ಶಕ್ತಿ ಹಾಗೂ ಯುವನಿಧಿ ಯೋಜನೆ ಅನುಷ್ಠಾನದಲ್ಲಿ ಪ್ರಗತಿ ಸಾಲದು ; ಅಸಮಾಧಾನ ಹೊರಹಾಕಿದ ಗ್ಯಾರಂಟಿ ಅಧ್ಯಕ್ಷ ಹೆಚ್. ಬಿ. ಚಿದಂಬರ   

Written by Mahesha Hindlemane

Published on:

ಹೊಸನಗರ ; ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಹಾಗು ಯುವನಿಧಿ ಯೋಜನೆಗಳು ತಾಲೂಕಿನಲ್ಲಿ ಅನುಷ್ಠಾನಗೊಂಡರೂ ಅಷ್ಟಾಗಿ ಪ್ರಗತಿ ಕಂಡು ಬರುತಿಲ್ಲ. ಕೂಡಲೇ ಸಂಬಂಧಪಟ್ಟ ಇಲಾಖೆ ಯೋಜನೆ ಕುರಿತು ಸಾಕಷ್ಟು ಪ್ರಚಾರದೊಂದಿಗೆ ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಕರ್ಯ ದೊರೆಯುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರ ಹೆಚ್. ಬಿ. ಚಿದಂಬರ ಗಂಭೀರ ಎಚ್ಚರಿಕೆ ನೀಡಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಈಗಾಗಲೇ ತಾಲೂಕಿನ ಗ್ರಾಮೀಣ ಭಾಗವನ್ನು ಸಂಪರ್ಕಿಸುವ ಹಲವು ಬಸ್ ರೂಟುಗಳನ್ನು ಗ್ಯಾರಂಟಿ ಸಮಿತಿ ಗುರುತಿಸಿ, ಸಾರಿಗೆ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಅನುಮತಿಗೆ ಕಡತ ರವಾನಿಸಿದೆ. ಅನುಮತಿ ಸಿಕ್ಕುವ ಭರವಸೆ ಇದ್ದು, ಶೀಘ್ರದಲ್ಲೇ ವಿವಿಧ ತಾಲೂಕು ಕೇಂದ್ರ ಸೇರಿದಂತೆ, ಜಿಲ್ಲಾ ಕೇಂದ್ರಕ್ಕೆ ಅಗತ್ಯ ಬಸ್ ಸೌಕರ್ಯ ಒದಗಿಸುವ ಆಶಯ ವ್ಯಕ್ತಪಡಿಸಿದರು. ಈ ಕುರಿತು ಶಾಸಕ ಬೇಳೂರು ಗೋಪಾಲಕೃಷ್ಣ ಸಾಕಷ್ಟು ಆಸಕ್ತಿ ವಹಿಸಿರುವುದಾಗಿ ಅವರು ಸಭೆಗೆ ತಿಳಿಸಿದರು.

ಸಿಡಿಪಿಒ ಗಾಯತ್ರಿ ಮಾತನಾಡಿ, 2025ರ ಅಕ್ಟೊಬರ್ ಅಂತ್ಯಕ್ಕೆ ತಾಲೂಕಿನಲ್ಲಿ ಒಟ್ಟು 28,427 ಗೃಹಲಕ್ಷ್ಮಿ ಅರ್ಜಿಗಳು ನೋಂದಣಿ ಆಗಿದ್ದು, ಯೋಜನೆಗೆ ಅರ್ಜಿ ಸಲ್ಲಿಸಲು ಬಾಕಿ ಇರುವರ ಸಂಖ್ಯೆ 584 ಇದೆ. ಜೂನ್ ಅಂತ್ಯಕ್ಕೆ ಒಟ್ಟು 27,579 ಪಲಾನುಭವಿಗೆ ಗೃಹಲಕ್ಷ್ಮಿ ಹಣ ಅವರ ಖಾತೆಗೆ ಜಮಾ ಆಗಿದೆ. ಜೂಲೈ ತಿಂಗಳ ಹಣ ಜಮಾ ಆಗಿದ್ದರೂ ಇಲಾಖೆಗೆ ಈ ವರೆಗೂ ಅಂಕಿ ಅಂಶ ಮಾತ್ರ ಸಿಕ್ಕಿಲ್ಲ. ಒಟ್ಟು 11 ಮಂದಿ ಮರಣ ಹೊಂದಿದ್ದು, 80 ಜನರಿಗೆ ಐಪಿಪಿಬಿ ಖಾತೆ ತೆರೆಯಲು ಸೂಚಿಸಲಾಗಿದೆ ಎಂಬ ಮಾಹಿತಿ ನೀಡಿದರು.

