ಹೊಸನಗರ ; ತಹಸೀಲ್ದಾರ್, ಪೊಲೀಸ್ ಹಾಗೂ ಅರಣ್ಯ ಅಧಿಕಾರಿಗಳ ಯಾವುದೇ ಭಯವೇ ಇಲ್ಲದೇ ಹೇಳೋರು, ಕೇಳೋರು ಯಾರೂ ಇಲ್ಲದೇ ಸೀಮಿತ ವರ್ಗದ ಹಾಗೂ ಸೀಮಿತ ಪಕ್ಷದವರ ವತಿಯಿಂದ ಎಗ್ಗಿಲ್ಲದೆ ನಡೆಯುತ್ತಿದೆ ಭೂತಾಯಿಯ ಒಡಲು ಬಗೆಯುವ ಕೆಲಸ.
ಹೌದು, ಒಂದೆಡೆ ಪಶ್ಚಿಮಘಟ್ಟ ಉಳಿವಿಗಾಗಿ ಪರಿಸರ ಪ್ರೇಮಿಗಳಿಂದ, ರೈತರಿಂದ, ಸಾರ್ವಜನಿಕರಿಂದ ಅನೇಕ ಸಂಘ-ಸಂಸ್ಥೆಗಳಿಂದ ಪ್ರತಿಭಟನೆ, ಹೋರಾಟ ನಡೆಸುತ್ತಿರುವಾಗ, ಇನೊಂದೆಡೆ ಅದೇ ಪಶ್ಚಿಮಘಟ್ಟದ ಅಳಿವಿಗೆ ಚುನಾಯಿತ ಪ್ರತಿನಿಧಿಗಳಾದಿಯಾಗಿ ಕೆಲ ಕಿಡಿಕೇಡಿಗಳು ತಮ್ಮ ಹೊಟ್ಟೆ ಭರಿಸಿಕೊಳ್ಳುವ ಉದ್ದೇಶದಿಂದ ಅದನ್ನು ಅಲ್ಲಗಳೆಯುವ ರೀತಿ ವಿಕೃತ ರೂಪದಲ್ಲಿ ವಿನಾಷಗೊಳಿಸುವ ಎಲ್ಲಾ ರೀತಿಯ ಕೆಲಸ ಇಲ್ಲಿ ನಡೆಯುತ್ತಿದೆ.
ಶಿವಮೊಗ್ಗ ಜಿಲ್ಲೆಯನ್ನು ಮಲೆನಾಡಿನ ಹೆಬ್ಬಾಗಿಲು ಎಂದೇ ಕರೆಯಲಾಗುತ್ತಿದೆಯಲ್ಲದೆ, ಪಶ್ಚಿಮಘಟ್ಟ ಕರಾವಳಿ ತೀರ ಎಂತಲೂ ಕರೆಯಲಾಗುತ್ತಿದೆ. ಇಂತಹ ಮಲೆನಾಡಿನ ಪಶ್ಚಿಮಘಟ್ಟದ ವಿವಿಧ ತಾಲ್ಲೂಕುಗಳಲ್ಲೊಂದಾದ ಹೊಸನಗರ ಸರ್ವೆ ನಂಬರ್ 20 ರಲ್ಲಿ ಹಿಂದುಗಳ ಆರಾಧ್ಯ ದೇವತೆಯಾದ ಶ್ರೀ ಚಾಮುಂಡೇಶ್ವರಿ ದೇವಸ್ಥಾನವಿದ್ದು ಇದರ ಪಕ್ಕದಲ್ಲಿಯೇ ಕಲ್ಲು ಗಣಿಗಾರಿಕೆ, ಅದರ ಪಕ್ಕದಲ್ಲಿಯೇ ಮಣ್ಣು ಅಗೆಯುವ ಕೆಲಸ ಎಗ್ಗಿಲ್ಲದೆ ಯಾರ ಭಯವಿಲ್ಲದೇ ಹಗಲು-ರಾತ್ರಿ ಎನ್ನದೆ ರಾಜಾರೊಷವಾಗಿ ನಡೆಯುತ್ತಿದೆ.
