ಜೆಜೆಎಂ ಕಾಮಗಾರಿ ಅನುಷ್ಠಾನದಲ್ಲಿ ಮೀನಾ-ಮೇಷ ಎಣಿಸಿದರೆ ಅಧಿಕಾರಿಗಳೇ ಹೊಣೆ ; ಜಿ.ಪಂ. ಸಿಇಒ ಎನ್. ಹೇಮಂತ್ ಎಚ್ಚರಿಕೆ

Written by malnadtimes.com

Published on:

HOSANAGARA ; ಇತ್ತೀಚಿನ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ತಾಲೂಕಿನಲ್ಲಿ ಜೆಜೆಎಂ ಕುಡಿಯುವ ನೀರಿನ ಯೋಜನೆಯ ಅನುಷ್ಠಾನದಲ್ಲಿ ವ್ಯಾಪಕ ಹಿನ್ನಡೆಯಾಗಿದೆ ಎಂಬ ವಿಷಯ ಭಾರೀ ಚರ್ಚೆಗೆ ಗ್ರಾಸವಾದ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಎನ್. ಹೇಮಂತ್ ತಾಲೂಕಿನ ವಿವಿಧೆಡೆ ಯೋಜನೆ ಅನುಷ್ಠಾನಗೊಳ್ಳುವ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸದರು. ಬಳಿಕ ಇಲ್ಲಿನ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಗುತ್ತಿಗೆದಾರರು ಹಾಗು ಗ್ರಾಮೀಣ ಕುಡಿಯುವ ನೀರು ಹಾಗು ನೈರ್ಮಲ್ಯ ಇಲಾಖೆ ಅಧಿಕಾರಿಯೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ವಾರದೊಳಗಾಗಿ ತಾಲೂಕಿನ ಎಲ್ಲೆಡೆ ಜೆಜೆಎಂ ಕಾಮಗಾರಿ ಆರಂಭವಾಗಬೇಕು. ತಪ್ಪಿದಲ್ಲಿ ಸಂಬಂಧಿತ ಇಲಾಖೆಯ ಅಧಿಕಾರಿಗಳನ್ನೆ ಹೊಣೆ ಮಾಡಲಾಗುವುದು ಎಂಬ ಕಟ್ಟೆಚ್ಚರ ನೀಡಿದರು.

WhatsApp Group Join Now
Telegram Group Join Now
Instagram Group Join Now

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಜೆಜೆಎಂ ಗ್ರಾಮೀಣ ಕುಡಿಯುವ ನೀರಿನ ಸರಬರಾಜು ಯೋಜನೆಯಿಂದ ದೇಶದ ಪ್ರತಿ ಮನೆಗೂ ಶುದ್ದ ಕುಡಿಯುವ ನೀರು ದೊರೆಯುವಂತೆ ಯೋಜನೆ ರೂಪಿಸಲಾಗಿದೆ. 2019ರಲ್ಲಿ ಆರಂಭಗೊಂಡ ಯೋಜನೆ ಕರೋನ ಹಿನ್ನಲೆಯಲ್ಲಿ ಕುಂಠಿತಗೊಂಡಿತ್ತು. ಆದರೆ, ಕರೋನ ಮಾಯವಾಗಿ ಎರಡು ವರ್ಷ ಕಳೆದರೂ ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಯೋಜನೆಯ ಅನುಷ್ಟಾನಕ್ಕೆ ಮುಂದಾಗಿಲ್ಲ. ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ತಾಲೂಕಿನಲ್ಲಿ ಈವರೆಗೆ 09 ಕಾಮಗಾರಿ ಅನುಷ್ಠಾನಕ್ಕೆ ಅರಣ್ಯ ಇಲಾಖೆಯ ಒಪ್ಪಿಗೆಗೆ ಕಾದಿದೆ. 11 ಕಾಮಗಾರಿಗಳ ಪ್ರಾರಂಭಕ್ಕೆ ಗುತ್ತಿಗೆದಾರರು ಈವರೆಗೆ ಮೀನಾ-ಮೇಷ ಎಣಿಸುತ್ತಿದ್ದಾರೆ. ಎರಡು ಕಾಮಗಾರಿಗಳಿಗೆ ಇಲಾಖೆ ಸಿಬ್ಬಂದಿಗಳು ಕಾಮಗಾರಿ ನಿರ್ವಹಣೆ ಆದೇಶ ಪತ್ರವನ್ನೆ  ನೀಡಿಲ್ಲ. ಈ ನಡುವೆ ಕೆಲವು ಕಾಮಗಾರಿಗಳು ಕುಂಟುತ್ತಾ ಸಾಗಿದೆ. 

