ಹೊಸನಗರ

ಬರೀ ಮಾತಲ್ಲ, ಅಭಿವೃದ್ಧಿ ಕೆಲಸಗಳೇ ನಿಜವಾದ ಸಾಧನೆ: ಬಿ.ಎಸ್. ಯಡಿಯೂರಪ್ಪ

ಕೇವಲ ಭಾಷಣ ಮಾಡುವುದೇ ಸಾಧನೆಯಾಗಬಾರದು, ಜನಮಾನಸದಲ್ಲಿ ಉಳಿಯುವಂತಹ ಅಭಿವೃದ್ಧಿ ಕಾರ್ಯಗಳೇ ನಿಜವಾದ ಸಾಧನೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯಪಟ್ಟರು.

ಬರೀ ಮಾತಲ್ಲ, ಅಭಿವೃದ್ಧಿ ಕೆಲಸಗಳೇ ನಿಜವಾದ ಸಾಧನೆ BSY

ರಿಪ್ಪನ್‌ಪೇಟೆ: ಕೇವಲ ಭಾಷಣ ಮಾಡುವುದೇ ಸಾಧನೆಯಾಗಬಾರದು, ಜನಮಾನಸದಲ್ಲಿ ಉಳಿಯುವಂತಹ ಅಭಿವೃದ್ಧಿ ಕಾರ್ಯಗಳೇ ನಿಜವಾದ ಸಾಧನೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯಪಟ್ಟರು.

WhatsApp Group Join Now
Telegram Group Join Now
Instagram Group Join Now

ಪಟ್ಟಣದ ಶ್ರೀ ಬಸವೇಶ್ವರ ವೀರಶೈವ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಆನಂದಪುರ ಮುರುಘಾಮಠದ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿಗಳ ಅಮೃತ ಮಹೋತ್ಸವ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ, ಸಮಾಜ ಬಾಂಧವರಿಂದ ಗೌರವ ಸಮರ್ಪಣೆ ಸ್ವೀಕರಿಸಿ ಅವರು ಮಾತನಾಡಿದರು.

ಧರ್ಮ ಜಾಗೃತಿಯ ಮೂಲಕ ಸಮಾಜವನ್ನು ಒಗ್ಗೂಡಿಸುತ್ತಾ ಸಾರ್ಥಕ ಸೇವೆ ಸಲ್ಲಿಸುತ್ತಿರುವ ಶ್ರೀಗಳ ಕಾರ್ಯ ಶ್ಲಾಘನೀಯ. ಜನಪರ ಹೋರಾಟಗಳ ಮೂಲಕವೇ ಬದುಕು ಕಟ್ಟಿಕೊಂಡ ನನಗೆ ಜನಸಾಮಾನ್ಯರ ಪ್ರೀತಿ ಮತ್ತು ವಿಶ್ವಾಸವೇ ದೊಡ್ಡ ಶಕ್ತಿ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡುವ ಮೂಲಕ ಸುಸಂಸ್ಕೃತ ಸಮಾಜವನ್ನು ನಿರ್ಮಿಸಬೇಕು ಎಂದು ಕರೆ ನೀಡಿದ ಅವರು, ಯುವಜನತೆಯಲ್ಲಿ ಧರ್ಮನಿಷ್ಠೆ ಮತ್ತು ಇತಿಹಾಸದ ಅರಿವು ಮೂಡಿಸಲು ಶ್ರಮಿಸಿದ ತಮಗೆ ಸಮಾಜ ನೀಡಿದ ಈ ಗೌರವವನ್ನು ವಿನಮ್ರತೆಯಿಂದ ಸ್ವೀಕರಿಸುವುದಾಗಿ ತಿಳಿಸಿದರು.

