ಹೊಸನಗರ

ಹೊಸನಗರವನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಲು ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ

ಭೀಕರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ರಾಜ್ಯ ಸರ್ಕಾರ ಹೊಸನಗರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸದಿರುವುದನ್ನು ಖಂಡಿಸಿ ಜೆಡಿಎಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.

ಹೊಸನಗರವನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಲು ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ JDS

ಹೊಸನಗರ: ತಾಲ್ಲೂಕಿನಲ್ಲಿ ಭೀಕರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ರಾಜ್ಯ ಸರ್ಕಾರ ಹೊಸನಗರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸದಿರುವುದನ್ನು ಖಂಡಿಸಿ ಜೆಡಿಎಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.

WhatsApp Group Join Now
Telegram Group Join Now
Instagram Group Join Now

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ವರ್ತೇಶ್ ಅವರ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಮುಖಂಡರು ಮತ್ತು ಕಾರ್ಯಕರ್ತರು, ಗ್ರೇಡ್ 2 ತಹಶೀಲ್ದಾರ್ ಸುಧೀಂದ್ರ ಕುಮಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರವನ್ನು ರವಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವರ್ತೇಶ್, ಮಳೆಯ ಅಭಾವದಿಂದಾಗಿ ಕೃಷಿ ಚಟುವಟಿಕೆಗಳು ಸಂಪೂರ್ಣ ನೆಲಕಚ್ಚಿವೆ. ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿಗೆ ತೀವ್ರ ತತ್ವಾರ ಎದುರಾಗಿದೆ. ಅಂತರ್ಜಲ ಮಟ್ಟ ಕುಸಿದಿದ್ದು, ಕೊಳವೆಬಾವಿಗಳು ಹಾಗೂ ಆರ್‌ಓ ಪ್ಲಾಂಟ್‌‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಉದ್ಯೋಗದ ಕೊರತೆಯಿಂದ ಜನಸಾಮಾನ್ಯರು ಕಂಗೆಟ್ಟಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸರ್ಕಾರ ಹೊಸನಗರವನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸದೆ ನಿರ್ಲಕ್ಷ್ಯ ಮೆರೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ವಿರೋಧಿ ಸರ್ಕಾರ:

ಜೆಡಿಎಸ್ ರಾಜ್ಯ ಕಾರ್ಯದರ್ಶಿ ಚಾಬುಸಾಬ್ ಮಾತನಾಡಿ, ಪ್ರಸ್ತುತ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ರೈತ ವಿರೋಧಿಯಾಗಿದೆ ಎಂದು ಟೀಕಿಸಿದರು. ಬರಗಾಲವಿದ್ದರೂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಜೊತೆಗೆ, ಬಿಡದಿಯಲ್ಲಿ ಜಮೀನು ಬಿಟ್ಟುಕೊಡಲು ನಿರಾಕರಿಸುತ್ತಿರುವ ರೈತರ ಮೇಲೆ ದೌರ್ಜನ್ಯ ಎಸಗಲಾಗುತ್ತಿದ್ದು, ಶಾಂತಿಯುತವಾಗಿ ಹೋರಾಟ ಮಾಡುತ್ತಿರುವವರ ಮೇಲೆ ಪೊಲೀಸ್ ಬಲಪ್ರಯೋಗ ಮಾಡಿ ಕೇಸು ದಾಖಲಿಸಲಾಗುತ್ತಿದೆ ಎಂದು ದೂರಿದರು.

ಕಸ್ತೂರಿ ರಂಗನ್ ವರದಿ ವಿಚಾರ:

ಕಸ್ತೂರಿ ರಂಗನ್ ವರದಿಯ ಕರಡು 2013ರಲ್ಲಿ ಪ್ರಕಟವಾದಾಗಲೇ ಅದನ್ನು ತಡೆಯುವ ಅವಕಾಶ ಕಾಂಗ್ರೆಸ್ ಸರ್ಕಾರಕ್ಕಿತ್ತು. ಆದರೆ ಅಂದು ಸುಮ್ಮನಿದ್ದು, ಈಗ ಬಿಜೆಪಿ ಹಾಗೂ ಜೆಡಿಎಸ್ ಮೇಲೆ ಆರೋಪ ಮಾಡುತ್ತಿದ್ದಾರೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರು ಈ ವರದಿ ಜಾರಿಯಾಗದಂತೆ ನೋಡಿಕೊಳ್ಳಲಿದ್ದಾರೆ, ಹೀಗಾಗಿ ಮಲೆನಾಡಿನ ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಚಾಬುಸಾಬ್ ಭರವಸೆ ನೀಡಿದರು.

ಪರಿಹಾರಕ್ಕೆ ಆಗ್ರಹ:

ಜೆಡಿಎಸ್ ಹಿರಿಯ ಮುಖಂಡ ಎಂ.ವಿ. ಜಯರಾಮ್ ಮಾತನಾಡಿ, ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ತುರ್ತು ಬರಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆ ಬಿಗಡಾಯಿಸುವುದರಿಂದ ಈಗಲೇ ಕುಡಿಯುವ ನೀರಿನ ಪೂರೈಕೆಗೆ ವ್ಯವಸ್ಥೆ ಮಾಡಬೇಕು. ಜಾನುವಾರುಗಳ ರಕ್ಷಣೆಗಾಗಿ ಮೇವು ಬ್ಯಾಂಕ್ ಹಾಗೂ ಗೋಶಾಲೆಗಳನ್ನು ತೆರೆಯಬೇಕು. ಮಳೆಯಿಲ್ಲದೆ ಒಣಗಿರುವ ಬೆಳೆಗಳ ವೈಜ್ಞಾನಿಕ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಕಾರ್ಯಕ್ರಮದಲ್ಲಿ ಜೆಡಿಎಸ್ ಪ್ರಮುಖರಾದ ಜಬಗೋಡು ಹಾಲಪ್ಪ ಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ವಿ. ಜಯರಾಮ್, ಕಲ್ಲೂರು ಈರಣ್ಣ, ರಾಮಕಾಂತ್, ಜಯನಗರ ಷಣ್ಮುಖಪ್ಪ, ಕಾಯಿ ನಾಗೇಶ್, ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಚಂದ್ರಪ್ಪ, ದೂನ ಮಲ್ಲೇಶ್, ದೇವರಾಜ್, ಉಮೇಶ್, ರಮೇಶ್, ಫಾರೂಕ್, ಹರೀಶ್, ವಿಶ್ವನಾಥ್, ರಘು ಪೂಜಾರಿ, ನಾಗರಾಜ್, ದೊಂಬೆಕೊಪ್ಪ ರಾಮಪ್ಪ ಸೇರಿದಂತೆ ಅನೇಕ ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!