ರಿಪ್ಪನ್‌ಪೇಟೆ ಶಿವಮಂದಿರ ನೂತನ ಕಟ್ಟಡದ ಉದ್ಘಾಟನಾ ಧರ್ಮ ಸಮಾರಂಭ | ರಚನಾತ್ಮಕ ಸತ್ಕಾರ್ಯಗಳಿಂದ ಅಭಿವೃದ್ಧಿ ಸಾಧ್ಯ ; ರಂಭಾಪುರಿ ಜಗದ್ಗುರುಗಳು

Written by malnadtimes.com

Published on:

ರಿಪ್ಪನ್‌ಪೇಟೆ ; ಮಾನವನ ಬಾಳು ಉಜ್ವಲಗೊಳ್ಳಲು ನಿರಂತರ ಶ್ರಮ ಮತ್ತು ಪ್ರಯತ್ನ ಬೇಕು. ಕ್ರಿಯಾಶೀಲ ಜೀವನ ಶ್ರೇಯಸ್ಸಿಗೆ ಅಡಿಪಾಯ. ರಚನಾತ್ಮಕ ಸತ್ಕಾರ್ಯಗಳಿಂದ ಮಾತ್ರ ಸಮಾಜ ಮತ್ತು ಧರ್ಮ ಬಲಗೊಳ್ಳಲು ಸಾಧ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

WhatsApp Group Join Now
Telegram Group Join Now
Instagram Group Join Now

ಅವರು ಬುಧವಾರ ಶಿವಮಂದಿರ ನೂತನ ಕಟ್ಟಡದ ಉದ್ಘಾಟನಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಸಮಯ ಸ್ನೇಹ ಮತ್ತು ಆರೋಗ್ಯ ಇವುಗಳಿಗೆ ಬೆಲೆ ಕಟ್ಟಲಾಗದು. ಬಡತನ ಮನುಷ್ಯನಿಗೆ ಇರಬೇಕೇ ಹೊರತು ಮನಸ್ಸಿಗೆ ಇರಬಾರದು. ಶ್ರೀಮಂತಿಕೆ ಮನಸ್ಸಿಗಿರಬೇಕೇ ಹೊರತು ಮನುಷ್ಯನಿಗಿರಬಾರದು. ವೀರಶೈವ ಧರ್ಮ ಕಾಯಕ ತತ್ವಕ್ಕೆ ಬಹಳಷ್ಟು ಮಹತ್ವ ಕೊಟ್ಟಿದೆ. ಕಾಯಕವೇ ಕಳಾ ಚೈತನ್ಯವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಮತ್ತು ಕಾಯಕವೇ ಕೈಲಾಸವೆಂದು ಬಸವಣ್ಣನವರು ಹೇಳಿದ್ದಾರೆ. ಗುಣಾತ್ಮಕ ಚಿಂತನೆಗಳು ಶ್ರೇಯಸ್ಸಿಗೆ ಮೂಲ. ಮಾನಸಿಕವಾಗಿ ದೈಹಿಕವಾಗಿ ಸದೃಢನಾಗಿರುವ ವ್ಯಕ್ತಿ ಯಾರನ್ನೂ ಎಂದೂ ಅವಲಂಬಿಸಬೇಕಾಗಿಲ್ಲ. ಎಲ್ಲಾ ಕಡೆ ತಲೆ ಎತ್ತಿ ನಿಲ್ಲುವವನು ದೊಡ್ಡ ಮನುಷ್ಯ ಅಲ್ಲ. ಎಲ್ಲಿ ತಲೆ ತಗ್ಗಿಸಿ ನಿಲ್ಲಬೇಕು ಅಂತಾ ಗೊತ್ತಿರುವವನೇ ನಿಜವಾಗಿ ದೊಡ್ಡ ಮನುಷ್ಯ. ಆಹಾರ ಅರಿವೆ ಆವಾಸಗಳನ್ನು ಬದಲಾಯಿಸಿದಾಕ್ಷಣ ನೆಮ್ಮದಿ ಸಿಗುತ್ತದೆ ಎನ್ನಲಾಗದು. ರಿಪ್ಪನ್‌ಪೇಟೆ ವೀರಶೈವ ಸಮಾಜ ಬಾಂಧವರು “ಶಿವಮಂದಿರ” ನಿರ್ಮಾಣ ಮಾಡುವುದರ ಮೂಲಕ ಗೌರವ ತಂದಿದ್ದಾರೆ. ಈ ಸಭಾ ಭವನದ ನಿರ್ಮಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬಹಳಷ್ಟು ಸಹಕಾರ ಕೊಟ್ಟಿರುವುದು ಸಮಾಧಾನದ ಸಂಗತಿ. ಭವಿಷ್ಯತ್ತಿನಲ್ಲಿ ಇನ್ನಷ್ಟು ಜನ ಹಿತಾತ್ಮಕ ಅಭಿವೃದ್ಧಿ ಕಾರ್ಯಗಳು ನಡೆಯಲೆಂದು ಶ್ರೀ ರಂಭಾಪುರಿ ಜಗದ್ಗುರುಗಳು ಹಾರೈಸಿದರು.