ತಾಲ್ಲೂಕಿನ ಜಯನಗರದ ಹಲವೆಡೆ ಸರ್ಕಾರಿ ಭೂಮಿ, ಗೋಮಾಳ ಅಥವಾ ಮೀಸಲು ಅರಣ್ಯ ಜಾಗದ ನೂರಾರು ಎಕರೆ ಜಮೀನುಗಳಲ್ಲಿ ಅಂದಾಜು 15 ಕ್ಕೂ ಅಧಿಕ ಕಲ್ಲು ಕ್ವಾರಿಗಳು ಚಾಲ್ತಿಯಲ್ಲಿದ್ದು, ಇವುಗಳಲ್ಲಿ ಕೇವಲ 2 ರಿಂದ 3 ಕಲ್ಲು ಕ್ವಾರಿಗಳಿಗೆ ಮಾತ್ರ ಪರವಾನಿಗೆ ಹೊಂದಿವೆ. ಇನ್ನುಳಿದವು ಯಾವುದೇ ಭಯವಿಲ್ಲದೆ ದಿನದ 24 ಗಂಟೆಯೂ ಕೆಲಸ ನಿರ್ವಹಿಸುತ್ತಿವೆ. ಈ ಮರಳು ಮತ್ತು ಕಲ್ಲು ಕ್ವಾರಿಗಳಿಂದ ದಿನ ಒಂದಕ್ಕೆ ಕನಿಷ್ಟ 60 ಲಾರಿ ಅಥವಾ ಟಿಪ್ಪರ್ ಗಳು ಗಣಿಗಾರಿಕೆ ನಡೆಯುವ ಸ್ಥಳದಿಂದ ಮುಖ್ಯ ರಸ್ತೆಗೆ ಹೊರಬರುತ್ತಿವೆ. ಟಿಪ್ಪರ್ ಲಾರಿಗಳು ಜಿಲ್ಲೆ, ಹೊರ ಜಿಲ್ಲೆಗಳ ವಿವಿಧ ತಾಲ್ಲೂಕುಗಳಿಗೆ ದಿನಂಪ್ರತಿ ನೂರಾರು ಲೋಡ್ ಮರಳು, ಕಲ್ಲು ತುಂಬಿ ಸಾಗಿಸಲಾಗುತ್ತಿದೆ.
ತಾಲ್ಲೂಕಿನ ಜಯನಗರದ ಕಸಬಾ ಹೋಬಳಿ ಸಾಲಗೇರಿ ಗ್ರಾಮದ ಸರ್ವೆ ನಂಬರ್ 20 ರಲ್ಲಿ ಸುಮಾರು 141 ಎಕರೆಗೂ ಹೆಚ್ಚು ಜಮೀನಿದ್ದು, ಇದರಲ್ಲಿ 40 ಎಕರೆಗೂ ಹೆಚ್ಚು ಎಕರೆ ಜಮೀನು ಗೋಮಾಳವಿದೆಯಲ್ಲದೇ, 85 ಎಕರೆಗೂ ಹೆಚ್ಚು ಅರಣ್ಯ ಇಲಾಖೆಗೆ ಮೀಸಲಿರುವ ಜಮೀನು ಇದೆ. ಅದೇ ರೀತಿಯಲ್ಲಿ ಇದೇ ಜಯನಗರದ ಹುಂಚ ಹೋಬಳಿಯ ರಾಮಚಂದ್ರಪುರ ಗ್ರಾಮದ ಸರ್ವೆ ನಂಬರ್ 44 ರಲ್ಲಿ 88 ಎಕರೆಗೂ ಅಧಿಕ ಜಮೀನಿದ್ದು, ಇದರಲ್ಲಿ 68 ಕ್ಕೂ ಅಧಿಕ ಗೋಮಾಳ ಜಮೀನಿದೆಯಲ್ಲದೇ, ಇದಕ್ಕೆ ಹೊಂದಿಕೊಂಡಂತೆ ರುದ್ರಭೂಮಿ ಇದೆ. ಇದರಲ್ಲಿ ಸರ್ವೆ ನಂಬರ್ 20 ರಲ್ಲಿ ಹಿಂದುಗಳ ಆರಾದ್ಯ ದೇವತೆಯಾದ ಶ್ರೀ ಚಾಮುಂಡೇಶ್ವರಿ ದೇವಸ್ಥಾನವಿದ್ದು ಇದರ ಪಕ್ಕದಲ್ಲಿಯೇ ಮತ್ತು ಸರ್ವೆ ನಂಬರ್ 44 ರ ರುದ್ರಭೂಮಿ ಪಕ್ಕದಲ್ಲಿಯೇ ಕಲ್ಲು ಗಣಿಗಾರಿಕೆ ಮತ್ತು ಮಣ್ಣು ಅಗೆಯುವ ಕೆಲಸ ನಡೆಯುತ್ತಿದೆ. ಇವೆರಡೂ ಹೊಸನಗರ ಹಾಗೂ ಬೈಂದೂರು ಮುಖ್ಯ ರಸ್ತೆಯ ಕೂಗಳತೆಯ ದೂರದಲ್ಲಿಯೇ ನಡೆಯುತ್ತಿವೆ.
