ಅಕ್ರಮ ಭೂ ಒತ್ತುವರಿ ಮಾಡಿ ಲಕ್ಷಾಂತರ ರೂ. ಬೆಲೆ ಬಾಳುವ ಮರಗಳ ಕಡಿತಲೆ | ಕಂದಾಯ, ಅರಣ್ಯ ಇಲಾಖೆಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಗಂಭೀರ ಆರೋಪ

Written by malnadtimes.com

Updated on:

HOSANAGARA ; ತಾಲೂಕಿನ ಹುಂಚ ಹೋಬಳಿ ಬಿದರಹಳ್ಳಿ ಗ್ರಾಮದ ಮಂಡ್ಲಿಕಾನು ಸರ್ವೆ ನಂಬರ್ 47ರ ಕಂದಾಯ ಭೂಮಿಯಲ್ಲಿ ಹುಲುಸಾಗಿ ಬೆಳೆದಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ಹೊನ್ನೆ, ಶ್ರೀಗಂಧ, ನಂದಿ, ನೇರಳೆ, ಜಾಲ, ಮಸೆ ಸೇರಿದಂತೆ ಅನೇಕ ಕಾಡುಜಾತಿಯ ಮರಗಳನ್ನು ಪ್ರಭಾವಿಯೊಬ್ಬರು ಏಕಾಏಕಿ ಕಡಿತಲೆ ಮಾಡಿ, ಸುಟ್ಟು ಹಾಕಿ ಅಕ್ರಮ ಭೂ ಒತ್ತುವರಿ ಮಾಡಿ ಕೃಷಿ ನಿರತವಾಗಿದ್ದಾರೆ. ತತಕ್ಷಣ ಒತ್ತುವರಿ ತೆರವುಗೊಳಿಸಿ ಮುಂದಾಗಬಹುದಾದ ಅರಣ್ಯ ನಾಶ ತಡೆಯುವಂತೆ ಮಾಜಿ ಸೈನಿಕ, ಗ್ರಾಮ ಪಂಚಾಯತಿ ಸದಸ್ಯ ಲಿಂಗರಾಜು ಬಂಡಿ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಇತ್ತೀಚೆಗೆ ಪತ್ರಕರ್ತರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಅವರು, ಪಶ್ಚಿಮಘಟ್ಟದ ವ್ಯಾಪ್ತಿಯ ಅರಣ್ಯ ವಾಸಿಗಳಿಗೆ ಭೂ ಸಾಗುವಳಿಗೆ ಸರ್ಕಾರ ಅನೇಕ ನಿರ್ಬಂಧ ವಿಧಿಸಿದ್ದರೂ, ಅರಣ್ಯ ನಾಶ ರಾಜಾರೋಷವಾಗಿ ನಡೆದೇ ಇದೆ. ಇದಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳ ನಿರ್ಲಕ್ಷ್ಯ, ಭ್ರಷ್ಠಾಚಾರ, ಸೋಗಲಾಡಿತನವೇ ಕಾರಣ ಎಂಬ ಗಂಭೀರ ಆರೋಪ ಮಾಡಿದರು.

ಇಲ್ಲಿನ ನೈಸರ್ಗಿಕ ಅರಣ್ಯ ಸಂಪತ್ತನ್ನು ನಾಶಪಡಿಸಿ, ಕಂದಾಯ ಭೂಮಿಯನ್ನು ವಶಕ್ಕೆ ಪಡೆದು ಕೃಷಿ ಚುಟುವಟಿಕೆಗೆ ಮುಂದಾಗುವುದು ಭೂದಾಹಿಗಳ ಹುನ್ನಾರಕ್ಕೆ ಅಂತ್ಯವೇ ಇಲ್ಲ ಎಂಬಂತೆ ತೋರಿಬರುತ್ತಿದೆ. ಕಲ್ಲೂರು – ಬಿದರಹಳ್ಳಿ ಸಂಪರ್ಕ ರಸ್ತೆಯ ಪೂರ್ವಭಾಗದ ಪ್ರದೇಶವನ್ನು ಕೆಲವರು ಅಕ್ರಮ ಭೂ ಒತ್ತುವರಿ ಮಾಡಿ, ಕೃಷಿ ಮಾಡಿದ್ದು, ಈಗ ಪಶ್ಚಿಮಭಾಗದ ಅರಣ್ಯ ಪ್ರದೇಶದ ಒತ್ತುವರಿಗೆ ಮುಂದಾಗಿದ್ದಾರೆ. ಇದು ಅಕ್ಷಮ್ಯ.

