ಹೊಸನಗರ

ಕೊಡಚಾದ್ರಿ ತಪ್ಪಲಿನ ಕಟ್ಟಿನಹೊಳೆಯಲ್ಲಿ ಬಿಎಸ್‌ಎನ್‌ಎಲ್ ಟವರ್ ಇದ್ದರೂ ಸಿಗ್ನಲ್ ಇಲ್ಲ: ಪ್ರವಾಸಿಗರು, ಗ್ರಾಮಸ್ಥರ ಪರದಾಟ

ಕೊಡಚಾದ್ರಿ ತಪ್ಪಲಿನ ಕಟ್ಟಿನಹೊಳೆಯಲ್ಲಿ ಬಿಎಸ್‌ಎನ್‌ಎಲ್ ಟವರ್ ಇದ್ದರೂ ಸಿಗ್ನಲ್ ಇಲ್ಲ: ಪ್ರವಾಸಿಗರು, ಗ್ರಾಮಸ್ಥರ ಪರದಾಟ – malnadtimes kattinah…

ಹೊಸನಗರ: ಶಿವಮೊಗ್ಗ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಕೊಡಚಾದ್ರಿಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಹಾಗೂ ಭಕ್ತರು ಭೇಟಿ ನೀಡುತ್ತಾರೆ. ಕೊಲ್ಲೂರು ಮೂಕಾಂಬಿಕಾ ದೇವಿಯ ಮೂಲಸ್ಥಾನವೆಂದು ನಂಬಲಾಗಿರುವ ಕೊಡಚಾದ್ರಿ, ಆದಿ ಶಂಕರಾಚಾರ್ಯರು ಧ್ಯಾನ ಮಾಡಿದ ಪುಣ್ಯಭೂಮಿ ಎಂಬ ಧಾರ್ಮಿಕ ಮಹತ್ವವನ್ನೂ ಹೊಂದಿದೆ. ಆದರೆ ಈ ಪ್ರಸಿದ್ಧ ಪ್ರವಾಸಿ ತಾಣದ ತಪ್ಪಲಿನಲ್ಲಿರುವ ಕಟ್ಟಿನಹೊಳೆ ಗ್ರಾಮದಲ್ಲಿ ಸಮರ್ಪಕ ಮೊಬೈಲ್ ನೆಟ್‌ವರ್ಕ್ ಇಲ್ಲದಿರುವುದು ಸ್ಥಳೀಯರು ಮತ್ತು ಪ್ರವಾಸಿಗರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ.

WhatsApp Group Join Now
Telegram Group Join Now
Instagram Group Join Now

ಕಟ್ಟಿನಹೊಳೆ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಯೋಜನೆಯಡಿ ಬಿಎಸ್‌ಎನ್‌ಎಲ್ 4ಜಿ ಮೊಬೈಲ್ ಟವರ್ ನಿರ್ಮಿಸಲಾಗಿದೆ. ಹೊಸ ಟವರ್ ಆರಂಭವಾದ ಬಳಿಕ ಉತ್ತಮ ಮೊಬೈಲ್ ಹಾಗೂ ಇಂಟರ್ನೆಟ್ ಸಂಪರ್ಕ ದೊರೆಯಲಿದೆ ಎಂಬ ನಿರೀಕ್ಷೆ ಗ್ರಾಮಸ್ಥರಲ್ಲಿತ್ತು. ಆದರೆ ಟವರ್ ಕಾರ್ಯಾರಂಭಗೊಂಡು ಹಲವು ತಿಂಗಳು ಕಳೆದಿದ್ದರೂ ಸ್ಥಿರವಾದ ನೆಟ್‌ವರ್ಕ್ ಸಿಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಮೊಬೈಲ್ ಸಿಗ್ನಲ್ ಅತ್ಯಂತ ದುರ್ಬಲವಾಗಿದ್ದು, ಕರೆ ಮಾಡಿದಾಗ ಒನ್‌ವೇ ಧ್ವನಿ ಕೇಳಿಸುವುದು, ಕರೆ ಮಧ್ಯದಲ್ಲೇ ಕಡಿತಗೊಳ್ಳುವುದು, ಸರ್ವರ್ ಸಂಪರ್ಕ ಲಭ್ಯವಿಲ್ಲ ಎಂಬ ಸಂದೇಶ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇಂಟರ್ನೆಟ್ ಸಂಪರ್ಕವೂ ಸರಿಯಾಗಿ ಲಭ್ಯವಾಗುತ್ತಿಲ್ಲ. ಕೆಲವೊಮ್ಮೆ ಐದರಿಂದ ಹತ್ತು ನಿಮಿಷಗಳಿಗೊಮ್ಮೆ ಸಿಗ್ನಲ್ ಸಂಪೂರ್ಣ ಕಡಿತಗೊಳ್ಳುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಪ್ರವಾಸಿಗರಿಗೂ ಸಂಕಷ್ಟ