ಸಮಾರಂಭ ಉದ್ಘಾಟಿಸಿದ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಮನುಷ್ಯ ಮನಸ್ಸು ಮಾಡಿದರೆ ಏನೆಲ್ಲ ಸಾಧನೆಯನ್ನು ಮಾಡಲು ಸಾಧ್ಯ. ದೇಹವನ್ನು ದುಡಿಮೆಗೆ ಮನಸ್ಸನ್ನು ಭಗವಂತನಿಗೆ ಅರ್ಪಿಸಿ ನಡೆದಾಗ ಜೀವನ ಸಾರ್ಥಕ. ಬಿ.ಎಸ್.ಯಡಿಯೂರಪ್ಪನವರು ಈ ಸಭಾಭವನ ನಿರ್ಮಾಣಕ್ಕೆ ಅಮೂಲ್ಯ ಕೊಡುಗೆ ಕೊಟ್ಟಿದ್ದಾರೆ. ವೀರಶೈವ ಸಮಾಜ ಬಾಂಧವರು ಸಾಮರಸ್ಯ ಸದ್ಭಾವನೆಗಳನ್ನು ಹೊಂದಿ ಸಮಾಜ ಕಟ್ಟಿ ಬೆಳೆಸುವ ಮತ್ತು ರಚನಾತ್ಮಕ ಕಾರ್ಯಗಳನ್ನು ಮಾಡಿದ್ದು ಹೆಮ್ಮೆಯ ಸಂಗತಿ. ಶ್ರೀ ರಂಭಾಪುರಿ ಜಗದ್ಗುರುಗಳವರು ಧರ್ಮ ಸಂಸ್ಕೃತಿ ಪರಂಪರೆ ಕಾಯಕ ಜೀವನ ಶ್ರೇಯಸ್ಸಿಗಾಗಿ ಸದಾ ಶ್ರಮಿಸುತ್ತಿರುವುದು ಭಕ್ತ ಸಂಕುಲಕ್ಕೆ ಹರುಷ ತಂದಿದೆ ಎಂದರು.

ಶ್ರೀ ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಡಾ|| ಕೆ.ಬಿ.ಕಮಲಾಕರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯ ಜೀವನದಲ್ಲಿ ಹಣ ಗಳಿಕೆ ಒಂದೇ ಗುರಿಯಲ್ಲ. ಅದರೊಂದಿಗೆ ಸಂಸ್ಕೃತಿ ಮತ್ತು ಆದರ್ಶಗಳನ್ನು ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಬೇಕು. ರಿಪ್ಪನ್‌ಪೇಟೆ ವೀರಶೈವ ಸಮಾಜ ಬಾಂಧವರು ಶಿವಮಂದಿರ ನಿರ್ಮಾಣಗೊಳಿಸಿ ಇಂದು ಉದ್ಘಾಟಿಸುತ್ತಿರುವುದು ಸಂತೋಷದ ಸಂಗತಿ ಎಂದರು.

ನೇತೃತ್ವ ವಹಿಸಿದ ಶ್ರೀಮದ್ ರಂಭಾಪುರಿ ಖಾಸಾ ಶಾಖಾ ಮಳಲಿ ಸಂಸ್ಥಾನ ಮಠದ ಡಾ|| ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಶಿವಮಂದಿರ ಇತಿಹಾಸದಲ್ಲಿ ಇಂದು ಅವಿಸ್ಮರಣೀಯ ದಿನ. ಸಕಲ ಸದ್ಭಕ್ತರ ಸಹಕಾರ ಮತ್ತು ಅಭಿಮಾನದಿಂದಾಗಿ ಬಹು ದೊಡ್ಡ ಕಾರ್ಯ ಮಾಡಿದ್ದು ಮರೆಯಲಾಗದು. ಶಿವಮಂದಿರ ಉದ್ಘಾಟನೆಗಾಗಿ ಶ್ರೀ ರಂಭಾಪುರಿ ಜಗದ್ಗುರುಗಳವರನ್ನು ಬರಮಾಡಿಕೊಂಡು ಮತ್ತೊಂದು ದಾಖಲೆಯನ್ನು ನಿರ್ಮಿಸಿದ ಶ್ರೇಯಸ್ಸು ತಮ್ಮದಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಶಾಸಕ, ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು, ಡಿಸಿಸಿ ಬ್ಯಾಂಕ ಅಧ್ಯಕ್ಷ ಡಾ|| ಆರ್.ಎಂ.ಮಂಜುನಾಥಗೌಡ, ಮಾಜಿ ಸಚಿವ ಹರತಾಳು ಹಾಲಪ್ಪ, ಗ್ರಾಮ ಪಂ. ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ ಭಾಗವಹಿಸಿದ್ದರು.

ಶ್ರೀ ಬಸವೇಶ್ವರ ವೀರಶೈವ ಸಮಾಜದ ಹಿರಿಯ ಉಪಾಧ್ಯಕ್ಷ ಜಿ.ಎಂ. ದುಡರಾಜಪ್ಪಗೌಡ, ಉಪಾಧ್ಯಕ್ಷ ಎಂ.ಆರ್.ಶಾಂತವೀರಪ್ಪಗೌಡ, ಅ.ಭಾ.ವೀ.ಮಹಾಸಭೆ ಹೊಸನಗರ ತಾಲೂಕು ಘಟಕದ ಅಧ್ಯಕ್ಷ ಎಂ.ಎಸ್.ಉಮೇಶ್ ಹಾಗೂ ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಹಾಗೂ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಎಲ್ಲಾ ಭಕ್ತರಿಗೆ ಪ್ರಸಾದ ವಿನಿಯೋಗ ಜರುಗಿತು.

Leave a Comment