ಗುತ್ತಿಗೆದಾರರು ತಮ್ಮ ಅರ್ಹತೆ ಮೇಲೆ ಕಾರ್ಯ ನಿರ್ವಹಿಸಲಿ. ಏಕಕಾಲಕ್ಕೆ ಐದಾರು ಟೆಂಡರ್ ಪಡೆದು ಕಾಮಗಾರಿ ವಿಳಂಬಕ್ಕೆ ಮುಂದಾದರೆ ತಾವು ಸಹಿಸುವುದಿಲ್ಲ. ಓರ್ವ ಗರಿಷ್ಟ ನಾಲ್ಕು ಟೆಂಡರ್ ಪಡೆದು ಶೀಘ್ರ ಕಾಮಗಾರಿ ಪೂರೈಸಲಿ. ಒಬ್ಬರೇ ಹೆಚ್ಚು ಕಾಮಗಾರಿ ಟೆಂಡರ್ ಪಡೆದರೆ ಕೆಲಸ ನಿರ್ವಹಿಸಲು ಅಸಾಧ್ಯ ಆಗುವುದು. ವಿಳಂಬ ಮಾಡಿದ ಗುತ್ತಿಗೆದಾರರಿಗೆ ನೋಟೀಸ್ ನೀಡಿ  ಟೆಂಡರ್ ರದ್ದು ಮಾಡಿ. ಗವಟೂರು ಕಾಮಗಾರಿ ಆರಂಭಕ್ಕೆ ಶಾಸಕರ ಅನುಮತಿ ಪಡೆದು ಶೀಘ್ರ‌ ಕೆಲಸ ಆರಂಭಿಸಿ. ಜನವರಿ ಮೊದಲ ವಾರದೊಳಗೆ ಮರು ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು. ಟ್ಯಾಂಕ್ ನಿರ್ಮಾಣಕ್ಕೆ ಸಮಸ್ಯೆ ಇರುವ ಕಡೆ ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ ಸ್ಥಳ ಖಾತ್ರಿ ಪಡಿಸಿಕೊಳ್ಳಿ. ಕಾಮಗಾರಿ ಆರಂಭಿಸದ ಗುತ್ತಿಗೆದಾರರಿಗೆ ಎರಡು ನೋಟಿಸ್ ಕೊಟ್ಟು ಗುತ್ತಿಗೆ ರದ್ದು ಪಡಿಸಿ ಮರು ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಿ. ಎಲ್ಲಾ ಕಾಮಗಾರಿಗಳು ತಮ್ಮ ಮುಂದಿನ ಭೇಟಿಯೊಳಗೆ ಚಾಲನೆಗೊಂಡಿರ ಬೇಕು ಎಂಬ ಕಟ್ಟಾಜ್ಞೆ ಮಾಡಿದರು.

ಕಮ್ಮಚ್ಚಿ, ಅಮೃತ ಸೇರಿದಂತೆ ಕಾಮಗಾರಿಗಳ ರೀ ಟೆಂಡರ್ ಮಾಡಿ. ಈಗಾಗಲೆ ಇಪ್ಪತ್ತು ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಇದೆ. ಯೋಜನೆಯ ಅಗತ್ಯವಿಲ್ಲ ಎನ್ನುವ ನಿಟ್ಟೂರು ಗ್ರಾಮ ಪಂಚಾಯತಿ ವತಿಯಿಂದ ಹಿಂಬರಹ ಪಡೆಯಿರಿ. ನಂತರ ಇಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿ ಎಂಬ ನಿರ್ದೇಶನ ನೀಡಿದರು.

ತಾಲೂಕು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಪ್ರಸಾದ್ ಮಾತನಾಡಿ, ಬಸವಾಪುರದಲ್ಲಿ ಟ್ಯಾಂಕ್ ನಿರ್ಮಾಣಕ್ಕೆ ಸ್ಥಳಾವಕಾಶದ ಕೊರತೆ ಇದೆ. ತಮ್ಮಡಿಕೊಪ್ಪ, ದೊಬೈಲಿನಲ್ಲಿ ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡಿದ್ದು ಒಎಸ್ಟಿ ಕಾಮಗಾರಿ ಶೀಘ್ರ ನಡೆಯಬೇಕಿದೆ. ಇನ್ನು ಚಿಕ್ಕಜೇನಿ, ಹಿರೇಜೇನಿಯಲ್ಲಿ ಮುಂದಿನವಾರ ಕಾಮಗಾರಿ ಆರಂಭವಾಗಲಿದೆ.

ವಾರಂಬಳ್ಳಿಯಲ್ಲಿ ಅರಣ್ಯ ಸಮಸ್ಯೆ ಇದೆ. ಸಾವಂತೂರು, ಮುಂಬಾರು ಮರು ಟೆಂಡರ್ ಕರೆಯಬೇಕಿದೆ. ಬೇಹಳ್ಳಿ ಪೈಪ್ ಲೈನ್ ಆರಂಭವಾಗಿದೆ. ಹಿರಿಯೋಗಿ, ಕುಂಬತ್ತಿ, ಮುತ್ತೂರಿನಲ್ಲಿ ಅರಣ್ಯ ಸಮಸ್ಯೆ ಕಾಮಗಾರಿ ವಿಳಂಬಕ್ಕೆ ಕಾರಣ ಎಂದು ಸಭೆ ಮಾಹಿತಿ ನೀಡಿದರು.

ಸಭೆಯಲ್ಲಿ ಹಲವು ಗುತ್ತಿಗೆದಾರರ ಸಹಿತ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಹಾಗು ನೈರ್ಮಲ್ಯ ಇಲಾಖೆಯ ಕಾರ್ಯ ಪಾಲಕ ಅಭಿಯಂತರ ರೂಪ್ಲನಾಯ್ಕ್ ಇದ್ದರು.

Leave a Comment