ಕೊಡಚಾದ್ರಿಗೆ ಬರುವ ಪ್ರವಾಸಿಗರು ಆನ್‌ಲೈನ್ ಪಾವತಿ, ರೂಟ್ ಮ್ಯಾಪ್, ವಾಹನ ಸಂಪರ್ಕ, ತುರ್ತು ಕರೆ ಮತ್ತು ಕುಟುಂಬದವರೊಂದಿಗೆ ಸಂಪರ್ಕ ಸಾಧಿಸಲು ಮೊಬೈಲ್ ನೆಟ್‌ವರ್ಕ್ ಅವಲಂಬಿಸಿದ್ದಾರೆ. ಆದರೆ ಕಟ್ಟಿನಹೊಳೆ ಮತ್ತು ಕೊಡಚಾದ್ರಿ ಸುತ್ತಮುತ್ತ ಸಮರ್ಪಕ ಸಂಪರ್ಕ ಸಿಗದ ಕಾರಣ ಪ್ರವಾಸಿಗರು ತೊಂದರೆ ಅನುಭವಿಸುತ್ತಿದ್ದಾರೆ.

ಆನ್‌ಲೈನ್ ಪಾವತಿ ವ್ಯವಸ್ಥೆ ಬಳಸುವ ಹೋಟೆಲ್, ಅಂಗಡಿ ಹಾಗೂ ಜೀಪ್ ಚಾಲಕರಿಗೂ ಸಮಸ್ಯೆಯಾಗುತ್ತಿದೆ. ಮೊಬೈಲ್ ನೆಟ್‌ವರ್ಕ್ ಇಲ್ಲದಿರುವುದರಿಂದ ಯುಪಿಐ ಪಾವತಿ ಮಾಡಲು ಸಾಧ್ಯವಾಗದೆ ನಗದು ವಹಿವಾಟಿಗೆ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರಿ ಸೇವೆ, ಬ್ಯಾಂಕಿಂಗ್ ಕೆಲಸಕ್ಕೂ ಅಡ್ಡಿ

ಗ್ರಾಮಸ್ಥರಿಗೆ ಬ್ಯಾಂಕ್ ಕೆವೈಸಿ ನವೀಕರಣ, ಗ್ಯಾಸ್ ಬುಕ್ಕಿಂಗ್, ಗೃಹಜ್ಯೋತಿ ಸೇವೆಗಳ ನವೀಕರಣ, ಆಧಾರ್ ಸಂಬಂಧಿತ ಕೆಲಸಗಳು ಹಾಗೂ ವಿವಿಧ ಸರ್ಕಾರಿ ಸೌಲಭ್ಯಗಳಿಗೆ ಒಟಿಪಿ ಅಗತ್ಯವಾಗುತ್ತದೆ. ಆದರೆ ನೆಟ್‌ವರ್ಕ್ ಸ್ಥಿರವಾಗಿಲ್ಲದ ಕಾರಣ ಒಟಿಪಿ ಸಿಗದೆ ಹಲವು ಕೆಲಸಗಳು ಅರ್ಧದಲ್ಲೇ ನಿಲ್ಲುತ್ತಿವೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ವಿದ್ಯಾರ್ಥಿಗಳು ಆನ್‌ಲೈನ್ ಶಿಕ್ಷಣ, ಪರೀಕ್ಷಾ ಅರ್ಜಿ, ಉದ್ಯೋಗ ಅರ್ಜಿ ಹಾಗೂ ಅಧ್ಯಯನ ಸಾಮಗ್ರಿಗಳನ್ನು ಡೌನ್‌ಲೋಡ್ ಮಾಡಲು ತೊಂದರೆ ಅನುಭವಿಸುತ್ತಿದ್ದಾರೆ. ತುರ್ತು ಆರೋಗ್ಯ ಪರಿಸ್ಥಿತಿ ಅಥವಾ ಅಪಘಾತ ಸಂಭವಿಸಿದಾಗ ಕರೆ ಮಾಡಲು ಸಾಧ್ಯವಾಗದಿರುವುದು ಮತ್ತಷ್ಟು ಆತಂಕ ಮೂಡಿಸಿದೆ.

