RIPPONPETE ; ಜಾರ್ಖಂಡ್ ಮೂಲದ ಕಾರ್ಮಿಕನೊಬ್ಬ ನಿಗೂಡವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಪಂ ವ್ಯಾಪ್ತಿಯ ಹೊಂಡಲಗದ್ದೆ ಗ್ರಾಮದಲ್ಲಿ ನಡೆದಿದೆ.
ಜಾರ್ಖಂಡ್ ಮೂಲದ ಉದಯ್ (26) ಎಂಬ ಕಾರ್ಮಿಕ ಹೊಂಡಲಗದ್ದೆಯ ಕ್ವಾರೆಯೊಂದರಲ್ಲಿ ಕೆಲಸ ಮಾಡುತ್ತಿದ್ದು ಶುಕ್ರವಾರ ರಾತ್ರಿ ನಿಗೂಢವಾಗಿ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ.
ಆಗಿದ್ದೇನು ?
ಉತ್ತರ ಭಾರತದ ಹಲವು ಕಾರ್ಮಿಕರು ಈ ಕಲ್ಲು ಕ್ವಾರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಶುಕ್ರವಾರ ರಾತ್ರಿ ಜಾರ್ಖಂಡ್ ಮೂಲದ ಉದಯ್ ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಶುಕ್ರವಾರ ರಾತ್ರಿ ವಿಪರೀತ ಸಿಡಿಲು ಸಹಿತ ಮಳೆಯಾಗಿದ್ದು ಉದಯ್ ಸಿಡಿಲು ಬಡಿದು ಸಾವನ್ನಪ್ಪಿರಬಹುದು ಅಥವಾ ಗಣಿ ಬ್ಲಾಸ್ಟ್ ನಿಂದ ಸತ್ತಿರಬಹುದು ಎಂಬ ಶಂಕೆ ಸ್ಥಳೀಯರಲ್ಲಿ ಹುಟ್ಟಿಕೊಂಡಿತ್ತು.
ಜಾರ್ಖಂಡ್ ಗೆ ಮೃತದೇಹ :
ಈ ಉಹಾಪೋಹಗಳಿಗೆ ಪೂರಕವೆಂಬಂತೆ ಕಲ್ಲು ಕ್ವಾರೆಯ ಮಾಲೀಕರು ಹಾಗೂ ಸಂಬಂಧಿಸಿದವರು ಘಟನೆಯ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಮುಟ್ಟಿಸದೇ ಆತುರ ಆತುರದಲ್ಲಿ ಕೋಣಂದೂರು ಆಸ್ಪತ್ರೆಗೆ ಮೃತದೇಹವನ್ನು ಕರೆದೊಯ್ದು ಸ್ವಾಭಾವಿಕ ಸಾವು ಎಂಬ ರಿಪೋರ್ಟ್ ರೆಡಿ ಮಾಡಿಸಿ ರಾತ್ರೋರಾತ್ರಿ ಮೃತದೇಹವನ್ನು ಜಾರ್ಖಂಡ್ ಗೆ ಕಳುಹಿಸಿಕೊಟ್ಟಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಚುರುಕುಗೊಂಡ ಪೊಲೀಸ್ ತನಿಖೆ !
ಘಟನೆಯ ಬಗ್ಗೆ ಮಾಹಿತಿ ತಿಳಿದ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್.ಪಿ. ಸಂಬಂಧಿಸಿದವನ್ನು ವಿಚಾರಣೆಗೊಳಪಡಿಸಿ ಘಟನೆಯ ಸತ್ಯಾಸತ್ಯತೆ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಶಿವಮೊಗ್ಗಕ್ಕೆ ಮೃತದೇಹ ವಾಪಾಸ್ !
ತನಿಖೆ ಕೈಗೆತ್ತಿಕೊಂಡಿರುವ ರಿಪ್ಪನ್‌ಪೇಟೆ ಪೊಲೀಸರು 2 ಸಾವಿರ ಕಿ.ಮೀ. ದೂರದ ಜಾರ್ಖಂಡ್ ಗೆ ಕರೆದೊಯ್ದಿದ್ದ ಮೃತದೇಹವನ್ನು ವಾಪಾಸ್ ತರಿಸಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಜಾರ್ಖಂಡ್ ನಿಂದ ತುತ್ತು ಅನ್ನಕ್ಕಾಗಿ ವಲಸೆ ಬಂದಿದ್ದ ಬಡ ಕಾರ್ಮಿಕ ಉದಯ್ ಸಿಡಿಲು ಬಡಿದುದೋ? ಗಣಿ ಬ್ಲಾಸ್ಟ್ ನಿಂದಾನೋ? ಅಥವಾ ಹೃದಯಾಘಾತದಿಂದ ಸತ್ತನೋ? ಎಂಬ ಸತ್ಯಾಸತ್ಯತೆ ಮರಣೋತ್ತರ ಪರೀಕ್ಷೆಯ ನಂತರ ತಿಳಿದುಬರಲಿದೆ.