ರಿಪ್ಪನ್‌ಪೇಟೆ ; ಇಂದು ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಜನರ ದೀರ್ಘಕಾಲದ ಕನಸು ಸಾಕಾರವಾದ ಸ್ಮರಣೀಯ ಕ್ಷಣ. ತಾಳಗುಪ್ಪ – ಬೆಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ (20651/20652) ರೈಲು ಅರಸಾಳು ರೈಲ್ವೆ ನಿಲ್ದಾಣದಲ್ಲಿ ನಿಲ್ಲುವಂತೆ ಮಾಡಲು ಶಿವಮೊಗ್ಗ ಲೋಕಸಭಾ ಸದಸ್ಯರು, ಜನಪರ ನಾಯಕ ಬಿ.ವೈ. ರಾಘವೇಂದ್ರ ಅವರ ಸತತ ಹೋರಾಟ ಫಲಿಸಿದೆ.
ರೈಲ್ವೆ ಇಲಾಖೆ ಈ ನಿರ್ಧಾರವನ್ನು ಪ್ರಾಯೋಗಿಕವಾಗಿ 2025ರ ಅ.06 ರಿಂದ 2026ರ ಜನವರಿವರೆಗೆ ಜಾರಿಗೊಳಿಸಿದೆ. ಈ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಈ ರೈಲು ಸೇವೆಯನ್ನು ಬಳಸಿದಲ್ಲಿ ಅರಸಾಳು ನಿಲುಗಡೆ ಶಾಶ್ವತಗೊಳ್ಳಲಿದೆ.
ಈ ಐತಿಹಾಸಿಕ ಸಾಧನೆಯನ್ನು ಸ್ವಾಗತಿಸಲು ಅರಸಾಳು ಗ್ರಾಮಸ್ಥರು ಮತ್ತು ಬಿಜೆಪಿ ಕಾರ್ಯಕರ್ತರು ರೈಲಿಗೆ ಪೂಜೆ ಸಲ್ಲಿಸಿ, ಸಿಹಿ ಹಂಚಿಕೊಂಡು ಹರ್ಷಭರಿತ ಸಂಭ್ರಮಾಚರಣೆ ನಡೆಸಿದರು.
ಈ ನಿರ್ಧಾರದಿಂದ ಅರಸಾಳು, ಬೆಳ್ಳೂರು, ಕೆಂಚನಾಲ, ರಿಪ್ಪನ್‌ಪೇಟೆ, ಬಾಳೂರು, ಹೆದ್ದಾರಿಪುರ, ಗರ್ತಿಕೆರೆ, ಹುಂಚ, ಕೋಡೂರು, ಕೋಣಂದೂರು, ಹೊಸನಗರ, ನಗರ ಕೊಲ್ಲೂರು ಸೇರಿದಂತೆ ನೂರಾರು ಗ್ರಾಮಗಳ ಜನತೆಗೆ ಬಹುಕಾಲದ ಬಯಕೆ ನೆರವೇರಿದೆ.
ಈಗ ಗ್ರಾಮೀಣ ಪ್ರದೇಶದ ಜನರಿಗೆ ಸುಲಭ, ವೇಗದ, ಸುರಕ್ಷಿತ ಮತ್ತು ಕಡಿಮೆ ವೆಚ್ಚದ ರೈಲು ಪ್ರಯಾಣದ ಅವಕಾಶ ಲಭ್ಯವಾಗಿದೆ. ವಿದ್ಯಾರ್ಥಿಗಳು, ಉದ್ಯೋಗಿಗಳು, ರೈತರು, ಹೂವಿನ ಕೃಷಿಕರು ಮತ್ತು ವ್ಯಾಪಾರಿಗಳಿಗೆ ಈ ನಿಲುಗಡೆ ಅಪಾರ ನೆರವು ನೀಡಲಿದೆ.
