.ಮೀ. ಮಳೆಯಾಗಿದ್ದು, ಉತ್ತಮ ಮುಂಗಾರಿನ ಮಳೆಯಾಗುವ ನಿರೀಕ್ಷೆಯಿದೆ ಎಂದರು.
ತಾಲ್ಲೂಕಿನಲ್ಲಿ ಸೂಕ್ತವಾಗಿ ಲೈಸೆನ್ಸ್ ಪಡೆಯದೇ, ದಿನಸಿ ಅಂಗಡಿಗಳಲ್ಲಿ ಹಾಗೂ ಹಾರ್ಡ್‌ವೇರ್ ಅಂಗಡಿಗಳಲ್ಲಿ ಮೈಲುತುತ್ತ ಹಾಗು ಸುಣ್ಣವನ್ನು ಮಾರಾಟ ಮಾಡುತ್ತಿದ್ದು, ಇದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಅಲ್ಲದೆ ಪಿಕಪ್ ವಾಹನಗಳಲ್ಲಿ ಅಕ್ರಮವಾಗಿ ಮೈಲುತುತ್ತ ಮಾರಾಟ ಮಾಡುತ್ತಿರುವ ಪ್ರಸಂಗವೂ ವರದಿಯಾಗಿದ್ದು, ಇವರ ಮೇಲೆ ಕೃಷಿ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ರೈತರು ಸಹ ಎಚ್ಚರಿಕೆಯಿಂದ ಲೈಸೆನ್ಸ್ ಪಡೆದ ಅಂಗಡಿಗಳಿಂದಲೇ ಉತ್ತಮ ಗುಣಮಟ್ಟದ ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಪಡೆದು ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಕೃಷಿ ಇಲಾಖೆಯೂ ರೈತಾಪಿ ವರ್ಗದ ಹಿತ ಕಾಪಾಡಲು ಅಗತ್ಯ ಎಚ್ಚರಿಕೆ ಕುರಿತಾದ ಪ್ರಕಟಣೆ ಬಿಡುಗಡೆಗೊಳಿಸಿತು.