ಟ್ರ್ಯಾಕ್ಟರ್, ಜೆಸಿಬಿಯಂತ ಬೃಹತ್ ಯಂತ್ರಗಳನ್ನು ಬಳಕೆ ಮಾಡಿ, ರಾತ್ರಿ ಕಳೆದು ಬೆಳಗಾಗುವುದರೊಳಗಾಗಿ ಬೆಳೆದ ಹತ್ತಾರು ವರ್ಷದ ತೆಂಗಿನ ಮರವನ್ನೇ ತಂದು ಗುಂಡಿತೋಡಿ ನೆಟ್ಟು ಸುಮಾರು ನಾಲ್ಕೈದು ಎಕರೆ ಅರಣ್ಯ ನಾಶಪಡಿಸಿ, ತಂತಿ ಬೇಲಿ ಹಾಕಿ ಭೂಮಿಯ ವಶಕ್ಕೆ ಮುಂದಾಗಿರುವುದು ದುರಂತವೇ ಸರಿ. ಈ ಕುರಿತು ಹಿಂದೆಯೇ ತಾಲೂಕು, ಜಿಲ್ಲಾಡಳಿತದ ಗಮನ ಸೆಳೆಯಲಾಗಿತ್ತು. ಜಿಲ್ಲಾಧಿಕಾರಿ ಸೂಚನೆಯಂತೆ ಕಂದಾಯ-ಪೊಲೀಸ್ ಇಲಾಖೆ ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಬೇಲಿ ಕಿತ್ತು, ಅಕ್ರಮ ಶೆಡ್ ನಿರ್ಮಾಣ ತೆರವುಗೊಳಿಸಿ, ಒತ್ತುವರಿದಾರ ಪ್ರದೀಪ್ ಎಂಬುವನಿಗೆ ಎಚ್ಚರಿಕೆ ನೀಡಿದ್ದರು. ಆದರೆ, ಅಂದಿನ ಕಂದಾಯ ನಿರೀಕ್ಷಕ ಇನಾಯತ್ ಖಾನ್ ಹಾಗು ಶಿರಸ್ತೇದಾರ್ ರಾಕೇಶ್ ಡಿಸೋಜ ಎಂಬುವವರು 5 ಲಕ್ಷ ರೂ‌. ಹಣ ಪಡೆದು ಅಕ್ರಮ ಒತ್ತುವರಿ ಮಾಡಲು ಬಿಟ್ಟಿದ್ದಾರೆ ಎಂಬ ಗಂಭೀರ ಆರೋಪವನ್ನು ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ವಾಸಪ್ಪಗೌಡ ಮಾಡಿದ್ದಾರೆ.

ಆದರೆ, ಮತ್ತದೇ ರೈತ ಪ್ರದೀಪ್ ಮತ್ಮೊಮ್ಮೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿ, ಕೃಷಿಗೆ ಮುಂದಾಗಿದ್ದಾನೆ. ಈ ಬೆಳವಣಿಗೆ ಗಮನಿಸಿದ ಕೆಲವು ಗ್ರಾಮಸ್ಥರು ಮತ್ತೊಮ್ಮೆ ಅಕ್ರಮ ಭೂ ಒತ್ತುವರಿ ತೆರವಿಗೆ ಒತ್ತಾಯಿಸುವ ಮೂಲಕ, ಅಳಿದುಳಿದಿರುವ ಅರಣ್ಯ ರಕ್ಷಣೆ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.

ಬಿದರಹಳ್ಳಿ ಸರ್ವೆ ನಂಬರ್ 47ರಲ್ಲಿ ಇರುವ ಒಟ್ಟು 369 ಎಕರೆ ಭೂ ಪ್ರದೇಶದಲ್ಲಿ 98.13 ಎಕರೆ ದನಗಳಿಗೆ ಮುಪತ್ತು, 162.12 ಎಕರೆ ರಾಜ್ಯ ಅರಣ್ಯ, 37.28 ಎಕರೆ ಪ್ರದೇಶವನ್ನು ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸರ್ಕಾರ ಕಾಯ್ದಿರಿಸಿದೆ. ಉಳಿದ ಕೆಲವು ಭಾಗದಲ್ಲಿ ರೈತಾಪಿಗಳು ಬಗರ್ ಹುಕುಂ ಸಾಗುವಳಿ ಮಾಡಿದ್ದು ಅವರಿಗೆ ಪಟ್ಟ ದೊರೆತಿದೆ.


2015ಕ್ಕೂ ಮುಂಚೆ ಕೃಷಿ ನಿರತರಿಗೆ ಗ್ರಾಮಸ್ಥರ ಚಕಾರವಿಲ್ಲ. ಆದರೆ, ಇತ್ತೀಚೆಗಷ್ಠೆ ದಟ್ಟ ಅರಣ್ಯ ನಾಶಪಡಿಸಿ ಕೃಷಿಗೆ ಮುಂದಾಗುವ ಸ್ಥಳೀಯ ಕೆಲವೇ ಬಲಾಡ್ಯರ ವಿರುದ್ದ ಗ್ರಾಮಸ್ಥರ ಆಕ್ರೋಶ-ತಕರಾರಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆ ಸಿಬ್ಬಂದಿಗಳು ಸೂಕ್ತ ಕ್ರಮಕ್ಕೆ ಮುಂದಾಗದಿದ್ದಲ್ಲಿ ಮುಂಬರುವ ದಿನಗಳಲ್ಲಿ ಗ್ರಾಮಸ್ಥರಿಗೆ ತೀವ್ರ ಪ್ರತಿಭಟನೆ ಎದುರಿಸಬೇಕಾದೀತು ಎಂಬ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದಾರೆ.

ಈ ವೇಳೆ ಸ್ಥಳೀಯರಾದ ಉಮೆಶ್, ಸತೀಶ್, ರಾಮಪ್ಪನಾಯ್ಕ, ಮಹೇಶ್, ರಾಜು ಸೇರಿದಂತೆ ಹಲವರು ಇದ್ದರು.

Leave a Comment