ಗ್ರಾಮೀಣ ಪ್ರದೇಶದ ಸಂಚಾರ ಸುಗಮಗೊಂಡು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಹೊಸ ದಾರಿ ತೆರೆದಿದೆ.
ರೈಲು ವೇಳಾಪಟ್ಟಿ:
🔸20651 (ಬೆಂಗಳೂರು → ತಾಳಗುಪ್ಪ)
ಮಧ್ಯಾಹ್ನ 3:00 → ಬೆಂಗಳೂರಿನಿಂದ ನಿರ್ಗಮನ
ರಾತ್ರಿ 8:05 → ಶಿವಮೊಗ್ಗ ತಲುಪುತ್ತದೆ
ರಾತ್ರಿ 8:20 → ಅರಸಾಳು ತಲುಪುತ್ತದೆ
ರಾತ್ರಿ 8:21 → ಅರಸಾಳಿನಿಂದ ನಿರ್ಗಮನ
🔸20652 (ತಾಳಗುಪ್ಪ → ಬೆಂಗಳೂರು)
ಬೆಳಿಗ್ಗೆ 6:19 → ಅರಸಾಳು ತಲುಪುತ್ತದೆ
ಬೆಳಿಗ್ಗೆ 6:20 → ಅರಸಾಳಿನಿಂದ ನಿರ್ಗಮನ
ಮಧ್ಯಾಹ್ನ 12:00 → ಬೆಂಗಳೂರಿಗೆ ತಲುಪುತ್ತದೆ.
ಇದು ಗ್ರಾಮೀಣ ಜನತೆಗೆ ಸಿಗುವ ಮಹತ್ವದ ಜನಪರ ಸಾಧನೆ. ರೈಲಿನ ನಿಲುಗಡೆ ಶಾಶ್ವತಗೊಳ್ಳಲು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಸೇವೆಯನ್ನು ಬಳಸಬೇಕು. ಜನವರಿ 2026ರವರೆಗೆ ಈ ಅವಕಾಶವನ್ನು ಯಶಸ್ವಿಗೊಳಿಸುವುದು ವಿವಿಧ ಕಾರ್ಯನಿಮಿತ್ತ ಬೆಂಗಳೂರಿಗೆ ಪ್ರಯಾಣಿಸುವ ಹೊಸನಗರ ತೀರ್ಥಹಳ್ಳಿ ತಾಲೂಕಿನ ಪ್ರಯಾಣಿಕರ ಜವಾಬ್ದಾರಿಯಾಗಿದೆ.
– ಬಿ.ವೈ. ರಾಘವೇಂದ್ರ, ಸಂಸದ
ಅರಸಾಳು ರೈಲ್ವೆ ನಿಲ್ದಾಣದ ನಿಲುಗಡೆ ಶಾಶ್ವತಗೊಳ್ಳಲು, ಸ್ಥಳೀಯರು ದೈನಂದಿನ ಮತ್ತು ವಾರಾಂತ್ಯದ ಪ್ರಯಾಣಗಳಿಗೆ ರೈಲು ಸೇವೆಗೆ ಆದ್ಯತೆ ನೀಡಬೇಕು. ಬಸ್‌ಗಳಿಗೆ ಬದಲಾಗಿ ರೈಲಿನಲ್ಲಿ ಪ್ರಯಾಣಿಸುವುದರಿಂದ ಸಮಯ ಹಾಗೂ ವೆಚ್ಚ ಉಳಿಯುವುದಷ್ಟೇ ಅಲ್ಲದೆ, ಪರಿಸರ ಸ್ನೇಹಿ ಪ್ರಯಾಣಕ್ಕೂ ಸಹಕಾರಿಯಾಗುತ್ತದೆ. ರೈಲು ಪ್ರಯಾಣದ ಹೆಚ್ಚುವರಿ ಬಳಕೆ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಮತ್ತು ರೈಲ್ವೆ ಸಂಪರ್ಕದ ವಿಸ್ತರಣೆಗೂ ನೆರವಾಗಲಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.