ರಿಪ್ಪನ್‌ಪೇಟೆ: ಇಲ್ಲಿನ ನಾಡಕಛೇರಿ ಹಿಂಭಾಗ ಹಾಗೂ ಬರುವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪ ರೆವಿನ್ಯೂ ಇನ್ಸ್‌ಪೆಕ್ಟರ್ (ಆರ್‌ಐ) ವಸತಿ ಗೃಹಕ್ಕಾಗಿ ಕಾಯ್ದಿರಿಸಿದ್ದ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಒತ್ತುವರಿ ಮಾಡಿ, ತಂತಿ ಬೇಲಿ ಹಾಗೂ ಕಲ್ಲುಕಂಬಗಳನ್ನು ಅಳವಡಿಸಿದ್ದರು. ಈ ಕುರಿತು ‘ಮಲ್ನಾಡ್ ಟೈಮ್ಸ್’ ವರದಿ ಪ್ರಕಟಿಸುತ್ತಿದ್ದಂತೆ ಎಚ್ಚೆತ್ತ ಕಂದಾಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಅಕ್ರಮ ಬೇಲಿಯನ್ನು ತೆರವುಗೊಳಿಸಿದ್ದಾರೆ.

ಹೊಸನಗರ ತಹಶೀಲ್ದಾರ್ ಭರತ್ ರಾಜ್ ಕಟ್ಟುನಿಟ್ಟಿನ ಸೂಚನೆ ಮೇರೆಗೆ ರಿಪ್ಪನ್‌ಪೇಟೆ ನಾಡಕಛೇರಿ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ, ಜಾಗವನ್ನು ಒತ್ತುವರಿಯಿಂದ ಮುಕ್ತಗೊಳಿಸಿದರು. ಸಾರ್ವಜನಿಕ ಆಕ್ರೋಶಕ್ಕೆ ಧ್ವನಿಯಾಗಿದ್ದ ‘ಮಲ್ನಾಡ್ ಟೈಮ್ಸ್’ ವರದಿಗೆ ತಕ್ಷಣ ಸ್ಪಂದಿಸಿ ಕ್ರಮಕೈಗೊಂಡ ತಹಶೀಲ್ದಾರ್ ಹಾಗೂ ಸಿಬ್ಬಂದಿಯ ಕಾರ್ಯವೈಖರಿಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ತೆರವು ಕಾರ್ಯಾಚರಣೆಯಲ್ಲಿ ಕಂದಾಯ ಪರಿವೀಕ್ಷಕ ಆಪ್ರೋಜ್, ಗ್ರಾಮ ಆಡಳಿತಾಧಿಕಾರಿ ಮಂಜುನಾಥ್, ನಾಡಕಛೇರಿಯ ಸಿಬ್ಬಂದಿ ಹಾಗೂ ಗ್ರಾಮ ಸಹಾಯಕರು ಭಾಗವಹಿಸಿದ್ದರು.

