ನಾಶವಾಗಿರುವ ಪರಿಸರ ಮರು ಸೃಷ್ಠಿಗೆ 400 ತಲೆಮಾರುಗಳುಬೇಕು ; ಚಕ್ರವಾಕ ಸುಬ್ರಮಣ್ಯ

Written by malnadtimes.com

Published on:

ಹೊಸನಗರ ; ಇಂದಿನಿಂದ ಕೆಲಸ ಆರಂಭಿಸಿದರೂ ನಾಶವಾಗಿರುವ ಪರಿಸರವನ್ನು ಮರು ಸೃಷ್ಠಿ ಮಾಡಲು ಇನ್ನೂ 400 ತಲೆಮಾರುಗಳು ಬೇಕು ಎಂದು ಹಿರಿಯ ಪರಿಸರ ತಜ್ಞ ಹಾಗೂ ಪರಿಸರ ಜೀವ ವೈವಿದ್ಯ ರಾಜ್ಯ ಪ್ರಶಸ್ತಿ ಪುರಸ್ಕೃತ ಚಕ್ರವಾಕ ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.

WhatsApp Group Join Now
Telegram Group Join Now
Instagram Group Join Now

ಬಟ್ಟೆಮಲ್ಲಪ್ಪದ ಶ್ರೀ ವ್ಯಾಸ ಮಹರ್ಷಿ ಗುರುಕುಲದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಭೂ ಸುಪೋಷಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ನಾಶದ ಅಂದಾಜು ಸಿಗದಷ್ಟು ತೀವ್ರಗತಿಯಲ್ಲಿ ನಾಶವಾಗುತ್ತಿದೆ. ಈಗಾಗಲೇ ನಾವು ನಮ್ಮ ಅತೀ ಆಸೆಯಿಂದ ನಾಶ ಮಾಡಿರುವ ಪರಿಸರದ ಮರುಸೃಷ್ಠಿ ಕೂಡ ಅಸಾಧ್ಯ ಎನ್ನುವಂತಹ ಪರಿಸ್ಥಿತಿ ಎದುರಾಗಿದೆ ಎಂಬ ಆತಂಕ ವ್ಯಕ್ತಪಡಿಸಿದರು.

ನಮ್ಮ ಮುಂದಿನ ತಲೆಮಾರಿಗೆ ಪರಿಸರವನ್ನು ಚಿತ್ರದ ಮೂಲಕ ತೋರಿಸುವ ಪರಿಸ್ಥಿತಿ ಬರಲಿದೆ. ಇದು ಪರಿಸರದ ಹಲವು ಮಜಲುಗಳ ಸಮಸ್ಯೆಗೆ ಕಾರಣವಾಗಲಿದೆ. ಅಷ್ಟೇ ಅಲ್ಲದೆ ಜೀವ ಕುಲವೂ ನಾಶವಾಗುವ ಅಪಾಯ ಇದೆ ಎಂದು ಚಕ್ರವಾಕ ಸುಬ್ರಮಣ್ಯ ಹೇಳಿದರು.

ನಾವು ಈಗಲಾದರೂ ಎಚ್ಚರಗೊಳ್ಳಬೇಕಿದೆ. ಇದು ದೊಡ್ಡವರಿಂದ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಮಕ್ಕಳು ಮನಸ್ಸು ಮಾಡಬೇಕಿದೆ. ಅತಿಯಾದ ಕಳೆ ನಾಶಕ, ರಾಸಾಯನಿಕಗಳ ಬಳಕೆಯಿಂದ ಭೂಮಿ ತನ್ನ ಸತ್ವ ಕಳೆದುಕೊಂಡಿದೆ. ಅಲ್ಲದೇ ದಿನದಿಂದ ದಿನಕ್ಕೆ ಮನುಷ್ಯನನ್ನು ವಿವಿಧ ರೀತಿಯ ಮಾರಕ ರೋಗಗಳು ಕಾಡುತ್ತಿವೆ. ಇದೆಲ್ಲದಕ್ಕೂ ಪರಿಸರ ನಾಶವೇ ಕಾರಣ ಎಂದು ಅವರು ಹೇಳಿದರು.

ಪ್ರಸ್ತಾವಿಕವಾಗಿ ಮಾತನಾಡಿದ ನಿವೃತ್ತ ಸೈನಿಕ ಕೆ.ಪಿ. ಕೃಷ್ಣಮೂರ್ತಿ, ಮಕ್ಕಳು ಈಗಿನಿಂದಲೇ ತಮ್ಮ ಮನೆ ಪರಿಸರವನ್ನಾದರೂ ಉಳಿಸಿಕೊಳ್ಳುವ ಕೆಲಸ ಆರಂಭಿಸಬೇಕು. ಮನೆಯ ಸುತ್ತಮುತ್ತ ಕಳೆನಾಶಕ ಹಾಗೂ ರಾಸಾಯನಿಕ ಸಿಂಪಡಿಸದಂತೆ ಮನೆಯ ಹಿರಿಯರನ್ನು ಜಾಗೃತಗೊಳಿಸಬೇಕು. ಜೊತೆಗೆ ತಾವು ಬೆಳೆದುಕೊಳ್ಳುವ ಆಹಾರ ಪದಾರ್ಥಗಳನ್ನಾದರೂ ಸಾವಯವ ಬಳಸಿ ಬೆಳೆಯಬೇಕು. ಆಗ ರೋಗ ಮುಕ್ತ ಮನೆಯನ್ನಾದರೂ ನಿರ್ಮಾಣ ಮಾಡಿಕೊಳ್ಳಬಹುದು ಎಂದು ಮಕ್ಕಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಗತಿಪರ ಕೃಷಿಕ ಹಾಗೂ ಗುರುಕುಲ ಪೋಷಕ ನಾಗರಾಜ್, ನಾವೆಲ್ಲರೂ ನಮ್ಮ ಮಕ್ಕಳಿಗೆ ಒಳ್ಳೆಯ ನಾಳೆಗಳನ್ನು ನೀಡಲು ಉತ್ತಮ ಪರಿಸರದ ಮರು ನಿರ್ಮಾಣಕ್ಕೆ ಮುಂದಾಗೋಣ ಎಂದರು.

ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನ ರಾಜ್ಯ ಪರಿಸರ ಜೀವವೈವಿದ್ಯ ಪ್ರಶಸ್ತಿಯನ್ನು ಪಡೆದ ಚಕ್ರವಾಕ ಸುಬ್ರಮಣ್ಯ ಅವರನ್ನು ಗುರುಕುಲದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಆನಂದಪುರ ಸಾಧನ ವಿದ್ಯಾಕೇಂದ್ರದ ಅಧ್ಯಕ್ಷ ಶೆಣೈ ಹಾಗೂ ಶಿಕ್ಷಕರು ಹಾಗೂ ಗುರುಕುಲ ಸಿಬ್ಬಂದಿವರ್ಗ ಮತ್ತು ಮಕ್ಕಳು ಉಪಸ್ಥಿತರಿದ್ದರು.

ಶ್ರೀ ವ್ಯಾಸ ಮಹರ್ಷಿ ಗುರುಕುಲ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಎಸ್. ಬ್ಯಾಣದ ಸ್ವಾಗತಿಸಿ, ಕಾರ್ಯದರ್ಶಿ ರಶ್ಮಿ ಬಿ. ಹೆಚ್. ವಂದಿಸಿದರು. ಹಿರಿಯ ಶಿಕ್ಷಕಿ ಶಿವಲೀಲಾ, ಪವಿತ್ರ ಮೊದಲದವರು ಉಪಸ್ಥಿತರಿದ್ದರು.

Leave a Comment