ರಿಪ್ಪನ್‌ಪೇಟೆ: ಗಣೇಶ ಚತುರ್ಥಿಯು ಯಾವುದೇ ನಿರ್ದಿಷ್ಟ ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗದೆ, ಸಮಾಜವನ್ನು ಒಗ್ಗೂಡಿಸುವ ಪವಿತ್ರ ಹಬ್ಬವಾಗಿದೆ ಎಂದು ಕುಂದಾಪುರದ ಕವಿತಾ ಆಚಾರ್ಯ ಮುದೂರು ಅಭಿಪ್ರಾಯಪಟ್ಟರು.
ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇವಾ ಸಮಿತಿಯ 59ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, “ದೇಶದ ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಸರ್ವ ಜನಾಂಗದವರನ್ನು ಸಂಘಟಿಸುವ ಸದುದ್ದೇಶದಿಂದ ಸಾರ್ವಜನಿಕ ಗಣೇಶೋತ್ಸವಕ್ಕೆ ಚಾಲನೆ ನೀಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಗಣಪತಿಯ ಮೂರ್ತಿಗಳನ್ನು ವಿಭಿನ್ನ ಹಾಗೂ ಅಸಹಜ ಭಂಗಿಗಳಲ್ಲಿ ಪ್ರತಿಷ್ಠಾಪಿಸಿ ಸಂಭ್ರಮಿಸುತ್ತಿರುವುದು ವಿಷಾದನೀಯ” ಎಂದರು.
ಮುಂದುವರಿದು ಮಾತನಾಡಿದ ಅವರು, “ನಾವು ಆರಾಧಿಸುವ ಮಣ್ಣಿನ ಗಣೇಶನು ಪ್ರಕೃತಿ ಮತ್ತು ಭೂತಾಯಿಗೆ ನೀಡುವ ಗೌರವದ ಸಂಕೇತವಾಗಿದೆ. ಇದು ನಮ್ಮ ದೇಶದ ಉನ್ನತ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಎತ್ತಿಹಿಡಿಯುತ್ತದೆ. ಸಮಾಜವನ್ನು ಸಂಘಟಿಸುವ ಉದ್ದೇಶದಿಂದ ಆರಂಭವಾದ ಈ ಹಬ್ಬವು ಇಂದು ಕರ್ಕಶ ಶಬ್ದದ ಡಿಜೆ, ಅನ್ಯಭಾಷೆಯ ಹಾಡುಗಳು ಹಾಗೂ ಮೋಜು-ಮಸ್ತಿಗೆ ಸೀಮಿತವಾಗುತ್ತಿರುವುದು ನೋವಿನ ಸಂಗತಿ. ಸೌಹಾರ್ದತೆಯ ಹಬ್ಬವನ್ನು ಗಲಾಟೆ ಮತ್ತು ಸಂಘರ್ಷಗಳಿಗೆ ಕಾರಣವಾಗದಂತೆ ತಡೆದು, ಜಾನಪದ ಸಂಸ್ಕೃತಿ ಮತ್ತು ಸನಾತನ ಧರ್ಮದ ತತ್ವಗಳ ಅಡಿಯಲ್ಲೇ ಭಕ್ತಿಪೂರ್ವಕವಾಗಿ ಆಚರಿಸಬೇಕಾಗಿದೆ” ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು 59ನೇ ವರ್ಷದ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಸುಧೀಂದ್ರ ಪೂಜಾರಿ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಆರ್. ಹೆಚ್. ಶ್ರೀನಿವಾಸ್ ಆಚಾರ್ ದಂಪತಿ, ಬೆಳ್ಳೂರು ಲೋಲಾಕ್ಷಿ ನಾಗರಾಜ್ ಹಾಗೂ ಕವಿತಾ ಆಚಾರ್ಯ ಮುದೂರು ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಸಭೆಯ ನಂತರ ರಿಪ್ಪನ್‌ಪೇಟೆಯ ಶಾರದಾಂಬ ಸಾಂಸ್ಕೃತಿಕ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಆಕರ್ಷಕ ಭರತನಾಟ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

