ವಿದ್ಯುತ್ ಮಾರ್ಗಗಳ ನಿರ್ಮಾಣದಲ್ಲಿ ರೈತರ ಹಿತ ಕಾಯಲು ಸೂಚನೆ ; ಮಧು ಬಂಗಾರಪ್ಪ

Written by malnadtimes.com

Published on:

ಶಿವಮೊಗ್ಗ ; ಜಿಲ್ಲೆಯಲ್ಲಿ ಈಗಾಗಲೇ ಮಂಜೂರಾಗಿ ಕಾಮಗಾರಿ ಕೈಗೆತ್ತಿಕೊಂಡಿರುವ ಜಡೆ-ಬನವಾಸಿ ಮತ್ತು ಈಸೂರು-ಅಂಜನಾಪುರ 110 ಕೆ.ವಿ. ವಿದ್ಯುತ್ ಪ್ರಸರಣಾ ಮಾರ್ಗದಲ್ಲಿ ಬರುವ ರೈತರೊಂದಿಗೆ ಸಂಬಂಧಿಸಿದ ಮೆಸ್ಕಾಂ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಶೀಘ್ರ ಸಮಾಲೋಚನೆ ನಡೆಸಿ, ರೈತರಿಗೆ ಅನುಕೂಲವಾಗುವ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರು ಹೇಳಿದರು.

WhatsApp Group Join Now
Telegram Group Join Now
Instagram Group Join Now

ಅವರು ಬುಧವಾರ ನಗರದ ಲೋಕೋಪಯೋಗಿ ಭವನದಲ್ಲಿ ವಿವಿಧ ಇಲಾಖೆಗಳ ಹಲವು ಯೋಜನೆಗಳ ಪ್ರಗತಿ ಪರಿಶೀಲನೆ ಸರಣಿ ಸಭೆಗಳ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜನಪರವಾದ ಕಾರ್ಯಕ್ರಮ ಇದಾಗಿದ್ದರೂ ಅಲ್ಲಿನ ರೈತರೊಂದಿಗೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಸೂಚಿಸಿದ ಅವರು, ಸ್ಥಳೀಯರ ಅಭಿಪ್ರಾಯಗಳಿಗೂ ಮನ್ನಣೆ ನೀಡುವಂತೆ ಅವರು ಸಲಹೆ ನೀಡಿದರು.

ಈ ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಇರಬಹುದಾದ ತಾಂತ್ರಿಕ ಅಡಚಣೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಈ ವಿದ್ಯುತ್ಮಾರ್ಗದಲ್ಲಿ ಬೆಳೆದು ನಿಂತ ಅಡಿಕೆ ತೋಟಗಳು, ಜೀವನೋಪಾಯಕ್ಕಾಗಿ ಭೂಮಿ ಉಳಿಸಿಕೊಂಡಿರುವ ಸಣ್ಣ ಹಿಡುವಳಿದಾರರ ಹಿತರಕ್ಷಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಭೂಸ್ವಾಧೀನ ಮಾಡಿಕೊಳ್ಳುವ ಮುನ್ನ ಯೋಜನೆಯ ಅನುಷ್ಠಾನಕ್ಕೆ ಇರುವ ಪರ್ಯಾಯ ಸಾಧ್ಯತೆಗಳು ಮತ್ತು ಖರ್ಚು-ವೆಚ್ಚಗಳ ಬಗ್ಗೆಯೂ ಸಮಾಲೋಚನೆ ನಡೆಸಬೇಕು. ಅಂತಿಮವಾಗಿ ರೈತರ ಪರವಾಗಿ ಸೂಕ್ತವಾದ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಸೂಚಿಸಿದ ಅವರು, ಭೂಸ್ವಾದೀನ ಅನಿವಾರ್ಯವಾದಲ್ಲಿ ರೈತರಿಗೆ ಹೆಚ್ಚಿನ ಮೊತ್ತದ ಪರಿಹಾರಧನ ಕೊಡಿಸುವಂತೆಯೂ ಅವರು ಸೂಚಿಸಿದರು.

ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳು ಕೂಡಲೇ ದಿನಾಂಕ ನಿಗಧಿಪಡಿಸಿ, ವಿದ್ಯುತ್ಮಾರ್ಗದ ರೈತರ, ರೈತ ಮುಖಂಡರ ಉಪಸ್ಥಿತಿಯಲ್ಲಿ ಸಭೆ ಕರೆದು ನಿರ್ಣಯ ಕೈಗೊಳ್ಳುವಂತೆ ಸೂಚಿಸಿದರು.

ಗಂಗಾಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಸಕಾಲದಲ್ಲಿ ವಿದ್ಯುತ್ಸಂಪರ್ಕ ಕಲ್ಪಿಸಿಕೊಡಬೇಕು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಈ ದೂರುಗಳು ಪುನರಾವರ್ತನೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಹೊಸನಗರ ತಾಲೂಕಿನ ಜೇನಿ ಸೇರಿದಂತೆ ಜಿಲ್ಲೆಯ ಅನೇಕ ಸ್ಥಳಗಳಲ್ಲಿ ಮೊಬೈಲ್ ಟವರ್ ನಿರ್ಮಾಣಗೊಳ್ಳದಿರುವುದರಿಂದ ಇಂದಿನ ಆಧುನಿಕ ಯುಗದಲ್ಲಿ ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ಸಂಪರ್ಕದ ಕೊರತೆ ಎದುರಿಸುವಂತಾಗಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ. ಅಲ್ಲದೇ ಅರಣ್ಯ ಪ್ರದೇಶಗಳಿರುವುದೂ ಸಹ ಅಡಚಣೆಗೆ ಕಾರಣವಾಗಿದೆ ಎಂಬ ಮಾತಿದೆ. ಸಂಬಂಧಿಸಿದ ಇಲಾಖಾಧಿಕಾರಿಗಳು ಕೂಡಲೇ ಈ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಿದರು.

ಗ್ರಾಮೀಣ ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ವಿದ್ಯುತ್ನಿರಂತರ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿರುವ ಬಗ್ಗೆ ಜನರಲ್ಲಿ ಆಕ್ರೋಶವಿದೆ. ಈ ಬಗ್ಗೆ ಆಗಾಗ್ಗೆ ದೂರುಗಳು ಬರುತ್ತಲೆ ಇವೆ. ಈ ದೂರು ಬಾರದಂತೆ ಕ್ರಮವಹಿಸಬೇಕು. ಅಲ್ಲದೇ ರಾಜ್ಯದ ಜನರ ಹಿತಕ್ಕಾಗಿ ವಿದ್ಯುತ್ಉತ್ಪಾದನೆಗೆ ಭೂಮಿ ಸೇರಿದಂತೆ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡ ಜಿಲ್ಲೆಯ ಜನರಿಗೆ ವಿದ್ಯುತ್ನಿರಂತರವಾಗಿ ದೊರೆಯದಿರುವುದು ಅತ್ಯಂತ ವಿಷಾದದ ಸಂಗತಿಯಾಗಿದೆ ಎಂದ ಅವರು, ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಗಳು ಆಗಾಗ್ಗೆ ದುರಸ್ತಿಗೊಳಗಾಗುತ್ತಿರುವುದು ಕಂಡುಬಂದಿದೆ. ಮುಂದಿನ ದಿನಗಳಲ್ಲಿ ರೈತರ ಅಗತ್ಯತೆಗಳಿಗೆ ಸಕಾಲದಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಗಳನ್ನು ಅಳವಡಿಸಲು ಹಾಗೂ ಗುಣಮಟ್ಟದ ಟ್ರಾನ್ಸ್‌ಫಾರ್ಮರ್ ಗಳನ್ನೇ ಸರಬರಾರು ಮಾಡುವಂತೆ ಹಾಗೂ ಹೆಚ್ಚಿನ ಸಂಖ್ಯೆಯ ಟ್ರಾನ್ಸ್‌ಫಾರ್ಮರ್ ಗಳನ್ನು ಕಾಯ್ದಿರಿಸಿಕೊಳ್ಳುವಂತೆ ಅವರು ಸೂಚಿಸಿದರು.

ವಿದ್ಯುತನ್ನು ಅವಲಂಬಿಸಿ ಕೃಷಿ ಮೂಲಕ ಬದುಕನ್ನು ಕಟ್ಟಿಕೊಂಡಿರುವ ರೈತರ ಬಗ್ಗೆ ಮೃದು ಧೋರಣೆ ಇರಲಿ. ನಿರ್ಲಕ್ಷ್ಯ ಬೇಡ ಎಂದವರು ಸೂಚಿಸಿದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ವಲಯ ಅರಣ್ಯಾಧಿಕಾರಿ ಶಿವಶಂಕರ್, ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರು, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರಭೂಪಾಲ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸುಜಾತಾ ಸೇರಿದಂತೆ ಮೆಸ್ಕಾಂನ ವಿವಿಧ ಶ್ರೇಣಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment