ಹೊಸನಗರ

ಭೂ ಒತ್ತುವರಿ ತೆರವು ಪ್ರಕ್ರಿಯೆಯಲ್ಲಿ ಅಕ್ರಮ ; ಸೂಕ್ತ ನ್ಯಾಯ ಒದಗಿಸಲು ಡಿಎಸ್ಎಸ್ ಆಗ್ರಹ

ಹೊಸನಗರ ; ತಾಲೂಕಿನ ಹುಂಚ ಹೋಬಳಿ ವಸವೆ ಗ್ರಾಮದ ಸರ್ವೆ ನಂಬರ್ 17ರ ಬಂಜರು ಗೋಮಾಳ ಪ್ರದೇಶದಲ್ಲಿ ರೈತ ಶ್ರೀಧರ್ ಬಿನ್ ರಾಜಪ್ಪಗೌಡ ಎಂಬಾತ ಸರ್ಕಾರಿ ಭೂಮಿಯನ್ನು ಅಕ್ರಮ ಒತ್ತುವರಿ ಮಾಡಿ ಅಡಿಕೆ, ಬಾಳೆ ಕೃಷಿ ಮಾಡಿದ್ದು, ಈ ಭಾಗದ ಗ್ರಾಮ ಪಂಚಾಯತಿ ಸದಸ್ಯನೋರ್ವನ ದೂರಿನ ಮೇರೆಗೆ ತಾಲೂಕು ಆಡಳಿತ ನಿನ್ನೆ ಏಕಾಏಕಿ ಪೊಲೀಸ್ ಹಾಗು ಕಂದಾಯ ಇಲಾಖೆ ಸಿಬ್ಬಂದಿಗಳ ಸಮ್ಮುಖದಲ್ಲಿ ಹುಲುಸಾಗಿ ಬೆಳೆದಿದ್ದ ಅಡಿಕೆ, ಬಾಳೆ ಮರಗಳನ್ನು ಕಡಿದು, ಒತ್ತುವರಿ ತೆರವಿಗೆ ಮುಂದಾಗ ಕ್ರಮವನ್ನು ಖಂಡಿಸಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಸದಸ್ಯರು ಇಲ್ಲಿನ ತಹಸೀಲ್ದಾರ್ ಕಚೇರಿ ಎದುರು ತಹಸೀಲ್ದಾರ್ ವಿರುದ್ದ ಘೋಷಣೆ ಕೂಗಿ, ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಕೆಲಕಾಲ ಧರಣಿ ನಡೆಸಿದ ಪ್ರಸಂಗ ನಡೆಯಿತು.

WhatsApp Group Join Now
Telegram Group Join Now
Instagram Group Join Now

ತಹಸೀಲ್ದಾರ್ ರಶ್ಮಿ ಅವರನ್ನು ಭೇಟಿ ಮಾಡಿದ ಡಿಎಸ್ಎಸ್ ಸಂಚಾಲಕರು, ವಸವೆ ಗ್ರಾಮದ ಸರ್ವೆ ನಂಬರ್‌ 17ರಲ್ಲಿ 36.04 ಎಕರೆ ಸರ್ಕಾರಿ ಜಾಗವಿದ್ದು, ಸುಮಾರು ಏಳೆಂಟು ಮಂದಿ ಅಕ್ರಮ ಭೂ ಒತ್ತುವರಿ ಮಾಡಿ ಕೃಷಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ, ಕೇವಲ ಶ್ರೀಧರ್ ಎಂಬ ರೈತನ 4.02 ಎಕರೆ ಕೃಷಿ ಭೂಮಿ ತೆರವಿಗೆ ತಾಲೂಕು ಆಡಳಿತ ಏಕಾಏಕಿ ಮುಂದಾದ ಕ್ರಮದ ಹಿಂದೆ ರಾಜಕೀಯ ಷಡ್ಯಂತ್ರ ಇದೆ. ಈ ಕುರಿತು ಈಗಾಗಲೇ ಲೋಕಾಯುಕ್ತದಲ್ಲಿ ಅಕ್ರಮ ತೆರವಿಗೆ ಗ್ರಾಮಸ್ಥರೇ ದೂರು ದಾಖಲಿಸಿದ್ದು, ಒತ್ತುವರಿ ತೆರವಿಗೆ ಆದೇಶ ನೀಡಿ ಹಲವು ತಿಂಗಳೇ ಸಂದಿದೆ. ಕೇವಲ ಶ್ರೀಧರ್ ಬಿನ್ ರಾಜಪ್ಪಗೌಡ ಎಂತ ರೈತನನ್ನೇ ತಾಲೂಕು ಆಡಳಿತ ಏಕೆ ಗುರಿಯಾಗಿಸಿದೆ..?!‌ ಕೂಡಲೇ ಎಲ್ಲಾ ಸರ್ಕಾರಿ ಭೂ ಒತ್ತುವರಿದಾರರನ್ನು ತೆರವುಗೊಳಿಸಲೇಬೇಕು ಎಂದು ಸಮಿತಿ ಒಕ್ಕೊರಲಿನಿಂದ ಆಗ್ರಹಿಸಿತು.

ಸಾರ್ವಜನಿಕರ ಹಿತಾಸಕ್ತಿ ಮೇರೆಗೆ ಶ್ರೀಧರ್ ಅವರ ಭೂ ಒತ್ತುವರಿ ತೆರವುಗೊಳಿಸಿದ್ದು, ಅಗತ್ಯ ದೂರು ಬಂದಲ್ಲಿ ಇದೇ ಸರ್ವೆ ನಂಬರಿನ ಅನಧಿಕೃತ ಒತ್ತುವರಿ ಸಹ ತೆರವಿಗೆ ಕ್ರಮಕೈಗೊಳ್ಳುವುದಾಗಿ ತಹಸೀಲ್ದಾರ್ ರಶ್ಮಿ ಪ್ರತಿಭಟನೆ ನಿರತರಿಗೆ ತಿಳಿಸಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಅರಮಡಿ ರಂಗಪ್ಪ, ತಾಲೂಕು ಸಂಚಾಲಕರಾದ ಗೇರುಪುರ ಅಣ್ಣಪ್ಪ, ಪ್ರಕಾಶ್, ಸಂತ್ರಸ್ತ ರೈತ ಶ್ರೀಧರ್, ವಿಠಲ್ ಗೌಡ ಮೊದಲಾದವರು ಇದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!