ಹೊಸನಗರ ; ನಮ್ಮ ಇಂದಿನ ದೈನಂದಿನ ಜೀವನ ಎಂದೆಂದಿಗಿಂತಲೂ ಹೆಚ್ಚು ಹೆಚ್ಚು ಸಂಕೀರ್ಣವಾಗತೊಡಗಿದೆ ಕಾನೂನು ಜ್ಞಾನವಿಲ್ಲದ ವಿದ್ಯಾವಂತರು ಸಹ ಅನೇಕ ಬಾರಿ ಶೋಷಣೆಗೊಳಗಾಗುತ್ತಾರೆ. ಆದ್ದರಿಂದ ಉತ್ತಮ ಶಿಕ್ಷಣ ಪಡೆದು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಹೊಸನಗರ ಜೆಎಂಎಫ್ಸಿ ನ್ಯಾಯಾಲಯದ ಪ್ರಧಾನ ವ್ಯವಹಾರ ನ್ಯಾಯಾಧೀಶ ಮಾರುತಿ ಶಿಂಧೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ಪಟ್ಟಣದ ಕುವೆಂಪು ವಿದ್ಯಾಸಂಸ್ಥೆಯಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಸಮಾರಂಭವನ್ನು ರಾಷ್ಟ್ರಕವಿ ಕುವೆಂಪುರವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕುವೆಂಪು ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ಸೊನಲೆ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕಿ ಸುಮಂಗಲ, ವಕೀಲರ ಸಂಘದ ಅಧ್ಯಕ್ಷ ಹೆಚ್ ಚಂದ್ರಪ್ಪ, ವಕೀಲರಾದ ಎ.ಜೆ ಕರ್ಣಕುಮಾರ್ ಮುಖ್ಯ ಅತಿಥಿ ಹಾಗು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಡತನ ನಿರ್ಮೂಲನೆ ಯೋಜನೆಗಳು ಹಾಗೂ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಕುರಿತು ಮಾತನಾಡಿದರು.

ಕು. ಚಾಕ್ಷುಷಾ ಪ್ರಾರ್ಥಿಸಿದರು. ಪವಿತ್ರ ಗಂಗಾಧರ ಕಟ್ಟಿಮನಿ ಸ್ವಾಗತಿಸಿದರು. ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಪರಿಸರ ಜಾಗೃತಿ ಗೀತೆ ಹಾಡಿದರು. ಶಾಲಾ ಮುಖ್ಯೋಪಾಧ್ಯಾಯ ನಾಗೇಂದ್ರ ಮನ್ನಿಸಿದರು.