RIPPONPETE ; ಕಳೆದ 45 ವರ್ಷಗಳ ಹಿಂದಿನ ಹೋರಾಟದ ಸಾಧನೆಯ ನೆನಪಿನ ಕಾರ್ಯಕ್ರಮವನ್ನು ನವೆಂಬರ್ 20 ರಂದು ಬೆಂಗಳೂರಿನ ಕಲಾ ಪರೀಷತ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟಿ ಕಲ್ಲೂರು ಮೇಘರಾಜ್ ತಿಳಿಸಿದರು.
ಕಲ್ಲೂರು ಗ್ರಾಮದ ತಮ್ಮ ಸ್ವಗೃಹದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕರ್ನಾಟಕ ಲೋಕಾಸೇವಾ ಆಯೋಗದ ಮುಂದೆ ಪ್ರತಿಭಟನೆ ಮಾಡಿ ಆಯೋಗದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸಿಕೊಡಬೇಕೆಂಬ ಬೇಡಿಕೆಯೊಂದಿಗೆ ಆರಂಭಿಸಿದ್ದ 24 ಗಂಟೆಗಳ ಉಪವಾಸ ಸತ್ಯಾಗ್ರಹಕ್ಕೆ ಸ್ಪಂದಿಸಿದ ಆಗಿನ ಮುಖ್ಯಮಂತ್ರಿ ಡಿ.ದೇವರಾಜು ಅರಸು ಅವರು ಪರೀಕ್ಷೆಗಳನ್ನು ಕನ್ನಡದಲ್ಲೇ ಬರೆಯಲು ಅವಕಾಶ ಮಾಡಿಕೊಟ್ಟಿದ್ದರು. ಇಂಹತ ಒಂದು ಸಾಧನೆಯ ಹೋರಾಟಕ್ಕೆ 45 ವರ್ಷಗಳು ತುಂಬುತ್ತಿರುವ ಸುಸಂದರ್ಭದ ಕಾರಣ ಅದರ ಸವಿನೆನಪಿಗಾಗಿ ರಾಜಧಾನಿ ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಈ ಸಮಾರಂಭದಲ್ಲಿ ಭೂ ವಿದ್ಯಾದಾನ ಚಳವಳಿಯಲ್ಲಿ ಭೂದಾನಿಗಳಿಂದ ಬಂದಿದ್ದ ಶಾಲಾ ಜಮೀನು ಗೇಣಿ ಸಮಸ್ಯೆ ಮತ್ತು ನಿವಾರಣೆಯ ಬಗ್ಗೆ ಸಲಹೆ ಮತ್ತು ಅಭಿಪ್ರಾಯಗಳನ್ನು ಮುಖಂಡರು ಹಂಚಿಕೊಳ್ಳಲಿದ್ದಾರೆ.
ಹೊಸನಗರ ಮಾಜಿ ಶಾಸಕ ಬಿ.ಸ್ವಾಮಿರಾವ್ ಅಧ್ಯಕ್ಷತೆ ವಹಿಸುವರು. ಬಿ.ಎಲ್.ಶಂಕರ ಕಾರ್ಯಕ್ರಮ ಉದ್ಘಾಟಿಸುವರು.
1979 ನವೆಂಬರ್ 20 ಉಪವಾಸದ ನೆನಪು ಕುರಿತು ಸಾಹಿತಿಗಳಾದ ಕಾಳೇಗೌಡನಾಗವಾರ, ಬರಗೂರು ರಾಮಚಂದ್ರಪ್ಪ, ಹಂಪ ನಾಗರಾಜಯ್ಯ, ಕಲ್ಲೂರು ಮೇಘರಾಜ್, ಶಿವರಾಮೇಗೌಡ ನಾಗವಾರ, ರಾಮಣ್ಣ ಕೋಡಿಹಳ್ಳಿ, ಪತ್ರಕರ್ತರಾದ ಇ.ವಿ.ಸತ್ಯನಾರಾಯಣ, ಲಕ್ಷ್ಮಣ ಕೊಡಸೆ ಮಾತನಾಡಲಿದ್ದಾರೆ.
ಶಾಲಾ ಜಮೀನು ಗೇಣಿ ಸಮಸ್ಯೆ ಕುರಿತು ರೈತ ಹೋರಾಟಗಾರ ಕೆ.ಟಿ.ಗಂಗಾಧರ, ಬಿ.ಆರ್.ಜಯಂತ್, ಪಣಿರಾಜಪ್ಪ, ಪಿ.ಡಿ.ಮಂಜಪ್ಪ, ಟಿ.ಆರ್.ಕೃಷ್ಣಪ್ಪ, ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ.
ಶಾಂತವೇರಿ ಗೋಪಾಲಗೌಡ ಸಮಾಜವಾದಿ ಟ್ರಸ್ಟಿ ಬಗ್ಗೆ ಎಸ್.ವಿ.ರಾಜಮ್ಮ, ಎನ್.ನಾಗೇಂದ್ರರಾವ್, ಸುವರ್ಣ ನಾಗರಾಜ್, ಕಲ್ಲೂರು ಸಿ.ಈರಪ್ಪ, ಇನ್ನಿತರ ಗಣ್ಯರು ಪಾಲ್ಗೊಳ್ಳುವರು.
ಸುದ್ದಿಗೋಷ್ಠಿಯಲ್ಲಿ ಟಿ.ಆರ್.ಕೃಷ್ಣಪ್ಪ, ತಳಲೆ ಸಹಕಾರ ಸಂಘದ ನಿರ್ದೇಶಕ ಕೆ.ಎಸ್.ಲೋಕಪ್ಪಗೌಡ, ತಾ.ಪಂ. ಮಾಜಿ ಅಧ್ಯಕ್ಷ ವಾಸಪ್ಪಗೌಡ ಕಲ್ಲೂರು, ಜೆಡಿಎಸ್ ಮುಖಂಡ ಕಲ್ಲೂರು ಸಿ.ಈರಪ್ಪ, ತಿಮ್ಮಪ್ಪ ಬಿಕ್ಕಳ್ಳಿದಿಂಬ, ಕೆ.ವೈ.ನಾಗರಾಜ ಮತ್ತು ನಾಗರಾಜ ಇನ್ನಿತರರು ಹಾಜರಿದ್ದರು.