ಹೊಸನಗರ ; ಮಾರುತಿಪುರ ಗ್ರಾಮ ಪಂಚಾಯಿತಿಗೆ ಜಯಮ್ಮ ದೇವರಾಜ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಪಂಚಾಯಿತಿ ಕಛೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅವರು ಅವಿರೋಧ ಆಯ್ಕೆಯಾದರು. ಈವರೆಗೆ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದ ಕೆ.ಆರ್.ದೀಪಿಕಾ ಅವರು ಇತ್ತೀಚೆಗೆ ರಾಜೀನಾಮೆ ಸಲ್ಲಿಸಿದ್ದರಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಈ ಗ್ರಾಪಂ ಒಟ್ಟು 16 ಸದಸ್ಯ ಬಲ ಹೊಂದಿದ್ದು ಅಧ್ಯಕ್ಷರ ಆಯ್ಕೆ ಚುನಾವಣೆಗೆ ಬಿಜೆಪಿ ಬೆಂಬಲಿತ ಎಲ್ಲಾ 7 ಸದಸ್ಯರು ಗೈರಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಜಯಮ್ಮ ದೇವರಾಜ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಎಸ್.ಶರಣಗೌಡ ಬೀರಾದಾರ್ ಅವರು ಜಯಮ್ಮ ದೇವರಾಜ್ ಅವಿರೋಧ ಆಯ್ಕೆಯಾಗಿರುವುದನ್ನು ಘೋಷಿಸಿದರು. ಪಿಡಿಒ ಜಾನ್ ಡಿಸೋಜಾ ನಡಾವಳಿ ದಾಖಲಿಸಿದರು.
ಬಳಿಕ ನಡೆದ ಅಭಿನಂದನಾ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಚಂದ್ರಮೌಳಿ ಮಾತನಾಡಿ, ಗ್ರಾಮ ಪಂಚಾಯಿತಿಯಲ್ಲಿ ಎಲ್ಲಾ ಸದಸ್ಯರೂ ಒಗ್ಗಟ್ಟಿನಿಂದ ಶ್ರಮಿಸಿದಲ್ಲಿ ಮಾತ್ರ ಆಡಳಿತ ಸುಗಮವಾಗಿ ಸಾಗುತ್ತದೆ. ಜನಪರ ಕೆಲಸಗಳಿಗೆ ಪಕ್ಷ ಸಿದ್ದಾಂತ, ವೈಯಕ್ತಿಕ ಭಿನ್ನಾಭಿಪ್ರಾಯಗಳು ಅಡ್ಡಿಯಾಗಬಾರದು. ಸಿಬ್ಬಂದಿಗಳ ವಿಶ್ವಾಸ ಪಡೆದು ಗ್ರಾಮ ಒಳಿತಿಗಾಗಿ ಕೆಲಸ ಮಾಡುವುದರಲ್ಲಿ ಸಾರ್ಥಕತೆ ಇದೆ. ಸರ್ಕಾರದ ಯೋಜನೆಗಳ ಅನುಷ್ಠಾನ ಹಾಗೂ ವಿದ್ಯುತ್, ನೀರು, ರಸ್ತೆ ಅಭಿವೃದ್ಧಿಯಂತಹ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿ ಗ್ರಾಮಸ್ಥರು ಮತ್ತು ಹಿರಿಯರು ಸದಸ್ಯರಿಗೆ ಸಲಹೆ ಸೂಚನೆಗಳನ್ನು ನೀಡಿದಾಗ ಆ ಗ್ರಾಮವು ಅಭಿವೃದ್ಧಿ ಕಾಣಲು ಸಾಧ್ಯ ಎಂದು ಸಲಹೆ ನೀಡಿದರು.

ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ, ಗ್ರಾ.ಪಂ. ಸದಸ್ಯ ಎಚ್.ಬಿ.ಚಿದಂಬರ್ ಮಾತನಾಡಿ, ಅಧಿಕಾರವನ್ನು ಹಂಚಿಕೆ ಮಾಡಿಕೊಳ್ಳುವ ಒಡಂಬಡಿಕೆಯಂತೆ ನೂತನ ಅಧ್ಯಕ್ಷರ ಆಯ್ಕೆ ಮಾಡಲಾಗಿದೆ. ಪಕ್ಷ ಸಂಘಟಿತವಾಗಿದ್ದು, ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೇ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ ಎಂದರು.
ಉಪಾಧ್ಯಕ್ಷ ಎಸ್.ಜೆ.ಅವಿನಾಶ್, ಸದಸ್ಯರಾದ ಶಂಕರಶೆಟ್ಟಿ, ಪ್ರಕಾಶ್, ಇಂದ್ರೇಶ್, ಕೆ.ಆರ್.ದೀಪಿಕಾ, ನಾರಾಯಣಪ್ಪ, ಚಂದ್ರಪ್ಪ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಸದಾಶಿವ ಶ್ರೇಷ್ಠಿ, ಟೌನ್ ಘಟಕದ ಅಧ್ಯಕ್ಷ ಗುರುರಾಜ್, ಸಿದ್ದವೀರಪ್ಪಗೌಡ, ಎಸ್.ಕೆ.ರಾಜು, ಎಂ.ಪಿ.ಪ್ರಕಾಶ್ ಇದ್ದರು.