ಶಿವಮೊಗ್ಗ: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಅತ್ಯಂತ ಶಕ್ತಿಶಾಲಿಯಾಗಿ ಬೆಳೆದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಸಾರಥ್ಯದಲ್ಲಿ ಸರ್ಕಾರದ ಗ್ಯಾರಂಟಿ ಹಾಗೂ ಅಭಿವೃದ್ಧಿ ಯೋಜನೆಗಳು ಜನಸಾಮಾನ್ಯರನ್ನು ಯಶಸ್ವಿಯಾಗಿ ತಲುಪುತ್ತಿವೆ. ಇದನ್ನು ಸಹಿಸದ ಕೆಲ ಹಿತಾಸಕ್ತಿಗಳು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಘನತೆಗೆ ಧಕ್ಕೆ ತರಲು ಆಧಾರರಹಿತ ಆರೋಪಗಳನ್ನು ಮಾಡುತ್ತಿವೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶಿಸ್ತು ಉಲ್ಲಂಘಿಸಿದವರಿಗೆ ಕೆಪಿಸಿಸಿ ನೋಟಿಸ್ !
ಇತ್ತೀಚೆಗೆ ಪಕ್ಷದ ಮುಖಂಡರೊಬ್ಬರು ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರು ಮತ್ತು ಶಾಸಕರ ವಿರುದ್ಧ ಯಾವುದೇ ಆಧಾರವಿಲ್ಲದೆ ಗಂಭೀರ ಆರೋಪ ಮಾಡಿದ್ದಾರೆ. ಈ ರೀತಿ ಪಕ್ಷವಿರೋಧಿ ಹೇಳಿಕೆ ನೀಡಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಈಗಾಗಲೇ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿದೆ. ನಿಗದಿತ ಅವಧಿಯಲ್ಲಿ ಸೂಕ್ತ ಸಮಜಾಯಿಷಿ ನೀಡದಿದ್ದರೆ, ಶಿಸ್ತು ನಿಯಮಾವಳಿಗಳ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಪಕ್ಷ ನೀಡಿದ ಮನ್ನಣೆ ಮರೆತು ಆರೋಪ ಮಾಡುವುದು ಅಕ್ಷಮ್ಯ :
ಒಂದು ಸಣ್ಣ ಸ್ಥಳೀಯ ಚುನಾವಣೆಯಲ್ಲೂ ಗೆಲ್ಲಲಾಗದ ವ್ಯಕ್ತಿಗೂ ಕಾಂಗ್ರೆಸ್ ಸೂಕ್ತ ಸ್ಥಾನಮಾನ ಹಾಗೂ ದೊಡ್ಡ ಅವಕಾಶಗಳನ್ನು ಕಲ್ಪಿಸಿದೆ. ಭದ್ರಾ ಕಾಡಾ ಹಾಗೂ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ಅಧ್ಯಕ್ಷ ಹುದ್ದೆಗಳನ್ನು ನೀಡಿ ಗೌರವಿಸಿದೆ. ಹೀಗಿದ್ದರೂ, ಪಕ್ಷವನ್ನು ಬಲಪಡಿಸುವ ಬದಲು ಹಗಲಿರುಳು ಶ್ರಮಿಸುವ ನಿಷ್ಠಾವಂತ ಕಾರ್ಯಕರ್ತರು ಮತ್ತು ನಾಯಕರ ಮೇಲೆ ಸುಳ್ಳು ಆರೋಪ ಹೊರಿಸುತ್ತಿರುವುದು ತೀರಾ ಖಂಡನೀಯ ಎಂದರು.
