ಹೊಸನಗರ

ಕಾಂಗ್ರೆಸ್ ಸರ್ಕಾರ ಹಿಟ್ ವಿಕೆಟ್ ಆಗಲಿದೆ, ಯಾವಾಗ ಬೇಕಾದರೂ ಮಧ್ಯಂತರ ಚುನಾವಣೆ ಬರಬಹುದು: ಬಿ.ವೈ. ವಿಜಯೇಂದ್ರ ಭವಿಷ್ಯ

InShot 20261014 145158369

ಹೊಸನಗರ: ಆಡಳಿತಾರೂಢ ಕಾಂಗ್ರೆಸ್ ಶಾಸಕರಿಗೇ ತಮ್ಮ ಸರ್ಕಾರದ ಮೇಲೆ ವಿಶ್ವಾಸವಿಲ್ಲದಂತಾಗಿದ್ದು, ಮುಖ್ಯಮಂತ್ರಿಗಳೇ ಸರ್ಕಾರ ಹಿಟ್ ವಿಕೆಟ್ ಆಗುವ ಸಾಧ್ಯತೆಯಿದೆ. ಹೀಗಾಗಿ ರಾಜ್ಯದಲ್ಲಿ ಯಾವಾಗ ಬೇಕಾದರೂ ಮಧ್ಯಂತರ ಚುನಾವಣೆ ಎದುರಾಗಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಹೊಸನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ‘ಸೇವಾ ಸಂಕಲ್ಪ ಅಭಿಯಾನ’ದ ಸಮಾರೋಪ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ನಲ್ಲಿ ‘ಸ್ಟಿಂಗ್ ಸೆಲ್’ ಇದೆ:

ಬಿಜೆಪಿಯಲ್ಲಿ ಐಟಿ ಸೆಲ್ ಇರುವಂತೆ ಕಾಂಗ್ರೆಸ್‌ನಲ್ಲಿ ‘ಸ್ಟಿಂಗ್ ಸೆಲ್’ ಇದೆ. ಅಧಿಕಾರಕ್ಕೆ ಬರುವ ಹಪಾಹಪಿಯಿಂದ ಕಳೆದ 2-3 ವರ್ಷಗಳಿಂದ ಈ ಸ್ಟಿಂಗ್ ಸೆಲ್ ಕೆಲಸ ಮಾಡುತ್ತಿದ್ದು, ಅನೇಕ ಶಾಸಕರು ಹಾಗೂ ಸಚಿವರ ಸ್ಟಿಂಗ್ ಮಾಡಲಾಗಿದೆ. ಅವರ ಹೆಸರನ್ನು ನಾನು ಈಗ ಹೇಳುವುದಿಲ್ಲ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಶಾಸಕರೇ ಅದನ್ನು ಬಹಿರಂಗಪಡಿಸಲಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.

ಇನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಸಿದ್ದರಾಮಯ್ಯನವರನ್ನೇ ಇಂದು ಬಲಿಪಶು ಮಾಡುವ ಕೆಲಸವಾಗುತ್ತಿದೆ. ಅವರು ಇಂದು ಹೈಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದರು.

ರಾಜ್ಯದ ಖಜಾನೆ ಖಾಲಿ, ಸರ್ಕಾರ ದಿವಾಳಿ:

ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಗತಿ ಕುರಿತು ತೀವ್ರ ವಾಗ್ದಾಳಿ ನಡೆಸಿದ ಅವರು, ರಾಜ್ಯದ ಖಜಾನೆ ಸಂಪೂರ್ಣ ಖಾಲಿಯಾಗಿದ್ದು, ಸರ್ಕಾರ ದಿವಾಳಿಯಾಗಿದೆ ಎಂದು ಅಧಿಕೃತವಾಗಿ ಘೋಷಣೆ ಮಾಡುವುದೊಂದೇ ಬಾಕಿ ಇದೆ. ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಡೀಸೆಲ್ ಹಾಕಿಸಲು ಹಣವಿಲ್ಲದ ಸ್ಥಿತಿ ಬಂದಿದೆ. ಸಿಎಂ ಕರಾವಳಿಗೆ ಹೋಗಿ 34 ಸಾವಿರ ಕೋಟಿ ರೂ. ಘೋಷಣೆ ಮಾಡಿದ ಮರುದಿನವೇ ಆರ್ಥಿಕ ಇಲಾಖೆ ಪತ್ರ ಬರೆದು ಎಚ್ಚರಿಕೆ ನೀಡಿದೆ.

ಕಳೆದ ಮೂರೂವರೆ ವರ್ಷದಲ್ಲಿ ಬಡವರಿಗೆ ಒಂದೇ ಒಂದು ಮನೆ ನೀಡಿಲ್ಲ, ವಿಕಲಚೇತನ ಹಾಗೂ ವೃದ್ಧಾಪ್ಯ ವೇತನವನ್ನೂ ಸರಿಯಾಗಿ ಕೊಡುತ್ತಿಲ್ಲ. ಭೀಕರ ಬರಗಾಲವಿದ್ದರೂ ಕುಂಭಕರ್ಣ ನಿದ್ದೆಯಲ್ಲಿರುವ ಸರ್ಕಾರ, ಕೇವಲ 3 ದಿನ ಅಧಿವೇಶನ ಕರೆದು ರೈತರಿಗೆ 2500 ರೂ. ಪರಿಹಾರವನ್ನು ಭಿಕ್ಷೆಯ ರೀತಿ ನೀಡುತ್ತಿದೆ. ರೈತರಿಗೆ ದಿನಕ್ಕೆ 7 ಗಂಟೆ ಸತತ ವಿದ್ಯುತ್ ನೀಡುತ್ತಿಲ್ಲ ಹಾಗೂ 5 ಲಕ್ಷದವರೆಗೆ ರೈತರ ಸಾಲ ಮನ್ನಾ ಮಾಡಬೇಕೆಂಬ ನಮ್ಮ ಒತ್ತಾಯಕ್ಕೂ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೀಸಲಾತಿ ರಕ್ಷಿಸುವಲ್ಲಿ ಸರ್ಕಾರ ವಿಫಲ:

