ಹೊಸನಗರ

ಮಧು ಬಂಗಾರಪ್ಪಗೆ ಆಡಳಿತದ ಪರಿವೇ ಇಲ್ಲ, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಹರತಾಳು ಹಾಲಪ್ಪ ವಾಗ್ದಾಳಿ

ಸಚಿವ ಮಧು ಬಂಗಾರಪ್ಪ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ಮಾಜಿ ಸಚಿವ ಹರತಾಳು ಹಾಲಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಹರತಾಳು ಹಾಲಪ್ಪ ವಾಗ್ದಾಳಿ - H. Halappa

ಹೊಸನಗರ : ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಆಡಳಿತದ ಪರಿವೇ ಇಲ್ಲ, ಅನುಭವವೂ ಇಲ್ಲ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಹೊಸನಗರದಲ್ಲಿ ನಡೆಯುತ್ತಿರುವ ಸೇವಾ ಸಂಕಲ್ಪ ಅಭಿಯಾನದಲ್ಲಿ ಮಾತನಾಡಿದ ಅವರು, ಸಚಿವ ಮಧು ಬಂಗಾರಪ್ಪ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮಧು ಬಂಗಾರಪ್ಪ ವಿರುದ್ಧ ಕಿಡಿ:

“ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಎಂದಿಗೂ ಅಹಂಕಾರದ ಮಾತುಗಳನ್ನು ಆಡುತ್ತಿರಲಿಲ್ಲ. ಆದರೆ, ನಮ್ಮ ಈಗಿನ ಉಸ್ತುವಾರಿ ಸಚಿವರು ಅಹಂಕಾರದ ಮಾತುಗಳನ್ನಾಡಿಕೊಂಡು ಓಡಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸ್ವಂತ ಕ್ಷೇತ್ರ ಸೊರಬದಲ್ಲೇ ವ್ಯವಸ್ಥೆ ಸರಿಯಿಲ್ಲ, ಇನ್ನು ಶಿಕಾರಿಪುರಕ್ಕೆ ಬಂದು ಭಾಷಣ ಮಾಡುತ್ತಾರೆ. ಮಧು ಬಂಗಾರಪ್ಪ ಅವರು ಮೊದಲು ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಿ, ಆಡಳಿತದ ಕಡೆಗೆ ಗಮನ ಕೊಡಲಿ” ಎಂದು ಹಾಲಪ್ಪ ಗುಡುಗಿದರು.

ನಾವು ಕೋರ್ಟ್‌ನಲ್ಲಿ ಗೆದ್ದು ಬಂದಿದ್ದೇವೆ, ಸ್ಟೇ ತಂದಿಲ್ಲ:

“ಮಾತು ಮಾತಿಗೂ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಮತ್ತು ಹಾಲಪ್ಪ ಜೈಲಿಗೆ ಹೋಗಿಲ್ವಾ ಎಂದು ಪ್ರಶ್ನಿಸುತ್ತಿದ್ದರು. ಆದರೆ ನಾವಿಬ್ಬರೂ ನ್ಯಾಯಾಲಯದಲ್ಲಿ ಹೋರಾಡಿ, ಗೆದ್ದು ಬಂದಿದ್ದೇವೆಯೇ ಹೊರತು ಕೋರ್ಟ್‌ಗೆ ಹೋಗಿ ತಡೆಯಾಜ್ಞೆ (ಸ್ಟೇ) ತಂದಿಲ್ಲ. ನ್ಯಾಯಾಲಯ, ಜನತಾ ನ್ಯಾಯಾಲಯ ಹಾಗೂ ದೇವಾಲಯ ಹೀಗೆ ಎಲ್ಲಾ ಕಡೆಯೂ ನಾವು ಗೆದ್ದು ಬಂದಿದ್ದೇವೆ. ಆದರೆ ಈಗ ನೋಡಿದರೆ ಮಾಜಿ ಸಿಎಂ ಕೋರ್ಟ್‌ನಿಂದ ಸ್ಟೇ ತಂದು ಕುಳಿತಿದ್ದಾರೆ” ಎಂದು ವ್ಯಂಗ್ಯವಾಡಿದರು.

ಬೇಳೂರು ಗೋಪಾಲಕೃಷ್ಣ ವಿರುದ್ಧ ಏಕವಚನದಲ್ಲೇ ವಾಗ್ದಾಳಿ:

ಇದೇ ವೇಳೆ ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧವೂ ಹರಿಹಾಯ್ದ ಹಾಲಪ್ಪ, “ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಗಣಪತಿ ಹಬ್ಬಕ್ಕೆ ದುಡ್ಡು ಕೊಟ್ಟು ‘ಯಮಧೈರ್ಯ ಬೇಕು’ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಯಮಧೈರ್ಯ ಬೇಕು ಎಂದು ಹೇಳಿದ್ದು ಬಂಗಾರಪ್ಪನವರು, ಅವರಿಗೆ ಅಷ್ಟು ಧೈರ್ಯ ಇತ್ತು. ಆದರೆ ಬೇಳೂರು ಗೋಪಾಲಕೃಷ್ಣ ಎಲ್ಲರಿಗೂ ತಾನೇ ಭಾವ ಅಂದುಕೊಂಡು, ಬರೀ ‘ದೌಲತ್ತು’ ಮಾಡಿಕೊಂಡು ಕ್ಷೇತ್ರದಲ್ಲಿ ಓಡಾಡುತ್ತಿದ್ದಾನೆ. ಆತ ಓದಿದ್ದು ಕೇವಲ ಎಸ್‌ಎಸ್‌ಎಲ್‌ಸಿ, ಹೀಗಾಗಿ ಆತನಿಗೆ ಒಂದೂ ಚೂರು ಜ್ಞಾನ ಇಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಬರೀ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ” ಎಂದು ಕಿಡಿಕಾರಿದರು.

ಅಧಿಕಾರಿಗಳ ಕೊರತೆ, ನಿಷ್ಕ್ರಿಯ ಪೊಲೀಸ್ ವ್ಯವಸ್ಥೆ:

ಕ್ಷೇತ್ರದ ಆಡಳಿತ ವ್ಯವಸ್ಥೆಯ ಕುರಿತು ಕಳವಳ ವ್ಯಕ್ತಪಡಿಸಿದ ಅವರು, “ನಮ್ಮ ಕ್ಷೇತ್ರದ ಬಹುತೇಕ ಕಡೆ ಅಧಿಕಾರಿಗಳೇ ಇಲ್ಲ, ಹುದ್ದೆಗಳೆಲ್ಲವೂ ಖಾಲಿ ಬಿದ್ದಿವೆ. ಕೆಲವು ಪೊಲೀಸ್ ಠಾಣೆಗಳಲ್ಲಿ ಸಬ್ ಇನ್ಸ್‌ಪೆಕ್ಟರ್‌ಗಳೇ (PSI) ಇಲ್ಲ. ಪರಿಸ್ಥಿತಿ ಎಷ್ಟರಮಟ್ಟಿಗೆ ಹದಗೆಟ್ಟಿದೆ ಎಂದರೆ, ಮಹಿಳೆಯರ ಮೇಲೆ ಹಲ್ಲೆ ನಡೆದರೂ ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ” ಎಂದು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!