ಕಾಂಗ್ರೆಸ್‌ನಲ್ಲಿ ವ್ಯಕ್ತಿಪೂಜೆಗೆ ಜಾಗವಿಲ್ಲ :
ಕಾಂಗ್ರೆಸ್ ಸುದೀರ್ಘ ಇತಿಹಾಸವಿರುವ ರಾಷ್ಟ್ರೀಯ ಪಕ್ಷವಾಗಿದ್ದು, ಇಲ್ಲಿ ವ್ಯಕ್ತಿಪೂಜೆಗೆ ಆಸ್ಪದವಿಲ್ಲ. ಮುಖ್ಯಮಂತ್ರಿಗಳು ಹಾಗೂ ರಾಜ್ಯ ನಾಯಕರ ಜನಪರ ಕಾರ್ಯಕ್ರಮಗಳನ್ನು ಪ್ರತಿ ಮನೆಗೆ ತಲುಪಿಸುವುದು ಪ್ರತಿಯೊಬ್ಬರ ಕರ್ತವ್ಯ. ಜಿಲ್ಲಾ ಕಾಂಗ್ರೆಸ್ ಕೇವಲ ಒಬ್ಬ ವ್ಯಕ್ತಿಯ ಸ್ವತ್ತಲ್ಲ, ರಕ್ತ ಸುರಿಸಿ ದುಡಿದ ಸಾವಿರಾರು ಕಾರ್ಯಕರ್ತರ ಹಾಗೂ ಮುಖಂಡರ ಶ್ರಮದಿಂದ ಪಕ್ಷ ಬೆಳೆದಿದೆ ಎಂದು ನೆನಪಿಸಿದರು.
40 ವರ್ಷಗಳ ಕಳಂಕರಹಿತ ರಾಜಕೀಯ ಪಯಣ :
“ನಾನು ಕಳೆದ 40 ವರ್ಷಗಳಿಂದ ಬೂತ್ ಮಟ್ಟದಿಂದ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಗ್ರಾಪಂ, ತಾಪಂ ಹಾಗೂ ಜಿಪಂ ಸದಸ್ಯನಾಗಿ, ಜಿಪಂ ಅಧ್ಯಕ್ಷನಾಗಿ ಕಳಂಕರಹಿತವಾಗಿ ಸೇವೆ ಸಲ್ಲಿಸಿದ್ದೇನೆ. ಯಾವುದೇ ಅಧಿಕಾರದ ಆಸೆಯಿಲ್ಲದೆ ಸಾರ್ವಜನಿಕರ ಹಿತಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದೇನೆ. ಆದಾಗ್ಯೂ, ನನ್ನ ವಿರುದ್ಧ ಕೆಲವರು ಹತಾಶೆಯಿಂದ ದುರುದ್ದೇಶಪೂರಿತ ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ದಾಖಲೆಗಳಿದ್ದರೆ ಬಹಿರಂಗ ಚರ್ಚೆಗೆ ಬನ್ನಿ, ಕಾನೂನು ಹೋರಾಟಕ್ಕೆ ಎಚ್ಚರಿಕೆ :
ನನ್ನ ವಿರುದ್ಧ ಆರೋಪ ಮಾಡುವವರು ಗಾಳಿಯಲ್ಲಿ ಗುಂಡು ಹಾರಿಸುವುದನ್ನು ಬಿಟ್ಟು, ಸೂಕ್ತ ಸಾಕ್ಷ್ಯಗಳು ಮತ್ತು ದಾಖಲೆಗಳಿದ್ದರೆ ಬಹಿರಂಗ ಚರ್ಚೆಗೆ ಬರಲಿ. ಪಕ್ಷದ ವೇದಿಕೆಯಲ್ಲೂ ಹಾಗೂ ಕಾನೂನಾತ್ಮಕವಾಗಿಯೂ ಅದನ್ನು ಎದುರಿಸಲು ನಾನು ಸಿದ್ಧ. ಯಾವುದೇ ಪುರಾವೆಯಿಲ್ಲದೆ ವೈಯಕ್ತಿಕ ತೇಜೋವಧೆ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಕೆಸರೆರಚಾಟ ಬಿಟ್ಟು ಪಕ್ಷ ಸಂಘಟನೆಗೆ ಒತ್ತು ನೀಡಬೇಕು. ಈ ವಿಚಾರವಾಗಿ ಪಕ್ಷದ ಹೈಕಮಾಂಡ್‌ಗೆ ದೂರು ನೀಡಲಾಗಿದ್ದು, ವರಿಷ್ಠರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಲಗೋಡು ರತ್ನಾಕರ್ ಸ್ಪಷ್ಟಪಡಿಸಿದ್ದಾರೆ.