ಹಿಂದಿನ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಿಸಿ, ಹಿಂದುಳಿದ ವರ್ಗಗಳಿಗೆ ಅವಕಾಶ ಕಲ್ಪಿಸಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಇದನ್ನು ಹೈಕೋರ್ಟ್‌ಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದೆ. ಕೂಡಲೇ ರಾಜ್ಯ ಸರ್ಕಾರ ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕು ಎಂದು ಆಗ್ರಹಿಸಿದರು.

ಡಿ.ಕೆ. ಶಿವಕುಮಾರ್ ಹಾಗೂ ರಾಹುಲ್ ಗಾಂಧಿ ವಿರುದ್ಧ ಟೀಕೆ:

2014ರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಸೇವಕನಾಗಿ 2047ರ ವಿಕಸಿತ ಭಾರತದ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದ್ದು, ಭಾರತವನ್ನು ವಿಶ್ವದ 4ನೇ ದೊಡ್ಡ ಆರ್ಥಿಕತೆಯನ್ನಾಗಿ ರೂಪಿಸಿದ್ದಾರೆ. ಸತತ 3ನೇ ಬಾರಿ ಅಧಿಕಾರಕ್ಕೆ ಬಂದಿರುವ ಮೋದಿ ಸರ್ಕಾರದ ಜನಪ್ರಿಯತೆಯನ್ನು ಸಹಿಸಿಕೊಳ್ಳಲು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ. ತಾನು ಹುಟ್ಟಿರುವುದೇ ಪ್ರಧಾನಿಯಾಗಲು ಎಂದು ಭಾವಿಸಿರುವ ರಾಹುಲ್ ಗಾಂಧಿ, ಚುನಾವಣಾ ಆಯೋಗ ಮತ್ತು ನ್ಯಾಯಾಂಗದ ಮೇಲೆ ವಿಶ್ವಾಸವಿಲ್ಲದೆ ದೆಹಲಿಯಲ್ಲಿ ಕಾರ್ಯಕರ್ತರನ್ನು ಗುಂಪುಗೂಡಿಸಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇದೇ ವೇಳೆ ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ ಮಾತನಾಡಿದ ವಿಜಯೇಂದ್ರ, “ಡಿ.ಕೆ. ಶಿವಕುಮಾರ್ ಕೇವಲ ಕಾಂಗ್ರೆಸ್ ಕಾರ್ಯಕರ್ತರಲ್ಲ, ರಾಜ್ಯದ 7 ಕೋಟಿ ಜನರ ಪ್ರತಿನಿಧಿ. ಮೊನ್ನೆ ದೆಹಲಿ ರಸ್ತೆಯಲ್ಲಿ ಅವರನ್ನು ಹೇಗೆ ತಳ್ಳಿದರು ಎಂಬುದನ್ನು ಎಲ್ಲರೂ ನೋಡಿದ್ದಾರೆ. ದೆಹಲಿ ರಸ್ತೆಯಲ್ಲೇ ನಿಮ್ಮ ಪರಿಸ್ಥಿತಿ ಹೀಗಾದರೆ, ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ಮನೆಯಲ್ಲಿ ನಿಮ್ಮ ಸ್ಥಿತಿ ಹೇಗಿರಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ” ಎಂದು ಕುಟುಕಿದರು.

ಚುನಾವಣೆಗೆ ಸಜ್ಜಾಗಲು ಕರೆ:

ಸ್ಟಿಂಗ್ ವಿಚಾರದಲ್ಲಿ ಮುಳುಗಿರುವ ಸರ್ಕಾರ ಜಿ.ಪಂ, ತಾ.ಪಂ ಚುನಾವಣೆ ನಡೆಸುವುದು ಅನುಮಾನ. ಆದರೂ ವಿಪಕ್ಷವಾಗಿ ನಾವು ಸಂಘಟನೆ ಮಾಡಿ ಚುನಾವಣೆಗೆ ಸಿದ್ಧರಾಗಬೇಕು. ಸ್ಥಳೀಯ ಸಂಸ್ಥೆ ಚುನಾವಣಾ ಹೊಂದಾಣಿಕೆ ಕುರಿತು ಈಗಾಗಲೇ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲಾಗಿದ್ದು, ಕಾರ್ಯಕರ್ತರಿಗೆ ಯಾವುದೇ ಗೊಂದಲ ಹಾಗೂ ಅನ್ಯಾಯವಾಗದಂತೆ ನಿರ್ಧಾರ ಕೈಗೊಳ್ಳಲಾಗುವುದು. 2028ಕ್ಕೆ ಅಥವಾ ಅದಕ್ಕಿಂತ ಮೊದಲೇ ಚುನಾವಣೆ ಬಂದರೂ ನಾವೆಲ್ಲರೂ ಒಟ್ಟಾಗಿ ಎದುರಿಸಬೇಕು. ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ-ಚಂದ್ರರಷ್ಟೇ ಸತ್ಯ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!