ಸಕಲ ಧರ್ಮಕ್ಕೂ ದಯೆ ಮಾನವೀಯತೆ ಮುಕುಟ ಪ್ರಾಯ ; ರಂಭಾಪುರಿ ಜಗದ್ಗುರುಗಳು

Written by malnadtimes.com

Published on:

ಬಾಳೆಹೊನ್ನೂರು ; ಕಲಿ ಕಾಲದಲ್ಲಿ ಕರ್ಮ ಹೆಚ್ಚಾಗಿ ಧರ್ಮದ ಆಚರಣೆ ಇಲ್ಲದಂತಾಗಿದೆ. ಜಾತಿ ಜಂಜಡ ಹೆಚ್ಚಾತಿ ನೀತಿ ನಿಯಮ ಇಲ್ಲದಂತಾಗಿದೆ. ಸಕಲ ಧರ್ಮಕ್ಕೂ ದಯೆ ಮತ್ತು ಮಾನವೀಯತೆ ಮುಕುಟ ಪ್ರಾಯವಾಗಿದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

WhatsApp Group Join Now
Telegram Group Join Now
Instagram Group Join Now

ಅವರು ಬುಧವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಜರುಗಿದ ಹುಣ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಜೀವನಾಧಾರಕ್ಕೆ ನೀರು ಅನ್ನ ಗಾಳಿ ಮತ್ತು ಒಳ್ಳೆಯ ಮಾತು ಮುಖ್ಯ. ಧರ್ಮ, ಯಶಸ್ಸು, ನೀತಿ ಮತ್ತು ಮನೋಹರವಾದ ಮಾತುಳ್ಳವನು ಎಂದೂ ದುಃಖಕ್ಕೊಳಗಾಗುವುದಿಲ್ಲ. ಪ್ರಾಮಾಣಿಕ ಪ್ರಯತ್ನಕ್ಕೆ ಇರುವ ಬೆಲೆ ಬರಿ ಬಾಯ್ಮಾತಿಗೆ ಇಲ್ಲ. ಧಾರಾಳವಾಗಿ ಕೊಟ್ಟರೂ ಎಳ್ಳಷ್ಟು ಕಡಿಮೆಯಾಗದ ಸಂಪತ್ತು ಅಂದರೆ ಒಳ್ಳೆಯ ಮಾತು. ಕಷ್ಟದಲ್ಲಿ ತಾಳ್ಮೆ ನಷ್ಟದಲ್ಲಿ ಸಹನೆ ತೊಂದರೆಯಲ್ಲಿ ಶಾಂತಿ ದುಃಖದಲ್ಲಿ ಸಮಾಧಾನ ಇದ್ದವರಿಗೆ ಬಾಳಿನಲ್ಲಿ ಯಾವ ಭಯವೂ ಇಲ್ಲ. ಅವಶ್ಯಕತೆಯಿದ್ದರೂ ಇಲ್ಲದಿದ್ದರೂ ಯಾವಾಗಲೂ ಒಂದೇ ರೀತಿ ಬಾಳುವುದು ಶ್ರೇಯಸ್ಕರ. ದಾರಿ ಸರಿಯಿದ್ದರೆ ತಲುಪುವ ಗುರಿಯತ್ತ ಲಕ್ಷ್ಯವಿರಲಿ. ಅನ್ನ ಬೆಂದರೆ ಉಣ್ಣಲು ಯೋಗ್ಯ. ಮನುಷ್ಯ ನೊಂದರೆ ಬದುಕು ಸಾರ್ಥಕಗೊಳ್ಳುತ್ತದೆ. ಏಳುವಾಗ ದೃಢ ನಿರ್ಧಾರ ರಾತ್ರಿ ಮಲಗುವಾಗ ಆತ್ಮ ತೃಪ್ತಿ ಇದ್ದರೆ ಬದುಕು ಸಾರ್ಥಕ. ಏನು ಗಳಿಸಿದ್ದೇವೆ ಎಂಬುದಕ್ಕಿಂತ ಹೇಗೆ ಬಳಸಿದೆವು ಎಂಬುದು ಮುಖ್ಯವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಧರ್ಮ ಸಂವಿಧಾನದಲ್ಲಿ ನಿರೂಪಿಸಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಚಿತ್ರದುರ್ಗ ತಾಲೂಕಿನ ಕಲ್ಲೇನಹಳ್ಳಿ ಶ್ರೀ ಮರುಳಸಿದ್ಧೇಶ್ವರ ಮಠದ ತಿಪ್ಪೇಸ್ವಾಮಿ ಮತ್ತು ಭಕ್ತ ಮಂಡಳಿ ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಫಲ ಪುಷ್ಪವಿತ್ತು ಗೌರವಿಸಿದರು. ಈ ಪವಿತ್ರ ಸಮಾರಂಭದಲ್ಲಿ ಹೊಳೆನರಸೀಪುರ ಶಿವಾನಂದ, ಬೆಂಗಳೂರಿನ ವೀರಭದ್ರಯ್ಯ, ಕಾಶೀನಾಥಸ್ವಾಮಿ, ಆನಂದ, ಕೂಡ್ಲಗೆರೆ ಮಮತಾ ಮತ್ತು ಕಲ್ಲೇನಹಳ್ಳಿ ಭಕ್ತ ಮಂಡಳಿಯವರು ಉಪಸ್ಥಿತರಿದ್ದರು.

ಬೆಳಿಗ್ಗೆ ಕ್ಷೇತ್ರದ ಎಲ್ಲ ದೈವಗಳಿಗೆ ಹುಣ್ಣಿಮೆ ನಿಮಿತ್ಯ ವಿಶೇಷ ಪೂಜೆಗಳು ಜರುಗಿದವು. ಬಂದ ಭಕ್ತರಿಗೆ ಅನ್ನ ದಾಸೋಹ ಜರುಗಿತು.

Leave a Comment