ಶಿವಮೊಗ್ಗ: ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಪ್ರಾದೇಶಿಕ ಕೇಂದ್ರದಲ್ಲಿ ನಡೆದಿದೆ ಎನ್ನಲಾದ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ, ಕೇಂದ್ರದ ನಿರ್ದೇಶಕ ಬಿ.ಎಂ. ಸ್ವಾಮಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್ ಹಾಗೂ ಪುಸ್ತಕಗಳನ್ನು ನೋಡಿಕೊಂಡು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಸಾಮೂಹಿಕ ನಕಲಿಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದ್ದವು. ಈ ಘಟನೆಯಿಂದ ವಿಶ್ವವಿದ್ಯಾಲಯದ ವರ್ಚಸ್ಸಿಗೆ ಧಕ್ಕೆಯಾದ ಹಿನ್ನೆಲೆಯಲ್ಲಿ, ಎಚ್ಚೆತ್ತ ಪರೀಕ್ಷಾಂಗ ಕುಲಸಚಿವರು ಬಿ.ಎಂ. ಸ್ವಾಮಿ ಅವರನ್ನು ತಕ್ಷಣದಿಂದಲೇ ಕರ್ತವ್ಯದಿಂದ ಬಿಡುಗಡೆಗೊಳಿಸಿ ಶಿಸ್ತುಕ್ರಮ ಜರುಗಿಸಿದ್ದಾರೆ.
ರಾಘವೇಂದ್ರ ಕುಲಕರ್ಣಿಗೆ ಹೆಚ್ಚುವರಿ ಹೊಣೆ:
ಬಿ.ಎಂ. ಸ್ವಾಮಿ ಅವರ ಅಮಾನತಿನಿಂದ ತೆರವಾದ ಶಿವಮೊಗ್ಗ ಪ್ರಾದೇಶಿಕ ಕೇಂದ್ರದ ನಿರ್ದೇಶಕರ ಸ್ಥಾನಕ್ಕೆ, ಹಾವೇರಿ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ರಾಘವೇಂದ್ರ ಕುಲಕರ್ಣಿ ಅವರನ್ನು ನೇಮಿಸಲಾಗಿದೆ. ಕೇಂದ್ರದ ದೈನಂದಿನ ಆಡಳಿತಾತ್ಮಕ ಕಾರ್ಯಗಳಿಗೆ ಯಾವುದೇ ಅಡ್ಡಿಯಾಗದಂತೆ ಅವರಿಗೆ ಈ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ರಾಜ್ಯದಲ್ಲಿ ಕೆಪಿಎಸ್‌ಸಿ (KPSC) ಪರೀಕ್ಷಾ ಗೊಂದಲಗಳ ಬೆನ್ನಲ್ಲೇ, ಶಿವಮೊಗ್ಗದ ಕೆಎಸ್‌ಓಯು ಕೇಂದ್ರದಲ್ಲೂ ಇಂತಹದ್ದೊಂದು ಅಕ್ರಮ ಬಯಲಾಗಿತ್ತು. ಇಲ್ಲಿ ಹಣ ನೀಡಿದ ಅಭ್ಯರ್ಥಿಗಳಿಗೆ ರಾಜಾರೋಷವಾಗಿ ಪುಸ್ತಕ ಹಾಗೂ ಮೊಬೈಲ್ ಬಳಸಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದವು. ಇದಕ್ಕೆ ಪುಷ್ಟಿ ನೀಡುವಂತೆ ವಿಡಿಯೋ ಕೂಡ ಬಹಿರಂಗವಾಗಿದ್ದರಿಂದ ವಿಶ್ವವಿದ್ಯಾಲಯ ಈಗ ಕಠಿಣ ಕ್ರಮ ಕೈಗೊಂಡಿದೆ.