ಸಾಗರ ಕೆಎಸ್ಆರ್ಟಿಸಿ ವಿಭಾಗದ ಡಿಪೋ ಮ್ಯಾನೇಜರ್ ಶೈಲೇಶ್ ಬಿರಾದಾರ್ ಮಾತನಾಡಿ, ಶಕ್ತಿ ಯೋಜನೆ ಆಡಿಯಲ್ಲಿ ಅಕ್ಟೊಬರ್ ಅಂತ್ಯಕ್ಕೆ ಒಟ್ಟು 1,25,13,503 ಮಹಿಳಾ ಪ್ರಯಾಣಿಕರು ಯೋಜನೆಯ ಫಲಾನುಭವಿ ಆಗಿದ್ದು, ಸಾರಿಗೆ ಇಲಾಖೆಯು 61,03,61,760 ರೂ. ಆದಾಯ ಗಳಿಸಿದೆ. 2025ರ ಅಕ್ಟೊಬರ್ ಮಾಹೆಯಲ್ಲಿ 5,33,874 ಮಹಿಳೆಯರು ಪ್ರಯಾಣಿಸಿದ್ದು, 3,13,21,577 ರೂ. ಆದಾಯ ಬಂದಿದೆ ಎಂದರು.

ಯುವನಿಧಿ ಯೋಜನೆ ಅಡಿಯಲ್ಲಿ ಜುಲೈ 2025 ಅಂತ್ಯಕ್ಕೆ ತಾಲೂಕಿನಲ್ಲಿ 599 ಪದವಿ, ನಾಲ್ಕು ಡಿಪ್ಲೊಮಾ ಪೂರೈಸಿದ ಪಲಾನುಭವಿಗಳ ಬ್ಯಾಂಕ್ ಖಾತೆಗೆ ಒಟ್ಟು 18,03,000 ರೂ. ಹಣ ನೇರ ವರ್ಗಾವಣೆ ಆಗಿದೆ ಎಂದು ಉದ್ಯೋಗ ವಿನಿಮಯ ಇಲಾಖೆಯ ಸಿಬ್ಬಂದಿ ಜ್ಯೋತಿ ಸಭೆಗೆ ಮಾಹಿತಿ ನೀಡಿದರು.

ಈ ವೇಳೆ ಗ್ಯಾರಂಟಿ ಅಧ್ಯಕ್ಷ ಚಿದಂಬರ ಮಾತನಾಡಿ, ಗ್ಯಾರಂಟಿ ಅನುಷ್ಠಾನ ಕುರಿತು ಶೀಘ್ರದಲ್ಲೇ ತಾಲೋಕು ಮಟ್ಟದ ಸಾರ್ವಜನಿಕ ಸಭೆ ಹಾಗು ಆಯಾ ಗ್ರಾಮ ಪಂಚಾಯತಿ ಮಟ್ಟದಲ್ಲಿ ಶಾಸಕರ ನೇತೃತ್ವದಲ್ಲಿ ಜನ ಸಂಪರ್ಕ ಸಭೆಯ ಜೊತೆಗೆ ಗ್ಯಾರಂಟಿ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನೆ ನಡೆಸಲು ತೀರ್ಮಾನಿಸಲಾಗಿದೆ. ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸುವಂತೆ ಅವರು ಕೋರಿದರು.

ಸಭೆಯಲ್ಲಿ ಗ್ಯಾರಂಟಿ ಸಮಿತಿಯ ಜಿಲ್ಲಾ ಸಂಚಾಲಕ ರಿಪ್ಪನ್‌ಪೇಟೆ ಅಮೀರ್ ಅಂಜಾ, ಇಒ ನರೇಂದ್ರ ಕುಮಾರ್, ಆಹಾರ ಇಲಾಖೆಯ ಬಾಲಚಂದ್ರಣ್ಣ, ಮೆಸ್ಕಾಂನ ಸಹಾಯಕ ಲೆಕ್ಕಾಧಿಕಾರಿ, ತಾಲೂಕು ಪಂಚಾಯತಿ ಪ್ರಥಮ ದರ್ಜೆ ಸಹಾಯಕ ಮಂಜುನಾಥ್, ಗ್ಯಾರಂಟಿ ಸಮಿತಿ ಸದಸ್ಯರಾದ ರವೀಂದ್ರ ಕೆರೆಹಳ್ಳಿ, ನರಸಿಂಹ ಪೂಜಾರ್, ಸಿಂಥಿಯಾ ಸೆರವೋ, ಪೂರ್ಣಿಮಾ ಮೂರ್ತಿರಾವ್, ಅಕ್ಷತಾ, ಸುಮಂಗಲ ದೇವರಾಜ್, ಸಂತೋಷ್ ಮಳವಳ್ಳಿ, ಕರುಣಾಕರ ಉಪಸ್ಥಿತರಿದ್ದರು.

Leave a Comment