ಹೊಸನಗರದಲ್ಲಿ ಕೆಡಿಪಿ ಸಭೆ | ಕುಡಿಯುವ ನೀರು ಸರಬರಾಜು ವ್ಯವಸ್ಥೆ ಕಾಮಗಾರಿ ಅಪೂರ್ಣ ; ಶಾಸಕ ಆರಗ, ಬೇಳೂರು ಅಧಿಕಾರಿ ವರ್ಗದ ಮೇಲೆ ಅಸಮಧಾನ

Written by Mahesha Hindlemane

Published on:

ಹೊಸನಗರ ; ತಾಲೂಕಿನ ಅತಿಮಹತ್ವದ ಯೋಜನೆಯಾಗಿರುವ ಬಹುಗಾಮ ಕುಡಿಯುವ ನೀರಿನ ಯೋಜನೆ ಪ್ರಗತಿ ಕುಂಠಿತಗೊಂಡಿದೆ. ನಿಯಮಾಸುಸಾರ ಈಗಾಗಲೇ ಕಾಮಗಾರಿ ಮುಕ್ತಾಯವಾಗಬೇಕಿತ್ತು. ಆದರೆ ಇನ್ನೂ ಆರಂಭವೇ ಆಗಿಲ್ಲ. ಯಾಕೆ ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಇಲಾಖೆಯ ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅವರು ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಜೆಜೆಎಂ ಯೋಜನೆಯಡಿ ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ. ನಿರೀಕ್ಷಿತ ಪ್ರಗತಿ ಕಂಡುಬಂದಿಲ್ಲ. ಚಕ್ರಾನಗರ ಸಾವೇಹಕ್ಕಲು ಹಿನ್ನೀರಿನಿಂದ ತಾಲೂಕಿಗೆ ಸರಬರಾಜು ಆಗುವ ಬಹುಗ್ರಾಮ ಕುಡಿಯುವ ಯೋಜನೆ ಕಾಮಗಾರಿ ಈಗಾಗಲೇ ಮುಗಿದಿರಬೇಕಿತ್ತು. ಆದರೆ ಇನ್ನೂ ಆರಂಭಿಕ ಹಂತದಲ್ಲಿದೆ. ಟ್ಯಾಂಕ್, ಜಾಕ್‌ವೆಲ್ ಆಗುವ ಮುನ್ನವೇ ಪೈಪ್‌ಲೈನ್ ಮಾಡುತ್ತಿರುವ ಉದ್ದೇಶವೇನು ಎಂದು ಅವರು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್ ಅನ್ನು ಪ್ರಶ್ನಿಸಿದರು. ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ವಿಳಂಬ ಮಾಡುತ್ತಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಲು ತಿಳಿಸಿದರು.

ಬೆಳೆ ವಿಮಾ ಪರಿಹಾರ ಲಭ್ಯವಾಗದೇ ರೈತರಿಗೆ ಅನ್ಯಾಯವಾಗಿದೆ. ಮಳೆ ಮಾಪನ ಕೇಂದ್ರಗಳ ನಿರ್ವಹಣೆಗೆ ಕ್ರಮ ವಹಿಸಲಾಗಿದೆ. ಆದರೆ ಈಗ ನಷ್ಟವಾಗಿರುವ ರೈತರಿಗೆ ಯಾವ ರೀತಿಯ ಪರಿಹಾರ ನೀಡಬೇಕು. ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸೂಕ್ತ ಸಮಯದಲ್ಲಿ ಮಾಹಿತಿ ನೀಡದ ಕಾರಣ ಹಾಗೂ ಇಲಾಖೆಗಳ ನಡುವಿನ ಸಮನ್ವಯದ ಕೊರತೆ ರೈತರನ್ನು ಸಂಕಷ್ಟಕ್ಕೆ ನೂಕಿದೆ ಎಂದು ಇಬ್ಬರು ಶಾಸಕರು ಹೇಳಿದರು.

ಅರಣ್ಯ ಇಲಾಖೆ ಅಧಿಕಾರಿಗಳು ರೈತರನ್ನು ಬೆದರಿಸುವ ಪ್ರವೃತ್ತಿ ಮುಂದುವರೆದಿದೆ. 3 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರ ಅರಣ್ಯ ಭೂಮಿಯ ಸಾಗುವಳಿ ತೆರವು ಮಾಡುವುದಿಲ್ಲ ಎಂದು ಸರಕಾರವೇ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದೆ. ಆದರೆ ಕೆಲ ಅರಣ್ಯ ಅಧಿಕಾರಿಗಳು ರೈತರಿಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ನೋಟಿಸ್ ನೀಡುತ್ತಿದ್ದಾರೆ. ರೈತರಿಗೆ ಸೂಕ್ತ ಮಾಹಿತಿ ನೀಡುತ್ತಿಲ್ಲ ಎಂದು ನಾಮ ನಿರ್ದೇಶಿತ ಸದಸ್ಯೆ ಸುಮಾ ಸುಬ್ರಮಣ್ಯ ದೂರಿದರು.

ನ್ಯಾಯಾಲಯದ ಆದೇಶವನ್ನು ಹೊರತುಪಡಿಸಿ ಯಾವುದೇ ರೈತರಿಗೆ ನೋಟಿಸ್ ನೀಡದಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಗ್ರಾಮ ಪಂಚಾಯಿತಿಗಳಲ್ಲಿ ಚುನಾಯಿತ ಸದಸ್ಯರ ಅಧಿಕಾರಾವಧಿ ಮುಗಿದಿದೆ. ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪಿಡಿಒ ಹಾಗೂ ಆಡಳಿತಾಧಿಕಾರಿಗಳು ಜನಸ್ನೇಹಿಯಾಗಿ ವರ್ತಿಸಬೇಕು. ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರುವ ಸಾಧ್ಯತೆಯಿದ್ದು, ಪೂರ್ವ ತಯಾರಿ ನಡೆಸಿಕೊಳ್ಳಬೇಕು. ಯಾವುದೇ ರೀತಿಯ ನಿರ್ಲಕ್ಷ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಇಬ್ಬರು ಶಾಸಕರು ಅಧಿಕಾರಿವರ್ಗಕ್ಕೆ ಎಚ್ಚರಿಸಿದರು.

ಸಭೆಯಲ್ಲಿ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ, ಎ.ಬಿ.ಸಂಜಯ್, ತಾಲೂಕು ಪಂಚಾಯಿತಿ ಕಾರ‍್ಯನಿರ್ವಹಣಾಧಿಕಾರಿ ನರೇಂದ್ರ ಕುಮಾರ, ಆಡಳಿತಾಧಿಕಾರಿ ಅನ್ನಪೂರ್ಣ ನಾಗಪ್ಪ ನಾಮನಿರ್ದೇಶಿತ ಸದಸ್ಯರಾದ ನಾಗೇಂದ್ರ ಜೋಗಿ, ಚಂದ್ರೇಶ್, ಮಂಜಪ್ಪ, ಗುರುರಾಜ್, ಆಸಿಫ್, ಎಂ.ಎಂ. ಪರಮೇಶ್ವರ ಹಾಗೂ ಹೊಸನಗರ ತಾಲ್ಲೂಕಿನ ಕೆ.ಇ.ಬಿ ಇಂಜಿನಿಯರ್, ಚಂದ್ರಶೇಖರ್, ಕೃಷಿ ಇಲಾಖೆಯ ಸಹಾಯಕ ನಿರ್ದೆಶಕರಾದ ಸಚಿನ್ ಹೆಗಡೆ, ಸಬ್ ಇನ್ಸ್‌ಪೆಕ್ಟರ್ ಶಂಕರಗೌಡ ಪಾಟೀಲ್, ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಸುರೇಶ್, ಲಿಂಗರಾಜ್, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ತೋಟಗಾರಿಕ ಇಲಾಖೆಯ ಸಹಾಯಕ ನಿರ್ದೇಶಕ ಪುಟ್ಟನಾಯ್ಕ್ ಹಾಗೂ ಎಲ್ಲ ಸರ್ಕಾರಿ ಅಧಿಕಾರಿಗಳು ಹಾಗೂ ಮತ್ತಿತರರು ಇದ್ದರು.

Leave a Comment