ಆಶೀರ್ವಚನ ನೀಡಿದ ಶ್ರೀಗಳು:

ತಮ್ಮ 75ನೇ ವರ್ಷದ ಅಮೃತ ಮಹೋತ್ಸವದ ಪ್ರಯುಕ್ತ ಭಕ್ತರ ಗೌರವ ಸಮರ್ಪಣೆ ಸ್ವೀಕರಿಸಿ ಆಶೀರ್ವಚನ ನೀಡಿದ ಆನಂದಪುರ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, “ಕೆಳದಿ ಶಿವಪ್ಪನಾಯಕ ಹಾಗೂ ರಾಣಿ ಚನ್ನಮ್ಮಾಜಿ ಹೋರಾಟ ನಡೆಸಿದ ಮಲೆನಾಡಿನ ಪುಣ್ಯಭೂಮಿಯಾದ ರಿಪ್ಪನ್‌ಪೇಟೆಯ ವೀರಶೈವ ಲಿಂಗಾಯತ ಸಮಾಜವು ನಮ್ಮ ಮಠದ ರಾಜಧಾನಿಯಿದ್ದಂತೆ. ಸನ್ಯಾಸಿಗಳಿಗೆ ತಾಯಿಯ ಗರ್ಭದಿಂದ ಜನಿಸಿದ ದಿನಕ್ಕಿಂತ ಪಟ್ಟಾಧಿಕಾರ ವಹಿಸಿಕೊಂಡ ದಿನವೇ ನಿಜವಾದ ಜನ್ಮದಿನ. ಭಕ್ತರು ಪ್ರೀತಿಯಿಂದ ಆಚರಿಸುತ್ತಿರುವ ಈ ಅಮೃತ ಮಹೋತ್ಸವದ ಹೊತ್ತಿಗೆ ನಮ್ಮ ಪಟ್ಟಾಧಿಕಾರಕ್ಕೆ 49 ವಸಂತಗಳು ತುಂಬಿವೆ” ಎಂದು ಸ್ಮರಿಸಿದರು.

ನಡೆದಾಡುವ ದೇವರು ಆನಂದಪುರ ಶ್ರೀಗಳು:

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಸರ್ವ ಸಮುದಾಯಗಳನ್ನು ಧಾರ್ಮಿಕವಾಗಿ ಬೆಸೆಯುತ್ತಿರುವ ಸರಳ ವ್ಯಕ್ತಿತ್ವದ ಆನಂದಪುರ ಶ್ರೀಗಳು ನಡೆದಾಡುವ ದೇವರಾಗಿದ್ದು, ಅವರ ಆದರ್ಶಗಳು ನಮಗೆ ದಾರಿದೀಪವಾಗಿವೆ. ಶ್ರೀಗಳ 75 ವರ್ಷಗಳ ಅನುಭವ, ತ್ಯಾಗ ಹಾಗೂ ಶೈಕ್ಷಣಿಕ ಕಾಳಜಿಯಿಂದಾಗಿ ಯುವಜನತೆ ಸಮಾನತೆ ಮತ್ತು ಸೇವಾ ಮನೋಭಾವವನ್ನು ಮೈಗೂಡಿಸಿಕೊಂಡಿದ್ದಾರೆ. ಇದೇ ವೇಳೆ, ರೈತರ ಹಾಗೂ ಜನಸಾಮಾನ್ಯರ ಧ್ವನಿಯಾಗಿ ಮಠ-ಮಂದಿರಗಳ ಅಭಿವೃದ್ಧಿಗೆ ಭರಪೂರ ಅನುದಾನ ನೀಡಿದ ಕೀರ್ತಿ ನನ್ನ ರಾಜಕೀಯ ಗುರುಗಳಾದ ಯಡಿಯೂರಪ್ಪನವರಿಗೆ ಸಲ್ಲುತ್ತದೆ ಎಂದು ಬಣ್ಣಿಸಿದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪದ ಮೂಲಕ ಸಾರಿದ ಸಮಾನತೆ ಮತ್ತು ಕಾಯಕ ತತ್ವದಡಿ ನಾವೆಲ್ಲರೂ ಒಗ್ಗಟ್ಟಾಗಿ ಸಾಗಬೇಕಿದೆ. ಯಾವುದೇ ಜಾತಿ-ಮತಗಳ ಭೇದವಿಲ್ಲದೆ ಸರ್ವ ಜನಾಂಗವನ್ನು ಗೌರವಿಸಿ, ಮಠ-ಮಾನ್ಯಗಳ ಪುನಶ್ಚೇತನಕ್ಕೆ ಶ್ರಮಿಸಿದ ಯಡಿಯೂರಪ್ಪನವರ ಕೊಡುಗೆ ಅವಿಸ್ಮರಣೀಯ ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ರಾಜಕೀಯದಲ್ಲಿ ಅಧಿಕಾರ ಶಾಶ್ವತವಲ್ಲ, ಜನರ ಪ್ರೀತಿ-ವಿಶ್ವಾಸ ಗಳಿಸುವುದೇ ಮುಖ್ಯ. ರೈತ ನಾಯಕ ಯಡಿಯೂರಪ್ಪನವರು ತಮ್ಮ ಅಧಿಕಾರಾವಧಿಯಲ್ಲಿ ನಾಡಿಗೆ ನೀಡಿದ ಕೊಡುಗೆ ಅಪಾರವಾಗಿದ್ದು, ಅನ್ನದಾತರ ಮೊಗದಲ್ಲಿ ನಗು ಕಾಣುವುದೇ ನಮ್ಮೆಲ್ಲರ ಗುರಿಯಾಗಿದೆ ಎಂದು ಹೇಳಿದರು.