ಅರಣ್ಯ, ಪೊಲೀಸ್, ಕಂದಾಯ ಇಲಾಖೆಗಳ ಅಧಿಕಾರಿಗಳು ಇದೇ ರಸ್ತೆಯಲ್ಲಿ ದಿನಂಪ್ರತಿ ಹತ್ತಾರು ಬಾರಿ ಓಡಾಡುತ್ತಿದ್ದರೂ, ಈ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ಕಿವಿ ಇದ್ದು ಕಿವುಡರಂತಿದ್ದು ಮೌನಕ್ಕೆ ಶರಣಾಗಿದ್ದಾರೆ. ಇಲ್ಲಿ ವಿವಿಧ ರಾಜಕೀಯ ಹಾಗೂ ಜನಪ್ರತಿನಿದಿಗಳ ಕೈವಾಡವಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಪ್ರಕೃತಿ ಮಡಿಲನ್ನು ಕಾಪಾಡಲು ಸಾರ್ವಜನಿಕರಿಗೆ ಬುದ್ದಿ ಹೇಳುವವರೇ ಗಣಿಗಾರಿಕೆಗೆ ಕುಮ್ಮಕ್ಕು ನೀಡಿದರೆ ಬೇಲಿಯೇ ಎದ್ದು ಹೊಲ ಮೇಯುವಂತಾಗುವುದರಲ್ಲಿ ಸಂದೇಹವಿಲ್ಲ.

ತಾಲ್ಲೂಕಿನ ಜಯನಗರ ಒಂದರಲ್ಲಿಯೇ ನಾಲ್ಕಕ್ಕೂ ಅಧಿಕ ಕಲ್ಲು ಕ್ವಾರಿಗಳಿವೆ ಎನ್ನಲಾಗುತ್ತಿದ್ದು, ಈ ಜಯನಗರದ ಚಾಮುಂಡೇಶ್ವರಿ ಬೆಟ್ಟಕ್ಕೆ ಹೊಂದಿಕೊಂಡಂತೆ ಒಂದು ಕಲ್ಲು ಕ್ವಾರಿ ಮತ್ತು ಮಣ್ಣು ಅಗೆಯುವುದರಿಂದ ಪ್ರಕೃತಿ ಹಾಗೂ ಪರಿಸರವನ್ನು ವಿಕೃತಗೊಳಿಸುತ್ತಿರುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿದೆ. ಇತ್ತೀಚೆಗಷ್ಟೆ ಪಟ್ಟಣದ ಶ್ರೀ ಚಾಮುಂಡೇಶ್ವರಿ ದೇವಿಯ ನವರಾತ್ರಿ ಉತ್ಸವ ಮುಗಿದು, ಇಲ್ಲಿ ಪ್ರತೀ ವರ್ಷ ವಿಜಯದಶಮಿಯನ್ನು ಸಾರ್ವಜನಿಕರಿಂದ ಬನ್ನಿ ಮುಡಿಯುವ ಹಬ್ಬ ಕೂಡ ನಡೆಯುತ್ತಿದೆ. ಈ ಚಾಮುಂಡಿ ಬೆಟ್ಟಕ್ಕೆ ಹೊಂದಿಕೊಂಡಿರುವ ಕಲ್ಲುಕ್ವಾರಿ ಮತ್ತು ಮಣ್ಣು ಅಗೆಯುವ ಕಾರ್ಯಾಚರಣೆಯಿಂದ ಶ್ರೀ ದೇವಿಯ ದೇವಸ್ಥಾನವು ವಿನಾಷದ ಹಾದಿ ಹಿಡಿಯಲಿದೆಯೇ ಎಂದು ಸಾರ್ವಜನಿರಿಗೆ, ಹಾಗೂ ಈ ದೇವಿಯ ಭಕ್ತರಿಗೆ ಆತಂಕ ಮತ್ತು ಭಯದ ವಾತಾವರಣ ಎದುರಾಗಿದೆ.
