RIPPONPETE ; ಸುತ್ತಮುತ್ತಲಿನ ಗ್ರಾಮಗಳಲ್ಲಿನ ದಿನಸಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯವನ್ನು ಅವ್ಯಾಹತವಾಗಿ ಯಾವುದೇ ಭಯವಿಲ್ಲದೆ ಮಾರಾಟ ನಡೆಸಲಾಗುತ್ತಿದ್ದರೂ ಕೂಡಾ ಅಬಕಾರಿ ಇಲಾಖೆಯವರಾಗಲಿ, ಪೊಲೀಸ್ ಇಲಾಖೆಯವರಾಗಲಿ ತಮಗೂ ಇದಕ್ಕೂ ಏನು ಸಂಬಂಧವಿಲ್ಲವೆಂದು ಕಣ್ಮುಚ್ಚಿಕೊಂಡು ಕುಳಿತ್ತಿದ್ದಾರೆಂದು ಮದ್ಯಪಾನ ವಿರೋಧಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಠಾಣಾ ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲಿನ ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಸಲಾಗುತ್ತಿದ್ದು ಅಬಕಾರಿ ಇಲಾಖೆಯ ಅಧಿಕಾರಿಗಳು ಪ್ರತಿ ಹೋಟೆಲ್, ಕಿರಾಣಿ ಅಂಗಡಿಗಳಲ್ಲಿ ಮಾಮೂಲಿ ವಸೂಲಾತಿಯಲ್ಲಿ ತೊಡಗಿಕೊಂಡಂತೆ ಕಾಣುತ್ತಿದೆ. ರಾಜಾರೋಷವಾಗಿ ಈ ದಂಧೆ ನಡೆಯುತ್ತಿದ್ದು ಕೆಲ ಅಂಗಡಿಗಳಲ್ಲಿ ವಿಸಿಟ್ ಬುಕ್ ಇಟ್ಟು ವಾರಕ್ಕೆ 15 ದಿನಕ್ಕೆ ಭೇಟಿ ನೀಡುವ ನೆಪದಲ್ಲಿ ಬಂದು ವಿಸಿಟಿಂಗ್ ಬುಕ್‌ಗೆ ಸಹಿ ಹಾಕಿ ತಮ್ಮ ಕಿಸೆ ತುಂಬಿಸಿಕೊಂಡು ಹೋಗುತ್ತಿದ್ದಾರೆಂದು ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ.
ಎಂ.ಆರ್.ಪಿ ಗಿಂತ ಹೆಚ್ಚುವರಿ ಹಣ ವಸೂಲಿ :
ಇಲ್ಲಿನ ಹಲವು ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಮದ್ಯ ಖರೀದಿಸುವ ಗ್ರಾಹಕರಿಗೆ ಬಿಲ್ ನೀಡದೆ ಎಂ.ಆರ್.ಪಿ.ಗಿಂತ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ. ಕೇಳಿದರೆ ಬೇಕಾದರೆ ತೆಗೆದುಕೊಳ್ಳಿ ಇಲ್ಲದಿದ್ದರೆ ಹೋಗಿ ಎಂದು ಉಡಾಫೆ ಉತ್ತರ ನೀಡಿ ಹೆದರಿಸಿ ಬೆದರಿಸುತ್ತಾರೆಂದು ತಮ್ಮ ಅಸಹಾಯಕತೆಯನ್ನು ಮಾಧ್ಯಮದವರ ಬಳಿ ತೊಡಿಕೊಂಡರು.
ನಾವು ಯಾರಿಗೂ ಹೆದರುವುದಿಲ್ಲ ಪೊಲೀಸ್ ಠಾಣೆಗೆ ದೂರು ಕೊಡುತ್ತೀಯಾ ನಮಗೆ ಗೊತ್ತು ಯಾರು ಏನು ಮಾಡಲಾಗದು ಎಂದು ಹೇಳಿ ಹೆದರಿಸುತ್ತಾರೆ. ಕೆಲವರು ಅನಿವಾರ್ಯವಾಗಿ ಹೆಚ್ಚು ಹಣ ತೆತ್ತು ಮದ್ಯದ ಬಾಟಲಿ ಖರೀದಿಸಿಕೊಂಡು ಹೋಗುವಂತಾಗಿದೆ.
ಇತ್ತೀಚೆಗೆ ಠಾಣೆಗಳಲ್ಲಿ ಶಾಂತಿ ಸಮಿತಿ ಸಭೆಯಲ್ಲಿ ಸಹ ಈ ವಿಚಾರವಾಗಿ ಪ್ರಾಸ್ತಾಪವಾಗಿದ್ದು ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಮತ್ತು ಮದ್ಯ ಮಾರಾಟದ ಅಂಗಡಿಗಳಲ್ಲಿ ಬಿಲ್ ನೀಡದೆ ವ್ಯವಹಾರ ಮಾಡುತ್ತಾ ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ. ಒಂದು ಕಡೆಯಲ್ಲಿ ಸರ್ಕಾರ ತಿಂಗಳಲ್ಲಿ ಮದ್ಯದ ಬಾಟಲ್ ಬೆಲೆ ಏರಿಸುವುದು. ಇನ್ನೊಂದು ಕಡೆಯಲ್ಲಿ ಮದ್ಯದಂಗಡಿಯಲ್ಲಿ ಬಿಲ್ ನೀಡದೆ ಗ್ರಾಹಕರಿಂದ ಹೆಚ್ಚು ಹಣ ಪಡೆಯುವುದು ಇದರಿಂದಾಗಿ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಗ್ರಾಹಕರನ್ನು ಹಗಲು ದರೋಡೆ ಮಾಡುತ್ತಿದ್ದಾರೆಂದು ಇಲ್ಲಿನ ಹಲವು ಯುವಕರು ಆರೋಪಿಸಿದ್ದಾರೆ.
ರಿಪ್ಪನ್‌ಪೇಟೆಯಲ್ಲಿ ಎಂ.ಎಸ್.ಐ.ಎಲ್ ಒಂದು ಅಂಗಡಿ ಸೇರಿದಂತೆ ಖಾಸಗಿಯಾಗಿ ನಾಲ್ಕು ಬಾರ್ ಅಂಡ್ ರೆಸ್ಟೋರೆಂಟ್ ಇದ್ದು ಯಾವ ಅಂಗಡಿಯವರಿಂದ ಗ್ರಾಮೀಣ ಪ್ರದೇಶದ ಹಳ್ಳಿಗಳ ದಿನಸಿ ಕಿರಾಣಿ ಅಂಗಡಿಗಳಿಗೆ ಮದ್ಯ ಸರಬರಾಜು ಮಾಡಲಾಗುತ್ತಿದೆ ಎಂಬುದನ್ನು ಅಬಕಾರಿ ಅಧಿಕಾರಿಗಳು ಪತ್ತೆ ಹಚ್ಚಿ ಕಡಿವಾಣ ಹಾಕುವರೆ ಕಾದು ನೋಡಬೇಕಾಗಿದೆ. ಒಟ್ಟಾರೆ ಸರ್ಕಾರದ ಅಬಕಾರಿ ಪೊಲೀಸ್ ಇಲಾಖೆ ನಿಯಮವನ್ನು ಗಾಳಿಗೆ ತೂರಿ ಗ್ರಾಹಕರನ್ನು ಸುಲಿಗೆ ಮಾಡುತ್ತಿದ್ದಾರೆಂದರು.