ಗುರುಪೀಠದ ನಂಬಿಕೆಯೇ ಜೀವನದ ಸಾರ್ಥಕತೆ:

ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಉಪದೇಶಾಮೃತ ನೀಡಿ, ಜಾತ್ರೆಯಲ್ಲಿ ತಂದೆಯ ಹೆಗಲ ಮೇಲೆ ಕುಳಿತ ಮಗುವಿಗೆ ಜಾತ್ರೆಯೇ ಸ್ವರ್ಗದಂತೆ ಕಾಣುತ್ತದೆ. ಆದರೆ ತಂದೆಯ ಕೈ ತಪ್ಪಿದರೆ ಅದೇ ಜಾತ್ರೆ ನರಕವಾಗುತ್ತದೆ. ಅದೇ ರೀತಿ ಗುರುಪೀಠದ ಕೈ ಹಿಡಿದು ನಡೆದರೆ ಬದುಕು ಪಾವನವಾಗುತ್ತದೆ. ಬಸವಣ್ಣನವರ ಅನುಭವ ಮಂಟಪದ ಶೂನ್ಯಪೀಠವೇರಿದ ಅಲ್ಲಮಪ್ರಭು, ಶರಣೆ ಅಕ್ಕಮಹಾದೇವಿ ಹಾಗೂ ಮೊದಲ ಜ್ಞಾನಪೀಠ ಪುರಸ್ಕೃತ ಕುವೆಂಪು ನಮ್ಮ ಜಿಲ್ಲೆಯ ಹೆಮ್ಮೆ. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಶಿಕಾರಿಪುರದಲ್ಲಿ 180 ಮಠಾಧೀಶರನ್ನು ಒಗ್ಗೂಡಿಸಿದ ಕೀರ್ತಿ ಯಡಿಯೂರಪ್ಪನವರದ್ದಾದರೆ, ಪ್ರಧಾನಿ ಮೋದಿಯವರ ನಂತರ ಅಭಿವೃದ್ಧಿಯ ಹರಿಕಾರರಾಗಿ ಸಂಸದ ರಾಘವೇಂದ್ರ ಹಾಗೂ ದಾನಧರ್ಮದಲ್ಲಿ ಶಾಸಕ ಬೇಳೂರು ಗುರುತಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.

ವೇದಿಕೆಯಲ್ಲಿ ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಡಾ. ಕೆ.ಬಿ. ಕಮಲಾಕ್ಷಪ್ಪ, ಉಪಾಧ್ಯಕ್ಷ ಜಿ.ಎಂ. ದುಂಡರಾಜಪ್ಪಗೌಡ, ಪ್ರಮುಖರಾದ ಎಂ.ಆರ್. ಶಾಂತವೀರಪ್ಪಗೌಡ, ಶಿವಮೊಗ್ಗ ವೀರಶೈವ ಸಮಾಜದ ಅಧ್ಯಕ್ಷ ಜ್ಯೋತಿಪ್ರಕಾಶ್, ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಎಂ.ಎಸ್. ಉಮೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕೆ.ಆರ್. ರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹೆಚ್.ಎಂ. ವರ್ತೇಶ್ ಸ್ವಾಗತಿಸಿ, ಶಿಕ್ಷಕಿ ಎಂ.ಕೆ. ವಾಣಿ ಕಾರ್ಯಕ್ರಮ ನಿರೂಪಿಸಿದರು. ಹೆಚ್.ವಿ. ಈಶ್ವರಪ್ಪ ಹಾರೋಹಿತ್ತಲು ವಂದನಾರ್ಪಣೆ ಮಾಡಿದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!