“ಟವರ್ ಕೇವಲ ಬೆದರುಗೊಂಬೆಯಂತೆ ನಿಂತಿದೆ”

ಈ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯ ನಿವಾಸಿ ಶಿವಕುಮಾರ್ ,

“ನಮ್ಮೂರಿನಲ್ಲಿ ಬಿಎಸ್‌ಎನ್‌ಎಲ್ ಟವರ್ ನಿರ್ಮಾಣವಾಗಿದೆ ಎಂಬುದು ದೂರದಿಂದ ಕಾಣುತ್ತದೆ. ಆದರೆ ಗ್ರಾಮಸ್ಥರಿಗೆ ಅದರ ಪ್ರಯೋಜನ ಸಿಗುತ್ತಿಲ್ಲ. ಟವರ್ ನಿರ್ಮಾಣವಾದ ಬಳಿಕ ಕಾರ್ಯಾರಂಭಕ್ಕೆ ಸುಮಾರು ಎರಡು ವರ್ಷ ಕಾಯಬೇಕಾಯಿತು. ಸಂಪರ್ಕ ಆರಂಭವಾಗಿ ಆರೇಳು ತಿಂಗಳು ಕಳೆದರೂ ಸ್ಥಿರವಾದ ವಿದ್ಯುತ್ ಮತ್ತು ನೆಟ್‌ವರ್ಕ್ ವ್ಯವಸ್ಥೆ ಇಲ್ಲ. ಕೆಲವೇ ನಿಮಿಷಗಳಲ್ಲಿ ಸಿಗ್ನಲ್ ಕಡಿತಗೊಳ್ಳುತ್ತದೆ. ಕರೆ ಮಾಡಿದರೆ ಒನ್‌ವೇ ಆಗುತ್ತದೆ ಅಥವಾ ಮಧ್ಯದಲ್ಲೇ ಕಾಲ್ ಕಟ್ ಆಗುತ್ತದೆ” ಎಂದು ಹೇಳಿದರು.

“ಗೂಗಲ್ ಪೇ, ಫೋನ್ ಪೇ, ಬ್ಯಾಂಕ್ ಕೆವೈಸಿ, ಗ್ಯಾಸ್ ಬುಕ್ಕಿಂಗ್ ಮತ್ತು ಸರ್ಕಾರಿ ಸೇವೆಗಳಿಗೆ ಒಟಿಪಿ ಅಗತ್ಯ. ಆದರೆ ನಮ್ಮೂರಿನ ನೆಟ್‌ವರ್ಕ್ ನಂಬಿಕೊಂಡರೆ ಯಾವುದೇ ಕೆಲಸ ಸಮಯಕ್ಕೆ ಆಗುವುದಿಲ್ಲ. ಹೆಸರಿಗಷ್ಟೇ 4ಜಿ ಟವರ್ ನಿರ್ಮಿಸಲಾಗಿದೆ. ಸೂಕ್ತವಾಗಿ ಕಾರ್ಯನಿರ್ವಹಿಸದ ಕಾರಣ ಇದು ಬೆದರುಗೊಂಬೆಯಂತೆ ನಿಂತಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ತಾಂತ್ರಿಕ ದೋಷ ಸರಿಪಡಿಸಲು ಮನವಿ

ಬಿಎಸ್‌ಎನ್‌ಎಲ್ ಟವರ್‌ಗೆ ಸ್ಥಿರ ವಿದ್ಯುತ್ ಸಂಪರ್ಕ, ಅಗತ್ಯ ಬ್ಯಾಕಪ್ ವ್ಯವಸ್ಥೆ ಹಾಗೂ ಸಮರ್ಪಕ ತಾಂತ್ರಿಕ ನಿರ್ವಹಣೆ ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಹೊಸನಗರ ಮತ್ತು ಶಿವಮೊಗ್ಗ ಜಿಲ್ಲಾ ಬಿಎಸ್‌ಎನ್‌ಎಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಟವರ್‌ನ ತಾಂತ್ರಿಕ ಸಮಸ್ಯೆ ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಸ್ಥಳೀಯ ಜನಪ್ರತಿನಿಧಿಗಳು ಕೂಡ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಕೊಡಚಾದ್ರಿಗೆ ಬರುವ ಪ್ರವಾಸಿಗರು, ಭಕ್ತರು ಹಾಗೂ ಕಟ್ಟಿನಹೊಳೆ ಗ್ರಾಮಸ್ಥರಿಗೆ ನಿರಂತರ 4ಜಿ ಸಂಪರ್ಕ ದೊರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Koushik G K

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ. Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650