RIPPONPETE ; ಜಿನಮಂದಿರವನ್ನು ಚೈತ್ಯಾಲಯವೆಂದು ಉಲ್ಲೇಖಿಸಿರುವುರಿಂದ ಏಕಾಗ್ರತೆಗಾಗಿ ನಿರ್ಮಿಸಿದ ಧ್ಯಾನ ಮಂದಿರ ಮತ್ತು ಜಿನಬಿಂಬಗಳ ದರ್ಶನದಿಂದ ಕರ್ಮನಿರ್ಜರೆಯಾಗುವುದು ಎಂದು ಕನಕಗಿರಿ ಶ್ರೀ ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ತಮ್ಮ ಧರ್ಮಪ್ರವಚನದಲ್ಲಿ ತಿಳಿಸಿದರು.
ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ನಡೆಯುತ್ತಿರುವ “ಇಂದ್ರಧ್ವಜ ಮಹಾಮಂಡಲ ವಿಧಾನ” ಪೂಜಾ ವಿಧಿಯಲ್ಲಿ ಉಪಸ್ಥಿತರಿದ್ದರು. ಚಿತ್ತ ವಿಕೃತಿಗಳಿಂದ ಜರ್ಜರಿತರಾಗುವ ಬದಲು ಚೈತ್ಯಾಲಯದಲ್ಲಿ ಮನೋಧರ್ಮವನ್ನು ಆಧ್ಯಾತ್ಮಿಕ ಚಿಂತನದತ್ತ ಕೇಂದ್ರೀಕರಿಸುವುದು ಅತ್ಯಂತ ಶ್ರೇಷ್ಠ ದಿನಚರ್ಯೆ ಎಂದು ಶ್ರಾವಕ-ಶ್ರಾವಿಕೆಯರನ್ನು ಹರಸಿದರು.
ಪ್ರಕೃತಿಯ ಆರಾಧನೆಯ ಮಹತ್ವವನ್ನು ಜೈನಧರ್ಮಶಾಸ್ತ್ರಗಳ ಪೂಜಾ ವಿಧಿಗಳು ತಿಳಿಸುತ್ತವೆ. ಇಂದ್ರಧ್ವಜ ಮಹಾಮಂಡಲದಲ್ಲಿ ಪ್ರಾಣಿ, ಪಕ್ಷಿ, ವನ, ಜಲ ಪ್ರದೇಶ, ಪರ್ವತ ಶ್ರೇಣಿಗಳನ್ನು ವರ್ಣಿಸಲಾಗಿದೆ ಎಂದು ಮೂಡುಬಿದಿರೆ ಶ್ರೀ ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳವರು ವಿವರಿಸಿದರು.
ಪೂಜಾ ವಿಧಾನದಲ್ಲಿ ತಲ್ಲೀನತೆಯಿಂದ ಮಂತ್ರಗಳನ್ನು ಪಠಿಸಿ, ಆರಾಧಿಸುವುದು ನವ ಚೈತನ್ಯದ ಅನುಭವವುಂಟಾಗುವುದೆಂದು ತಿಳಿಸಿ ಹರಸಿದರು.
ಆರತೀಪುರ ಶ್ರೀ ಜೈನ ಮಠದ ಸ್ವಸ್ತಿಶ್ರೀ ಸಿದ್ಧಾಂತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಜೈನ ಧರ್ಮದಲ್ಲಿ ಆಗಮೋಕ್ತ ಪೂಜಾ ವಿಧಾನಗಳು ಮಾನಸಿಕ, ಶಾರೀರಿಕ ಸುಖ ನೀಡುವುದು. ಉತ್ತಮ ಧರ್ಮ ಮೌಲ್ಯಾಧಾರಿತ ಜೀವನಕ್ಕೆ ಸತ್‌ಪ್ರೇರಣೆ ನೀಡುವುದು ನಿಶ್ಚಿತ ಎಂಬ ವಿಚಾರವನ್ನು ಪೂಜಾ ವಿಧಾನದಲ್ಲಿ ಪಾಲ್ಗೊಂಡವರಿಗೆ ಮನನ ಮಾಡಿ, ಹರಸಿದರು.
ಹೊಂಬುಜದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ಹೊಂಬುಜ ಶ್ರೀ ಮಠ, ಸಂಸ್ಥಾನದ ಪರವಾಗಿ ಕನಕಗಿರಿ ಪೀಠಾಧೀಶರಾಗಿ 25 ವರ್ಷಗಳನ್ನು ಪೂರೈಸಿದ ಪರಮಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರನ್ನು “ಜೈನ ತತ್ವ ಭೂಷಣ” ಎಂಬ ಉಪಾಧಿಯೊಂದಿಗೆ ಗೌರವಿಸಿದರು.
ಮೂಡುಬಿದಿರೆ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಪಟ್ಟಾಭಿಷಿಕ್ತರಾಗಿ 25 ವರ್ಷಗಳನ್ನು ಪೂರೈಸಿದ್ದಕ್ಕಾಗಿ “ಜೈನ ಪ್ರಭಾವನಾ ಭೂಷಣ” ಉಪಾಧಿಯೊಂದಿಗೆ ಅಭಿನಂದಿಸಿ, ಸನ್ಮಾನಿಸಿದರು.
ಸೋಂದಾ ಜೈನ ಸಂಸ್ಥಾನದ ಪರಮಪೂಜ್ಯ ಸ್ವಸ್ತಿಶ್ರೀ ಅಕಲಂಕಕೇಸರಿ ಭಟ್ಟಾಕಲಂಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಇಂದ್ರಧ್ವಜ ಮಹಾಮಂಡಲ ವಿಧಾನದ ಪೂಜಾ ವಿಧಿಗಳ ಸ್ತೋತ್ರಗಳನ್ನು ಪಠಿಸಿ, ಅತ್ಯಪೂರ್ವ ಪ್ರಭಾವನಾ ಪಥದ ಕುರಿತು ಮನಮುಟ್ಟುವಂತೆ ತಿಳಿಹೇಳಿದರು.
ಆರ್ಯಿಕಾರತ್ನ ಶ್ರೀ 105 ಶಿವಮತಿ ಮಾತಾಜಿ ಹಾಗೂ ಆರ್ಯಿಕಾ ಶ್ರೀ ಪದ್ಮಶ್ರೀ ಮಾತಾಜಿಯವರ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ಸಪ್ತಮ ದಿನದ ಪೂಜಾ ವಿಧಿಗಳು ಪೂರ್ಣಗೊಂಡವು. ಕೊಲ್ಹಾಪುರ ಶ್ರೀ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಮಹಾಸ್ವಾಮೀಜಿಗಳವರು ಶ್ರೀಕ್ಷೇತ್ರಕ್ಕಾಗಮಿಸಿ ಪೂಜಾ ವಿಧಾನದಲ್ಲಿ ಉಪಸ್ಥಿತರಿದ್ದು ಶ್ರಾವಿಕ-ಶ್ರಾವಕಿಯರನ್ನು ಆಶೀರ್ವದಿಸಿದರು.