ಹೊಸನಗರ: ರಾಜ್ಯ ರಾಜಕಾರಣದಲ್ಲಿ ಇನ್ನು ಒಂದು ವರ್ಷದೊಳಗೆ ಮೂರನೇ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದರೂ ಆಶ್ಚರ್ಯಪಡಬೇಕಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಹೊಸನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗೆ ತೀವ್ರ ಆಂತರಿಕ ಗೊಂದಲ ಹಾಗೂ ಕಚ್ಚಾಟ ಶುರುವಾಗಿದೆ. “ನನ್ನ ಈ ಮಾತನ್ನು ಯಾರೂ ಹಗುರವಾಗಿ ಪರಿಗಣಿಸಬೇಡಿ. ಮೇಲ್ನೋಟಕ್ಕೆ ಇದು ಉಡಾಫೆಯ ಮಾತು ಎನ್ನಿಸಬಹುದು, ಆದರೆ ಮುಂದಿನ ದಿನಗಳಲ್ಲಿ ಸರ್ಕಾರ ಯಾವ ಹಂತಕ್ಕೆ ಬಂದು ನಿಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಒಂದು ವರ್ಷ ಇವರೇ ಅಧಿಕಾರದಲ್ಲಿ ಇರಲಿ, ಆಮೇಲೆ ಏನಾಗುತ್ತದೆ ನೋಡೋಣ” ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ತೊರೆದು ಬಿಜೆಪಿಗೆ ಬರಲಿದ್ದಾರೆ 25 ನಾಯಕರು:
ಕಾಂಗ್ರೆಸ್ ನಡವಳಿಕೆಯಿಂದ ಬೇಸತ್ತು ಈಗಾಗಲೇ ಆ ಪಕ್ಷದ ಅನೇಕ ಶಾಸಕರು ಹಾಗೂ ಸಚಿವರು ಸರ್ಕಾರದ ಮೇಲಿನ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಹೀಗಾಗಿ, ಸುಮಾರು 25 ಮಂದಿ ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆಯಾಗುವ ನಿರೀಕ್ಷೆಯಿದೆ ಎಂದು ಹೊಸ ಬಾಂಬ್ ಸಿಡಿಸಿದರು.
ಸಿದ್ದರಾಮಯ್ಯ ಅವರನ್ನೇ ಮೂಲೆಗುಂಪು ಮಾಡುವ ಹುನ್ನಾರ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸಿನಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆದರೆ, ಇಂದು ಅವರನ್ನೇ ಮೂಲೆಗುಂಪು ಮಾಡಲು ಸ್ವಪಕ್ಷೀಯರೇ ಹೊರಟಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ಸಿದ್ದರಾಮಯ್ಯ ಅವರು ನ್ಯಾಯಾಲಯದಿಂದ ತಡೆಯಾಜ್ಞೆ (ಸ್ಟೇ) ತರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದರು.
ಸ್ಟಿಂಗ್ ಆಪರೇಷನ್ ಭೀತಿಯಲ್ಲಿ ಸಚಿವರು:
ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿರುವ ಹನಿಟ್ರ್ಯಾಪ್ ಹಾಗೂ ಸ್ಟಿಂಗ್ ಆಪರೇಷನ್ ವದಂತಿಗಳ ಕುರಿತು ಪ್ರತಿಕ್ರಿಯಿಸಿದ ಅವರು, ಸ್ಟಿಂಗ್ ಆಪರೇಷನ್ ನಿರ್ಮಾಪಕರನ್ನು ಕಂಡು ಕಾಂಗ್ರೆಸ್ ಸಚಿವರೇ ಭಯಭೀತರಾಗಿದ್ದಾರೆ. ಸ್ವತಃ ಸಚಿವ ಕೆ.ಎನ್. ರಾಜಣ್ಣ ಅವರೇ ಮೊನ್ನೆ ಈ ಬಗ್ಗೆ ಆರೋಪ ಮಾಡಿದ್ದಾರೆ. ಈ ಷಡ್ಯಂತ್ರದ ಹಿಂದಿರುವ ಅಸಲಿ ನಿರ್ದೇಶಕ ಮತ್ತು ನಿರ್ಮಾಪಕರು ಯಾರು ಎಂಬ ಸತ್ಯಾಸತ್ಯತೆಯನ್ನು ಸದ್ಯದಲ್ಲೇ ಕಾಂಗ್ರೆಸ್ ನಾಯಕರೇ ಹೊರಹಾಕಲಿದ್ದಾರೆ ಎಂದು ವಿಜಯೇಂದ್ರ ತಿಳಿಸಿದರು.

