ಹೊಸನಗರ ; ಸರ್ಕಾರಿ ನೌಕರ ಸಿಬ್ಬಂದಿಗಳು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಸ್ವಲ್ಪ ಬೇಜವಾಬ್ದಾರಿ ತೋರಿದಲ್ಲಿ, ಇಲಾಖೆಯ ಕಡತ ನಿರ್ವಹಣೆ ಹಾಗೂ ಮೂಲ ದಾಖಲಾತಿಯಲ್ಲಿ ಎಷ್ಟೆಲ್ಲಾ ವ್ಯತ್ಯಯ ಕಂಡು ಬಂದು ಸ್ವತ್ತಿನ ವಾರಸುದಾರ ಏನೆಲ್ಲಾ ತೊಂದರೆ ಅನುಭವಿಸುತ್ತಾನೆ ಎಂಬುದಕ್ಕೆ ಇಲ್ಲಿನ ಪಟ್ಟಣ ಪಂಚಾಯತಿ ಕಛೇರಿಯಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿರುವ ಆಸ್ತಿಗಳ ಅಕ್ರಮ ದಾಖಲೆ ತಿದ್ದುಪಡಿ ಜ್ವಲಂತ ಸಾಕ್ಷಿಯಾಗಿದೆ ಎಂದು ಪಟ್ಟಣ ಪಂಚಾಯತಿ ಸದಸ್ಯ ಕೆ.ಕೆ. ಅಶ್ವಿನಿಕುಮಾರ್ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 2025ರ ಮಾರ್ಚ್ ಅಂತ್ಯಕ್ಕೆ ಒಟ್ಟಾರೆ 2209 ನಿವೇಶನಗಳಿದ್ದು, ಇವುಗಳಲ್ಲಿ 1300 ಮನೆಗಳು ಹಾಗೂ 909 ಖಾಲಿ ನಿವೇಶನಗಳಿವೆ. ಕೆಲವರು ಪಂಚಾಯತಿ ವ್ಯಾಪ್ತಿಯ ಮುನ್ಸಿಪಾಲ್ ಸರ್ಕಾರಿ ಜಾಗದಲ್ಲಿ ವಾಸಕ್ಕೆ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಇಂತಹ ಪ್ರಕರಣದಲ್ಲಿ 1950ರಿಂದಲೂ ಸುಮಾರು 45 ನಿವೇಶನಗಳು ಮನೆಯ ಮಾಲೀಕರ ಹೆಸರಿನಲ್ಲಿದ್ದು, ಇದು ಅಸೆಸ್‌ಮೆಂಟ್ ದಾಖಲೆಗಳಲ್ಲಿ ನಮೂದಾಗಿದೆ. ಆದರೆ, 1980ರ ಅಸೆಸ್‌ಮೆಂಟ್‌ನಲ್ಲಿ ಈ ಎಲ್ಲಾ ಮನೆಯ ಮಾಲೀಕರನ್ನು ಏಕಾಏಕಿ ‘ಅನುಭವದಾರ’ ಎಂತಲೂ, ಈ ಎಲ್ಲಾ ಖಾತೆಗಳನ್ನು ‘ಮುನ್ಸಿಪಲ್ ಖಾತೆ’ ಎಂತಲೂ ನಮೂದಾಗಿದೆ. ಈ ಕುರಿತು ಕೂಲಂಕುಶವಾಗಿ ಪರಿಶೀಲನೆ ನಡೆಸಿ ತಮಗೆ ನ್ಯಾಯ ಒದಗಿಸುವಂತೆ ಎಲ್ಲಾ 45 ಖಾತೆದಾರರರು ಪಟ್ಟಣ ಪಂಚಾಯತಿಗೆ ಹಲವು ಬಾರಿ ಲಿಖಿತ ಮನವಿ ಸಲ್ಲಿಸಿದ್ದರೂ ಈವರೆಗೆ ಯಾವುದೇ ಪ್ರಯೋಜನ ಕಂಡು ಬಂದಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಸಿಬ್ಬಂದಿಗಳು ಈ ಬಗ್ಗೆ ಪರಿಶೀಲನೆ ಕೈಗೊಂಡಾಗ, ದಾಖಲಾತಿಯಲ್ಲಿ ಕೈಬರಹದ ವ್ಯತ್ಯಯ, ಬರವಣಿಗೆಯಲ್ಲಿ ಅಕ್ಷರದ ವ್ಯತ್ಯಾಸ ಕಂಡು ಬಂದಿದ್ದು, ಇದು ಹಿಂದಿನ ಸಿಬ್ಬಂದಿಗಳು ಉದ್ದೇಶ ಪೂರ್ವಕವಾಗಿಯೇ ಮಾಡಿದ ಕೃತ್ಯ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಸಂಗತಿಯನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಜೊತೆ ಚರ್ಚಿಸಲಾಗಿ, ತತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿರುತ್ತಾರೆ. ಪೌರಾಡಳಿತ ಕಾಯಿದೆ ಪ್ರಕಾರ 1970-71ರ ಖಾತೆ ಪುಸಕ್ತದಲ್ಲಿ ನಮೂದಾದ ಸ್ವತ್ತಿನ ಮಾಲೀಕರು ನಿಜವಾದ ಆಸ್ತಿ ಮಾಲೀಕರು ಎಂಬ ನಿಯಮವಿದೆ. ಅಲ್ಲದೆ, ಎಂಎಆರ್-19ರಲ್ಲಿ ಈ ಎಲ್ಲಾ ಖಾತೆದಾರರ ಹೆಸರೇ ನಮೂದಾಗಿದೆ. ಈ ಕುರಿತು ಸೂಕ್ತ ನ್ಯಾಯ ಒದಗಿಸುವಂತೆ ಈಗಾಗಲೇ ಜಿಲ್ಲಾಡಳಿತಕ್ಕೆ ಖಾತೆದಾರರು ಮನವಿ ಸಲ್ಲಿಸಲಾಗಿದ್ದು, ಅಗತ್ಯ ಕ್ರಮದ ನಿರೀಕ್ಷೆಯಲಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಪಟ್ಟಣ ಪಂಚಾಯತಿ ಸದಸ್ಯೆ ಶಾಹೀನ, ಆಶ್ರಯ ಸಮಿತಿ ಸದಸ್ಯ ನಾಸೀರ್, ಖಾತಾ ಹಕ್ಕು ಹೋರಾಟ ಸಮಿತಿ ಸದಸ್ಯರಾದ ಎಸ್. ರಾಧಾಕೃಷ್ಣ, ರಜಾಕ್, ನಾಗಪ್ಪ ಇತರರು ಇದ್ದರು.