ಇಲ್ಲಿನ ಶ್ರೀ ಚಾಮುಂಡೇಶ್ವರಿ ದೇವಿಯ ಬೆಟ್ಟಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಕಳೆದ ಕೆಲವು ವರ್ಷಗಳ ಹಿಂದೆ ದೇವಿಯನ್ನು ಪುನರ್ ಪ್ರತಿಷ್ಟಾಪನೆ ಮಾಡಲಾಗಿದೆ. ಈ ದೇವಸ್ಥಾನದ ಬಳಿ ಹೋಗಲು ಸಿಸಿ ರಸ್ತೆಯ ನಿರ್ಮಾಣಕ್ಕಾಗಿ ಸಂಸದರಿಂದ 2 ಲಕ್ಷ ರೂಪಾಯಿ ಮತ್ತು ಇಲ್ಲಿನ ಸಮುದಾಯ ಭವನದ ಅಭಿವೃದ್ದಿ ಕಾರ್ಯಕ್ಕೆ ಇಲ್ಲಿನ ಪಂಚಾಯತಿಯಿಂದ 2 ಲಕ್ಷ ರೂಪಾಯಿ ಹಣ ಬಿಡುಗಡೆಯಾಗಿ ಈ ಸಮುದಾಯ ಭವನದಲ್ಲಿ ಈಗಾಗಲೆ 30 ರಿದ 40 ಅಧಿಕ ವಿವಾಹಗಳು ನಡೆದಿದೆ. ಇಂತಹಾ ಉತ್ತಮ ರಸ್ತೆಯಾಗಿರುವುದರಿಂದ ಕಲ್ಲು ಗಣಿಕಾರಿಕೆ ಮಾಡಿದ ಜಲ್ಲಿ, ಕಲ್ಲುಗಳನ್ನು, ಮತ್ತು ಮಣ್ಣು ಸಾಗಿಸಲು ಇನ್ನಷ್ಟೂ ಸುಗಮವಾಗಿದೆ. ಅಲ್ಲದೇ ಉತ್ತಮ ಸಮುದಾಯ ಭವನ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಅಪಾರ ಭಕ್ತ ವೃಂದವನ್ನು ಹೊಂದಿರುವ ದೇವಾಲಯವು ಕಲ್ಲುಕ್ವಾರಿ ಮತ್ತು ಮಣ್ಣು ಅಗೆತದಿಂದ ದೇವಸ್ಥಾನ, ಪರಿಸರ ಹಾಗು ಪ್ರಕೃತಿ ವಿನಾಶದ ಹಾದಿ ಹಿಡಿಯುದಕ್ಕೂ ಸಂಶಯವಿಲ್ಲ.
ಈ ಸಂದರ್ಭದಲ್ಲಿ ಕಲ್ಲು ಗಣಿಗಾರಿಕೆ ಮತ್ತು ಮಣ್ಣು ಅಗೆಯುವ ಸ್ಥಳಗಳಲ್ಲಿ ದೂಳಿನಿಂದ ಈ ಭಾಗದ ಜನಗಳಿಗೆ ಅಸ್ತಮ, ಕ್ಷಯ ಸೇರಿದಂತೆ ಹಲವಾರು ರೋಗ ರುಜಿನಗಳು ಬರುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿದೆ.
ಇನ್ನಾದರೂ ಜನಪ್ರತಿನಿದಿಗಳು, ಕಂದಾಯ, ಅರಣ್ಯ, ಪೊಲೀಸ್ ಇಲಾಖೆಗಳು ಎಚ್ಚೆತ್ತು ಕಲ್ಲುಕ್ವಾರೆ, ಮಣು ಅಗೆಯುವ, ಮರಳು ಮಾಫಿಯಗಳಿಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಪರಿಸರವಾದಿಗಳಿಂದ ಮತ್ತು ಸಾರ್ವಜನಿಕರಿಂದ ಬೃಹತ್ ಹೋರಾಟ ನಡೆಸುವ ಮಾತುಗಳು ಕೇಳಿ ಬರುತ್ತಿದೆ.
ವರದಿ ; ಪುಷ್ಪಾ ಜಾಧವ್, ಹೊಸನಗರ

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





